ಭೀತಿ, ಹಿಂಸೆಯಿಂದ ಬಂಗಾಳಕ್ಕೆ ಬೇಕಿದೆ ಮುಕ್ತಿ: ಅರವಿಂದ್ ಬೆಲ್ಲದ ಲೇಖನ

west bengal
Published on
  • ಅರವಿಂದ್ ಬೆಲ್ಲದ

ಬಜೆಟ್ ಅಧಿವೇಶನದ ಮಧ್ಯೆ ಪಕ್ಷಕ್ಕಾಗಿ ತಳಹಂತದಲ್ಲಿ ದುಡಿಯುವ ಅವಕಾಶವೊಂದು ನನಗೆ ಅಚಾನಕ್ ಆಗಿ ಲಭಿಸಿತು. ಚುನಾವಣೆ ಎದುರಿಸುತ್ತಿರುವ ಪಂಚರಾಜ್ಯಗಳಲ್ಲಿ ನಮ್ಮ ರಾಜ್ಯದ ಶಾಸಕಮಿತ್ರರು ಈಗಾಗಲೇ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅಂಥದ್ದೇ ಒಂದು ಸುವರ್ಣ ಅವಕಾಶವನ್ನು ಪಕ್ಷ ನನಗೂ ನೀಡಿದೆ. ಕಳೆದೊಂದು ದಶಕದಿಂದ ತೃಣಮೂಲ ಕಾಂಗ್ರೆಸ್​ನ ಗೂಂಡಾಗಿರಿಯಿಂದ ಬಸವಳಿದು ಹೋಗಿರುವ ಪಶ್ಚಿಮ ಬಂಗಾಳದಲ್ಲಿ ಪಕ್ಷದ ಧ್ವಜ ಕಟ್ಟುವುದಕ್ಕೆ ಹೋಗಿ ಎಂಬ ಆದೇಶ ಸಿಕ್ಕಾಗ ಅದನ್ನು ಪಾಲಿಸುವುದರಲ್ಲಿ ಇರುವ ಸಂತೋಷವನ್ನು ವ್ಯಕ್ತಪಡಿಸುವುದಕ್ಕೆ ಪದಗಳೇ ಸಾಲದು.

ಅಂದಹಾಗೆ ಚುನಾವಣೆ ಎದುರಿಸುತ್ತಿರುವ ಪಂಚರಾಜ್ಯಗಳ ಪೈಕಿ ಪಶ್ಚಿಮ ಬಂಗಾಳ ನಾನಾ ಕಾರಣಗಳಿಂದ ಇಡೀ ರಾಷ್ಟ್ರದ ಗಮನ ಸೆಳೆದಿದೆ. ತೃಣಮೂಲ ಕಾಂಗ್ರೆಸ್​ನ ಬುಡ ಅಲುಗಾಡಿಸುವುದಕ್ಕೆ ಬಿಜೆಪಿ, ಕಾಂಗ್ರೆಸ್, ಎಡಪಕ್ಷಗಳು ಸಜ್ಜಾಗಿವೆ. ಎಲ್ಲರಿಗೂ ಒಬ್ಬರೇ ಸಮಾನ ವೈರಿ, ಆದರೆ ಒಬ್ಬರಿಗೊಬ್ಬರು ಪರಸ್ಪರ ಮಿತ್ರರಲ್ಲ. ಹೀಗಾಗಿ ದೇಶದ ಚುನಾವಣಾ ರಾಜಕಾರಣದಲ್ಲಿ ಬಂಗಾಳದ ಚುನಾವಣೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಮಾರ್ಚ್ 27ರಿಂದ ಏಪ್ರಿಲ್ 29ರವರೆಗೆ ಎಂಟು ಹಂತದಲ್ಲಿ ನಡೆಯುವ ಮತದಾನ ಕ್ಷಣ-ಕ್ಷಣಕ್ಕೂ ಕುತೂಹಲ ಸೃಷ್ಟಿಮಾಡಿದೆ.

