

ಬೀರೂರು: ರಾಜ್ಯ ಸರ್ಕಾರ ಅನುಷ್ಠಾನಗೊಳಿಸಿರುವ ಗ್ಯಾರಂಟಿ ಯೋಜನೆಗಳ ಜತೆಗೆ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.
ಹುಲ್ಲೇಹಳ್ಳಿ ಸಮೀಪ ಯಗಟಿ ರಸ್ತೆಯಲ್ಲಿ ರಾಜ್ಯ ಹೆದ್ದಾರಿ ಪ್ರಾಧಿಕಾರದಿಂದ ಮಂಜೂರಾದ 5 ಕೋಟಿ ರೂ. ವೆಚ್ಚದ ರಸ್ತೆ ವಿಸ್ತರಣೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಕೆಲವು ಗ್ರಾಮೀಣ ಭಾಗಕ್ಕೆ ತಲುಪುವ ರಸ್ತೆಗಳು ತುಂಬ ಕಿರಿದಾಗಿದ್ದು ಅವುಗಳನ್ನು ಗುರುತಿಸಿ ಈಗಾಗಲೇ 5.5 ಮೀ. ಅಗಲವಿದ್ದ ರಸ್ತೆಗಳನ್ನು 7 ಮೀಟರ್‌ವರೆಗೆ ವಿಸ್ತರಿಸಿ ವಾಹನಗಳ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಕಡೂರು ತಾಲೂಕಿನ ರಾಜ್ಯ ಹೆದ್ದಾರಿ 57 ಕೈಮರದಿಂದ ರಾಷ್ಟ್ರೀಯ ಹೆದ್ದಾರಿ 234ಕ್ಕೆ ಸೇರುವ ರಸ್ತೆ ಮಾರ್ಗ ಅತ್ತಿಗುಂಡಿ, ಕೆಮ್ಮಣ್ಣುಗುಂಡಿ, ಲಿಂಗದಹಳ್ಳಿ, ಬೀರೂರು, ಯಗಟಿ, ಸಿಂಗಟಗೆರೆ, ಶಾಣೆಗೆರೆ ರಸ್ತೆ ಕಿ.ಮೀ 71 ಕಿಮೀನಿಂದ 7150 ಕಿ.ಮೀ.ವರೆಗೆ ಮತ್ತು 76.20 ರಿಂದ 79.20 ಕಿ.ಮೀ.ವರೆಗೆ ರಸ್ತೆ ಅಭಿವೃದ್ಧಿಪಡಿಸುವ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಸರ್ಕಾರ 5 ಕೋಟಿ ರೂ. ವೆಚ್ಚದಲ್ಲಿ ರಸ್ತೆ ವಿಸ್ತರಣೆ ಕಾಮಗಾರಿಗೆ ಅನುಮೋದನೆ ನೀಡಿದೆ ಎಂದರು.
ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತದೆ. ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುವುದಿಲ್ಲ ಎಂದು ಸುಳ್ಳು ಸುದ್ದಿ ಹರಡುತ್ತಿರುವ ವಿಪಕ್ಷದವರ ಟೀಕೆಗೆ ರಾಜ್ಯದಲ್ಲಿ ಪ್ರತಿದಿನ ಆಗುತ್ತಿರುವ ಹಲವಾರು ಜನಪರ ಅಭಿವೃದ್ಧಿ ಕಾರ್ಯಗಳೇ ಸಾಕ್ಷಿಯಾಗಿವೆ ಎಂದು ಹೇಳಿದರು.
ಹುಲ್ಲೇಹಳ್ಳಿ ಗ್ರಾಪಂ ಅಧ್ಯಕ್ಷ ಲೋಕೇಶಪ್ಪ, ಸದಸ್ಯ ಮೂರ್ತಪ್ಪ, ನರಸಿಂಹಮೂರ್ತಿ, ಗ್ರಾಮಸ್ಥರಾದ ಉಮೇಶ್, ಕೆಂಚಪ್ಪ, ಬೀರೂರು ಪುರಸಭೆ ಸದಸ್ಯರಾದ ಬಿ.ಆರ್.ರವಿಕುಮಾರ್, ಬಿ.ಕೆ.ಶಶಿಧರ್, ಕಾಂಗ್ರೆಸ್ ಕಾರ್ಯಕರ್ತರಾದ ಹರ್ಷ, ವಿನಾಯಕ್, ಎಇಇ ಶಿವಮೂರ್ತಿ ಇದ್ದರು.