

ವಿಜಯವಾಣಿ ಸುದ್ದಿಜಾಲ ಹುಣಸೂರು
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಳೆದೊಂದು ತಿಂಗಳಲ್ಲಿ ತಾಲೂಕಿನ ವಿವಿಧೆಡೆ ಅತಿವೃಷ್ಟಿ ಮತ್ತು ಬಿರುಗಾಳಿಗೆ ಬೆಳೆ ಕಳೆದುಕೊಂಡಿದ್ದ ರೈತರಿಗೆ ಶಾಸಕ ಎಚ್.ಪಿ.ಮಂಜುನಾಥ್ ತಾಲೂಕು ಆಡಳಿತ ವತಿಯಿಂದ ಪರಿಹಾರದ ಚೆಕ್ ವಿತರಿಸಿದರು.
ಬಳಿಕ ಮಾತನಾಡಿದ ಅವರು, ಜೂನ್ ತಿಂಗಳ ಆರಂಭದಲ್ಲಿ ಮಳೆ ಆರಂಭವಾಗುವ ಸೂಚನೆಯಿದ್ದು, ಆರಂಭದ ದಿನಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಂಭವವಿದೆ. ಈ ವೇಳೆ ಹಾನಿಗೊಳಗಾದರೆ ತಾಲೂಕು ಆಡಳಿತ ಪರಿಹಾರ ನೀಡಲು ಮುಂದಾಗಬೇಕೆಂದು ಸೂಚಿಸಿದರು.
ತಹಸೀಲ್ದಾರ್ ಐ.ಇ.ಬಸವರಾಜ ಮಾತನಾಡಿ, ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ನಿಧಿಯಡಿ ಒಟ್ಟು 13 ಫಲಾನುಭವಿಗಳಿಗೆ ಒಟ್ಟು 1.72 ಲಕ್ಷ ರೂ.ಗಳ ಪರಿಹಾರ ನೀಡಲಾಗಿದೆ. ಒಟ್ಟು 34.02 ಎಕರೆ ವಿಸ್ತೀರ್ಣದಲ್ಲಿ ರೈತರು ಬೆಳೆದ ಬೆಳೆಗಳು ನಾಶವಾಗಿದೆ ಎಂದು ಮಾಹಿತಿ ನೀಡಿದರು.