ಬಂಗಾಳದ 294 ವಿಧಾನಸಭಾ ಕ್ಷೇತ್ರಕ್ಕೆ 2016ರಲ್ಲಿ ನಡೆದ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ 211 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಕಾಂಗ್ರೆಸ್ ಹಾಗೂ ಎಡಪಕ್ಷಗಳ ಒಕ್ಕೂಟ ಪ್ರತಿಪಕ್ಷ ಸ್ಥಾನದಲ್ಲಿತ್ತು. 2019ರ ಲೋಕಸಭಾ ಚುನಾವಣೆಯಲ್ಲಿ 42 ಸ್ಥಾನಗಳ ಪೈಕಿ ಬಿಜೆಪಿ 18 ಸ್ಥಾನಗಳಲ್ಲಿ ಗೆಲುವು ಸಾಧಿಸಿತು. ನನಗೆ ಪಶ್ಚಿಮ ಬಂಗಾಳದ 24 ಪರಗಣ ದಕ್ಷಿಣ ಜಿಲ್ಲೆಯ ಪೂರ್ವ ಹಾಗೂ ಪಶ್ಚಿಮ ಕ್ಯಾನಿಂಗ್ ಕ್ಷೇತ್ರದ ಚುನಾವಣಾ ಉಸ್ತುವಾರಿಯನ್ನು ವಹಿಸಲಾಗಿದೆ. ರಾಜ್ಯದ ಅರಣ್ಯ ಸಚಿವ ಅರವಿಂದ ಲಿಂಬಾವಳಿ ನಮ್ಮ ಜತೆಗಿದ್ದಾರೆ. ಜತೆಗೆ ಕರ್ನಾಟಕದ ಒಂದಿಷ್ಟು ಕಾರ್ಯಕರ್ತರ ಪಡೆ ಬಂಗಾಳದಲ್ಲಿ ಪಕ್ಷದ ಧ್ವಜ ಹಾರಿಸುವುದಕ್ಕೆ ಹೋರಾಟ ನಡೆಸುತ್ತಿದೆ. ನಾವು ಬಂಗಾಳಕ್ಕೆ ಬಂದ ದಿನದಿಂದಲೂ ಇಲ್ಲಿನ ಜನರ ಪರಿಪಾಟಲನ್ನು ಕಂಡು ಮರುಗುತ್ತಿದ್ದೇವೆ. ಏಕೆಂದರೆ ಅಭಿವೃದ್ಧಿ ಹಾಗೂ ಮೂಲಸೌಕರ್ಯದ ಬಗ್ಗೆ ಇಲ್ಲಿನ ಜನರು ಮಾತನಾಡುವುದನ್ನು ಬಿಟ್ಟಿದ್ದಾರೆ. ಅಷ್ಟರ ಮಟ್ಟಿಗೆ ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್ ಜನರನ್ನು ಶೋಷಿಸುತ್ತಿದೆ. ಹೀಗಾಗಿ ಇಲ್ಲಿ ಜನರ ಆಂತರ್ಯದಲ್ಲಿ ಬದಲಾವಣೆಯ ಬಯಕೆ ಮೂಡಿದೆ. ಕೇಂದ್ರ ಸರ್ಕಾರ ‘ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ’ ಅನ್ವಯ ರೈತರ ಖಾತೆಗೆ ಹಣ ಹಾಕುವುದಕ್ಕೂ ಬಿಡದಷ್ಟು ಹಠ ಹಾಗೂ ದಬ್ಬಾಳಿಕೆಯ ಪ್ರದರ್ಶನವಾಗುತ್ತಿದೆ.

