

ಬೆಂಗಳೂರು: ಶಾಸಕರು ಶಾಸನ ರಚನೆಗೆ ತಮ್ಮದೇ ಆದ ಕೊಡುಗೆ ನೀಡಬೇಕು. ಅದು ಬಿಟ್ಟು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವುದಲ್ಲ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ಗಣಿಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ವ್ಯಕ್ತಿಯೋರ್ವನನ್ನು ಬಂಧಿಸಿದ್ದ ಪೊಲೀಸರ ಕ್ರಮ ಆಕ್ಷೇಪಿಸಿ ಠಾಣೆಗೆ ನುಗ್ಗಿ ಪೊಲೀಸರನ್ನು ನಿಂದಿಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣ ಸಂಬಂಧ ದಾಖಲಾಗಿರುವ ಎರಡು ಎಫ್‌ಐಆರ್‌ಗಳನ್ನು ಪ್ರಶ್ನಿಸಿ ಹರೀಶ್ ಪೂಂಜಾ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಅರ್ಜಿದಾರರ ಪರವಾಗಿ ವಾದ ಮಂಡಿಸಿದ ಪ್ರಭುಲಿಂಗ ನಾವಡಗಿ, ಬಿಜೆಪಿ ಯುವ ಮೋರ್ಚಾದ ಶಶಿರಾಜ್ ಶೆಟ್ಟಿ ಅವರನ್ನು ಅಕ್ರಮ ಗಣಿಗಾರಿಕೆ ಆರೋಪದಲ್ಲಿ ಪೊಲೀಸರು ಬಂಧಿಸಿ ಎಫ್‌ಐಆರ್ ದಾಖಲಿಸಿಕೊಂಡಿದ್ದರು. ಈ ಸಂಬಂಧ ಬಂಧಿತನ ಪತ್ನಿ ಅರ್ಜಿದಾರರಿಗೆ ಕರೆ ಮಾಡಿ ವಿಷಯ ತಿಳಿಸಿದರು. ಅರ್ಜಿದಾರರು ರಾತ್ರಿ 11.30ಕ್ಕೆ ಬೆಳ್ತಂಗಡಿ ಠಾಣೆಗೆ ಭೇಟಿ ನೀಡಿ ಯಾವ ಕಾರಣಕ್ಕೆ ಎಫ್‌ಐಆರ್ ಆಗಿದೆ ಎಂದು ಪ್ರಶ್ನಿಸಿದರು. ಸೂಕ್ತ ಉತ್ತರ ನೀಡಿರಲಿಲ್ಲ. ಕಾರಣದ ಧ್ವನಿ ಜೋರು ಮಾಡಿ ಮಾತನಾಡಿದ್ದರು ಎನ್ನುವುದನ್ನು ಪೀಠದ ಗಮನಕ್ಕೆ ತಂದರು.
ವಾದ ಆಲಿಸಿದ ನ್ಯಾಯಪೀಠ, ಪೊಲೀಸರು ಯಾವುದೇ ವ್ಯಕ್ತಿಯನ್ನು ಬಂಧಿಸಿದಾಗ ಸ್ಥಳೀಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮೊರೆ ಹೋಗಬಹುದು. ಅಕ್ರಮ ಬಂಧನ ಮಾಡಿದಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿ ಪರಿಹಾರ ಕಂಡುಕೊಳ್ಳಬಹುದು. ಅದೆಲ್ಲವನ್ನು ಬಿಟ್ಟು ಜನ ಪ್ರತಿನಿಧಿ ಎಂಬ ಕಾರಣಕ್ಕೆ ಠಾಣೆ ಮುಂದೆ ಪ್ರತಿಭಟಿಸುವುದು ಎಷ್ಟು ಸರಿ ಎಂದು ಖಾರವಾಗಿ ಪ್ರಶ್ನಿಸಿತು.
ಪ್ರಕರಣ ಸಂಬಂಧ ಅರ್ಜಿಯಲ್ಲಿ ಪ್ರತಿವಾದಿಯಾದ ಬೆಳ್ತಂಗಡಿ ಠಾಣಾ ಪೊಲೀಸರಿಗೆ ನೋಟಿಸ್ ಜಾರಿಗೊಳಿಸಿತು. ಮುಂದಿನ ವಿಚಾರಣೆವರೆಗೆ ಸಾವಧಾನದಿಂದ ಇರಿ. ಅರ್ಜಿದಾರರಿಗೆ ತೊಂದರೆ ಮಾಡುವುದಕ್ಕೆ ಮುಂದಾಗಬೇಡಿ ಎಂದು ವಿಚಾರಣೆ ಮುಂದೂಡಿತು.
ಭಯೋತ್ಪಾದಕನ ಬಂಧನ ಪ್ರಶ್ನಸುವಿರಾ?
ಯಾವುದೋ ವ್ಯಕ್ತಿಯನ್ನು ಬಂಧಿಸಿದಲ್ಲಿ ಜನ ಪ್ರತಿನಿಧಿಯಾದವನು ಠಾಣೆಗೆ ಹೋಗುವುದು ಎಷ್ಟು ಸರಿ? ಭಯೋತ್ಪಾದಕನನ್ನು ಪೊಲೀಸರು ಬಂಧಿಸುತ್ತಾರೆ ಎಂದಿಟ್ಟುಕೊಳ್ಳಿ. ಅವನ ಪತ್ನಿ ಬಂದು ನನ್ನ ಪತಿ ಉತ್ತಮ ವ್ಯಕ್ತಿಯಾಗಿದ್ದಾರೆ. ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂದರೆ ಜನಪ್ರತಿನಿಧಿ ಠಾಣೆಗೆ ಹೋಗಲು ಸಾಧ್ಯವೇ? ಇದನ್ನೆಲ್ಲ ಒಪ್ಪಲು ಆಗುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿತು.
ಆರೋಪಿತರ ಪರವಾಗಿ ಭಾರತದ ಯಾವುದೇ ನ್ಯಾಯಾಲಯ, ವಿದೇಶ ನ್ಯಾಯಾಲಯಗಳು ಒಂದೇ ಒಂದು ಆದೇಶ ನೀಡಿರುವ ಉದಾಹರಣೆ ಇದೆಯೇ? ಇದ್ದರೆ ಸಲ್ಲಿಸಿ, ಅದರ ಆಧಾರದಲ್ಲಿ ವಿಚಾರಣೆಗೆ ಆದೇಶಿಸಲಾಗುವುದು ಎಂದು ಪೀಠ ತಿಳಿಸಿತು.