

ಶಿವಮೊಗ್ಗ: ನಗರದಲ್ಲಿ ಕಳೆದ ಕೆಲ ದಿನಗಳಿಂದ ಮಣ್ಣು ಮಿಶ್ರಿತ ಕೆಂಪು ಬಣ್ಣದ ಕಲುಷಿತ ಕುಡಿಯುವ ನೀರು ಪೂರೈಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಭಾನುವಾರ ಬೆಳಗ್ಗೆ ಶಾಸಕ ಎಸ್.ಎನ್.ಚನ್ನಬಸಪ್ಪ ಮಹಾನಗರ ಪಾಲಿಕೆ ಹಾಗೂ ಜಲಮಂಡಳಿ ಅಧಿಕಾರಿಗಳೊಂದಿಗೆ ಮಂಡ್ಲಿಯ ಕೃಷ್ಣರಾಜ ನೀರು ಶುದ್ಧೀಕರಣ ಘಟಕ ಹಾಗೂ ಗಾಜನೂರಿನ ತುಂಗಾ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಭಾರಿ ಮಳೆ ಕಾರಣದಿಂದ ತುಂಗಾ ಜಲಾಶಯದಲ್ಲಿ ಅಪಾರ ಪ್ರಮಾಣದ ಮಣ್ಣು ಮಿಶ್ರಿತ ನೀರು ಸಂಗ್ರಹವಾಗಿದೆ. ನವರಾತ್ರಿ ಹಬ್ಬದ ಸಂದರ್ಭದಲ್ಲೇ ಕಲುಷಿತ ಕುಡಿಯುವ ನೀರು ಪೂರೈಕೆಯಾಗುತ್ತಿರುವುದಕ್ಕೆ ನಾಗರೀಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಆಡಳಿತದ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಇದು ಆಡಳಿತಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು.
ಹಾಗಾಗಿ ಕೆಆರ್ ವಾಟರ್ ವರ್ಕ್ಸ್ ಮತ್ತು ತುಂಗಾ ಜಲಾಶಯಕ್ಕೆ ಭೇಟಿ ನೀಡಿದ್ದ ಶಾಸಕರಿಗೆ ನೀರಿನಲ್ಲಿ ಟರ್ಬಿಡಿಟಿ ಪ್ರಮಾಣ ಹೆಚ್ಚಾಗಿದೆ. ಶುದ್ಧೀಕರಣದ ಹೊರತಾಗಿಯೂ ಟರ್ಬಿಡಿಟಿ ಪ್ರಮಾಣ ಕಡಿಮೆಯಾಗುತ್ತಿಲ್ಲ. ಇದರಿಂದ ಕೆಂಪು ಬಣ್ಣದ ನೀರು ಪೂರೈಕೆಯಾಗುತ್ತಿದೆ ಎಂದು ಅಧಿಕಾರಿಗಳು ಮನವರಿಕೆ ಮಾಡಿಕೊಟ್ಟರು.
ಕಲುಷಿತ ನೀರು ಪೂರೈಕೆಯಾಗುತ್ತಿರುವ ಬಗ್ಗೆ ವ್ಯಾಪಕ ದೂರುಗಳು ಬರುತ್ತಿವೆ. ತಕ್ಷಣವೇ ಶುದ್ಧ ಕುಡಿಯುವ ನೀರು ಪೂರೈಕೆಗೆ ಗಮನಹರಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕೆಂದು ಶಾಸಕರು ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತೆ ಡಾ. ಕವಿತಾ ಯೋಗಪ್ಪನವರ್, ಜಲ ಮಂಡಳಿ ಎಇಇ ಮಿಥುನ್‌ಕುಮಾರ್, ಎಇ ತೇಜಸ್ವಿನಿ, ಸಿಬ್ಬಂದಿಗಳಾದ ಮೋಹನ್, ಪಾಲಿಕೆ ಎಂಜಿನಿಯರ್ ಪ್ರಿಯಾ ಸೇರಿ ಮತ್ತಿತರರು ಉಪಸ್ಥಿತರಿದ್ದರು.