

ಕೋಲಾರ: ಶಾಸಕರಾದ ಕೆ.ವೈ.ನಂಜೇಗೌಡ, ಕೊತ್ತೂರು ಜಿ.ಮಂಜುನಾಥ್ ಹಾಗೂ ಎಂಎಲ್ಸಿ ಎಂ.ಎಲ್.ಅನಿಲ್ ಕುಮಾರ್ ಅವರು ಶುಕ್ರವಾರ ಪೊಲೀಸ್ ಇಲಾಖೆಗೆ 2 ಬುಲೆರೊ ವಾಹನಗಳನ್ನು ಹಸ್ತಾಂತರ ಮಾಡಿದರು.
ಶಾಸಕ ಕೆ.ವೈ.ನಂಜೇಗೌಡ ಮಾತನಾಡಿ, ಇಲಾಖೆಗಳ ಪೈಕಿ ಬಹಳ ಒತ್ತಡದಲ್ಲಿ ಕಾರ್ಯನಿರ್ವಹಿಸುವುದು ಪೊಲೀಸ್ ಇಲಾಖೆ, ಜನರಿಗೆ ರಕ್ಷಣೆ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಇಂತಹ ಇಲಾಖೆಗೆ ಅಗತ್ಯ ಬೇಕಾಗಿರುವ ಮೂಲ ಸೌಲಭ್ಯಗಳನ್ನು ಒದಗಿಸಿದಾಗ ಮತ್ತಷ್ಟು ಒಳ್ಳೆ ರೀತಿ ಕೆಲಸ ಮಾಡಲು ಸಹಕಾರಿಯಾಗುತ್ತದೆ ಎಂದರು.
ಶಾಸಕ ಕೊತ್ತೂರು ಜಿ.ಮಂಜುನಾಥ್ ಮಾತನಾಡಿ, ಪೊಲೀಸ್ ಇಲಾಖೆಯು ಅತಿ ಮುಖ್ಯವಾದದ್ದು, ನಮ್ಮೆಲ್ಲರ ರಕ್ಷಣೆ ಮಾಡುವವರು, ಪ್ರತಿದಿನ ರಾತ್ರಿ ಹಗಲು ಕೆಲಸ ಮಾಡುವಂತಹವರು. ಶಾಸಕರ ಅನುದಾನದಲ್ಲಿ ವರ್ಷಕ್ಕೊಂದು ವಾಹನ ಕೊಡಲು ತೀರ್ಮಾನ ಮಾಡಿದ್ದು, ಅದರಂತೆ ಎರಡು ವಾಹನ ನೀಡಲಾಗಿದೆ. ಇದೇ ರೀತಿ ಎಲ್ಲ ತಾಲೂಕುಗಳಲ್ಲೂ ಸಹ ಶಾಸಕರು ನೀಡಿದ್ದಾರೆ ಎಂದರು.
ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಆವರಣದಲ್ಲಿ ಶಾಸಕರಿಂದ ವಾಹನಗಳನ್ನು ಸ್ವೀಕರಿಸಿ ಮಾತನಾಡಿದ ಎಸ್ಪಿ ಬಿ.ನಿಖಿಲ್, ಶಾಸಕರು ಇಲಾಖೆಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಕೊರತೆಗಳ ಮಾಹಿತಿ ಪಡೆದುಕೊಂಡು ಶಾಸಕರಾದ ಕೆ.ವೈ.ನಂಜೇಗೌಡ ಅವರು ಮಾಸ್ತಿ ಹಾಗೂ ಕೊತ್ತೂರು ಜಿ.ಮಂಜುನಾಥ್ ಅವರು ಕೋಲಾರ ಗ್ರಾಮಾಂತರ ಠಾಣೆಗೆ ವಾಹನಗಳ ಕೊಡುಗೆ ನೀಡಿರುವುದು ಇಲಾಖೆಗೆ ಸುದಿನ ಎಂದು ಹೇಳಿದರು.
ಎಂಎಲ್ಸಿ ಎಂ.ಎಲ್.ಅನಿಲ್ ಕುಮಾರ್ ಅವರು ಸಹ ಒಂದು ವಾಹನ ನೀಡುವ ಭರವಸೆ ಕೊಟ್ಟಿದ್ದಾರೆ. ಇದರಿಂದ ಜನಸೇವೆ ಮತ್ತಷ್ಟು ಪರಿಣಾಮಕಾರಿಯಾಗಿ ಮಾಡಲು ಸಹಕಾರ ಸಿಕ್ಕಿದಂತಾಗಿದೆ ಎಂದು ತಿಳಿಸಿದರು.
ಎಎಸ್ಪಿ ಜಗದೀಶ್, ರವಿಶಂಕರ್, ಡಿವೈಎಸ್ಪಿ ನಾಗ್ತೆ, ವೃತ್ತ ನಿರೀಕ್ಷ ಕಾಂತರಾಜ್ ಇದ್ದರು.