ಇಲ್ಲಿಗೆ ಬಂದ ನಂತರ ಬಂಗಾಳದ ಕುರಿತಂತೆ ಸಾಕಷ್ಟು ಮಾಹಿತಿ ಸಂಗ್ರಹಿಸಿದೆ. ಅದರಲ್ಲಿ ಮೊದಲನೆಯದು ಆ ರಾಜ್ಯದ ಬಜೆಟ್ ಗಾತ್ರ. ಬಂಗಾಳದ ಬಜೆಟ್ ಗಾತ್ರ ಹೆಚ್ಚು ಕಡಿಮೆ ಕರ್ನಾಟಕದ ಬಜೆಟ್​ನಷ್ಟೇ ಇದೆ. ಆದರೆ ಅಭಿವೃದ್ಧಿ ವಿಚಾರದಲ್ಲಿ ಶೂನ್ಯ. ಎರಡು ಅವಧಿಯಿಂದ ಮಮತಾ ಬ್ಯಾನರ್ಜಿ ಅಧಿಕಾರದಲ್ಲಿದ್ದರೂ ಅಭಿವೃದ್ಧಿ ಮತ್ತು ಜನತೆಯ ಆಶೋತ್ತರಗಳ ಈಡೇರಿಕೆಗೆ ಮಾತ್ರ ಕಿಂಚಿತ್ತೂ ಗಮನ ನೀಡಿದಂತೆ ಕಾಣುವುದಿಲ್ಲ. ಹೇಳಿಕೇಳಿ ಬಂಗಾಳ ಬ್ರಿಟಿಷರು ಕಟ್ಟಿದ ಪ್ರಾಂತ್ಯ. ಮುಂಬೈ ರೀತಿಯಲ್ಲಿ ಇದು ಕೂಡ ಅಭಿವೃದ್ಧಿಯ ನಾಗಾಲೋಟದಲ್ಲಿ ಇರಬೇಕಿತ್ತು. ಬ್ರಿಟಿಷರು ಆಡಳಿತ ನಡೆಸಿದ ಪ್ರಾಂತ್ಯಗಳು ಆಗಲೇ ಅಭಿವೃದ್ಧಿ ಕಂಡವು ಎಂಬುದೂ ಮಿಥ್ಯಾಕಲ್ಪನೆ. ಬ್ರಿಟಿಷ್ ಆಡಳಿತಕ್ಕೆ ಒಳಪಟ್ಟ ಪ್ರಾಂತ್ಯದಲ್ಲಿ ಎಲ್ಲೆಲ್ಲಿ ಬ್ರಿಟಿಷರು ವಾಸ್ತವ್ಯ ಹೂಡಿದ್ದರೋ ಅಂಥ ಸ್ಥಳಗಳು ಮಾತ್ರ ಅಭಿವೃದ್ಧಿ ಕಂಡಿವೆ. ಆದರೆ ಮಹಾರಾಜರ ಆಳ್ವಿಕೆ ಕಂಡಿದ್ದ ಸಂಸ್ಥಾನಗಳಲ್ಲಿ ಅಭಿವೃದ್ಧಿ ಕಾರ್ಯಗಳು ಭರದಿಂದ ನಡೆದಿದ್ದವು. ಮಹಾರಾಜರುಗಳ ಆಡಳಿತಕ್ಕೆ ಒಳಪಟ್ಟ ಮೈಸೂರು, ತಂಜಾವೂರು, ಬರೋಡಾ, ಜೈಪುರ ಪ್ರಾಂತ್ಯಗಳು ಹೆಚ್ಚು ವಿಕಾಸ ಹೊಂದಿರುವುದನ್ನು ಗಮನಿಸಿದರೆ ಬ್ರಿಟಿಷ್ ಆಡಳಿತಕ್ಕೆ ಪಕ್ಕಾದ ರಾಜ್ಯಗಳಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ನಗರ ನಿರ್ಮಾಣ ನಡೆದಿತ್ತು ಎಂಬ ವಾದವೇ ಸುಳ್ಳು ಎಂದೆನಿಸುತ್ತದೆ. ‘ಬಂಗಾಳ ಇಂದು ಯೋಚಿಸಿದ್ದನ್ನು ಭಾರತ ಇನ್ನೆಂದೋ ಯೋಚಿಸುತ್ತದೆ’ ಎಂಬುದು ಪಟ್ಟಭದ್ರರು ಹೆಣೆದ ಕಥೆಯಷ್ಟೆ.

