ಶಾಸಕ ನಂಜೇಗೌಡ ಆಯ್ಕೆ ಅಸಿಂಧು: ಮರು ಮತ ಎಣಿಕೆಗೆ ಹೈಕೋರ್ಟ್ ಆದೇಶ

highcourt
Published on

ಬೆಂಗಳೂರು: ಕೋಲಾರ ಜಿಲ್ಲೆಯ ಮಾಲೂರು ಶಾಸಕ ಕೆ.ವೈ. ನಂಜೇಗೌಡ ಅವರ ಆಯ್ಕೆಯನ್ನು ಅಸಿಂಧುಗೊಳಿಸಿರುವ ಹೈಕೋರ್ಟ್, ಮುಂದಿನ ನಾಲ್ಕು ವಾರಗಳಲ್ಲಿ ಹೊಸದಾಗಿ ಮತ ಎಣಿಕೆ ನಡೆಸಿ, ಫಲಿತಾಂಶ ಪ್ರಕಟಿಸಬೇಕು ಎಂದು ಕೇಂದ್ರ ಚುನಾವಣಾ ಆಯೋಗಕ್ಕೆ (ಸಿಇಸಿ) ನಿರ್ದೇಶಿಸಿದೆ.

ಕೆ.ವೈ. ನಂಜೇಗೌಡ ಆಯ್ಕೆ ಅನೂರ್ಜಿತಗೊಳಿಸುವಂತೆ ಕೋರಿ ಬಿಜೆಪಿಯ ಪರಾಜಿತ ಅಭ್ಯರ್ಥಿ ಕೆ.ಎಸ್. ಮಂಜುನಾಥ್ ಗೌಡ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್. ದೇವದಾಸ್ ಅವರ ಏಕಸದಸ್ಯ ಪೀಠ ಈ ಆದೇಶ ನೀಡಿದೆ. ಇದೇ ವೇಳೆ ನ್ಯಾಯಪೀಠ ಕೆ.ವೈ. ನಂಜೇಗೌಡ ಪರ ವಕೀಲರ ಮನವಿ ಮೇರೆಗೆ ಶಾಸಕ ಸ್ಥಾನ ’ಅಸಿಂಧು’ ಎಂದು ನೀಡಿರುವ ಆದೇಶಕ್ಕೆ 30 ದಿನಗಳ ಕಾಲ ಹೈಕೋರ್ಟ್ ತಡೆ ನೀಡಿದೆ.

ಈ ಅವಧಿಯಲ್ಲಿ ಶಾಸಕರು ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಬಹುದು. ಒಂದುವೇಳೆ ಸುಪ್ರೀಂಕೋರ್ಟ್‌ನಿಂದ ಯಾವುದೇ ನಿರ್ದೇಶನ ಬರದೆ ಇದ್ದರೆ ಶಾಸಕ ಸ್ಥಾನ ಅಸಿಂಧುವಾಗುತ್ತದೆ ಹಾಗೂ ಮರು ಮತಎಣಿಕೆ ನಡೆಯಲಿದೆ.

ಅದೇ ರೀತಿ, ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ತಂದರೆ ಶಾಸಕ ಸ್ಥಾನಕ್ಕೆ ಯಾವುದೇ ಸಮಸ್ಯೆಯಾಗುವುದಿಲ್ಲ. ಮಾಲೂರು ಕ್ಷೇತ್ರದ ಮತ ಎಣಿಕೆ ಕಾರ್ಯದ ದೃಶ್ಯಾವಳಿಗಳನ್ನು ಚಿತ್ರೀಕರಿಸಿ ಶೇಖರಿಸಿಟ್ಟಿರುವ ಹಾರ್ಡ್‌ಡಿಸ್ಕ್ ಅನ್ನು ಮೆ. ಐಕಿಯಾ ಬಿಸಿನೆಸ್ ಸಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್‌ನಿಂದ ಪಡೆಯಲಾಗಿದೆಯೇ, ಇಲ್ಲವೇ ಎಂಬ ಬಗ್ಗೆ ವಿವರಣೆ ನೀಡಿ, ಪ್ರಮಾಣ ಪತ್ರ ಸಲ್ಲಿಸುವಂತೆ ಕೋಲಾರ ಜಿಲ್ಲಾ ಚುನಾವಣಾಧಿಕಾರಿಯಾಗಿದ್ದ ವೆಂಕಟರಾಜು ಅವರಿಗೆ ಸೂಚನೆ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net