ಇನ್ನು ಚುನಾವಣಾ ವಿಚಾರಕ್ಕೆ ಬರೋಣ, 24 ಪರಗಣ ಜಿಲ್ಲೆ ದಕ್ಷಿಣದಲ್ಲೂ ಬಡತನದ ಛಾಯೆ ದಟ್ಟವಾಗಿದೆ. ಈ ಜಿಲ್ಲೆಗೆ ಜಿಲ್ಲಾ ಹೆಡ್​ಕ್ವಾಟ್ರರ್ಸ್ ಇಲ್ಲ. ಆಡಳಿತಾತ್ಮಕವಾದ ಪ್ರತಿಯೊಂದು ವಿಚಾರಕ್ಕೂ ಕೋಲ್ಕತ್ತವನ್ನೇ ನೆಚ್ಚಿಕೊಳ್ಳಬೇಕು. ಇದು ಕೂಡ ಬ್ರಿಟಿಷ್ ಆಡಳಿತಾನುಕೂಲಕ್ಕೆ ರಚನೆಯಾದ ಜಿಲ್ಲೆ. ಪೂರ್ವ ಹಾಗೂ ಪಶ್ಚಿಮ ಕ್ಯಾನಿಂಗ್ ಕ್ಷೇತ್ರ ಆಂಗ್ಲ ಅಧಿಕಾರಿ ಲಾರ್ಡ್ ಕ್ಯಾನಿಂಗ್ ಹೆಸರಿನಲ್ಲಿ ರಚನೆಯಾಗಿದೆ. ಪೂರ್ವ ಕ್ಯಾನಿಂಗ್ ಕ್ಷೇತ್ರದಲ್ಲಿ ತೃಣಮೂಲ ಕಾಂಗ್ರೆಸ್ ಹೊರತುಪಡಿಸಿ ಉಳಿದ ರಾಜಕೀಯ ಪಕ್ಷಗಳು ಉಸಿರು ಬಿಡಲು ಸಾಧ್ಯವಾಗದಂಥ ವಾತಾವರಣವಿದೆ. ಆದರೆ ಪಶ್ಚಿಮ ಕ್ಯಾನಿಂಗ್ ಪರಿಸ್ಥಿತಿ ಸ್ವಲ್ಪ ಭಿನ್ನ. ಪೂರ್ವ ಕ್ಯಾನಿಂಗ್ ಕ್ಷೇತ್ರದಲ್ಲಿ ಶೇಕಡ 70ರಷ್ಟು ಜನರು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರು. ಹಿಂದೂಗಳು ಇಲ್ಲಿ ಅಕ್ಷರಶಃ ಭೀತಿಯಲ್ಲೇ ಬದುಕುತ್ತಿದ್ದಾರೆ. ಇಡೀ ಕ್ಷೇತ್ರದಲ್ಲಿ ಹಿಂದೂಗಳ ಪಾಲಿಗೆ ಅಸಹನೀಯ ವಾತಾವರಣವಿದೆ. ಯಾವ ಕ್ಷಣದಲ್ಲಿ ಏನಾಗುತ್ತದೋ ಎಂಬ ಆತಂಕ ಸದಾ ಬೆನ್ನಿಗೆ ಅಂಟಿರುತ್ತದೆ.

ಇದರ ಪ್ರತ್ಯಕ್ಷ ಅನುಭವ ನನಗೆ ಚುನಾವಣಾ ಪ್ರಚಾರ ಸಂದರ್ಭದಲ್ಲಾಯ್ತು. ಪೂರ್ವ ಕ್ಯಾನಿಂಗ್​ನಲ್ಲಿ ಬಿಜೆಪಿ ಪರ ಧ್ವಜ ಕಟ್ಟಿ ಸಭೆ ಆಯೋಜಿಸಿದ ವ್ಯಕ್ತಿಯ ಮನೆಯನ್ನು ಮರುದಿನವೇ ತೃಣಮೂಲ ಕಾಂಗ್ರೆಸ್​ನ ಗೂಂಡಾಗಳು ಕೆಡವಿ ಹಾಕಿದರು. ನಮಗೆ ಆಶ್ರಯ ಕೊಟ್ಟ ಆ ಕಾರ್ಯಕರ್ತ ಬಂಧುವನ್ನು ಹೀನಾಯವಾಗಿ ನಡೆಸಿಕೊಂಡರು. ಆತ ಹೇಳುವ ಪ್ರಕಾರ, ‘ಇಲ್ಲಿ ಟಿಎಂಸಿ ಬಿಟ್ಟರೆ ಬೇರೆ ಯಾವುದೇ ಪಕ್ಷದ ಧ್ವಜ ಕಟ್ಟುವಂತಿಲ್ಲ. ಇದು ಇಲ್ಲಿಯ ಅಲಿಖಿತ ನಿಯಮ’. ಈ ಹಿಂದೆ ಬೇರೆ ಪಕ್ಷದ ಪರ ಕೆಲಸ ಮಾಡಿದ ವ್ಯಕ್ತಿಗಳ ಬೆನ್ನಿನ ಚರ್ಮವನ್ನೇ ಕಿತ್ತು ಹಾಕುವಷ್ಟು ದುರುಳತನವನ್ನು ಮಮತಾ ಬ್ಯಾನರ್ಜಿ ಕೃಪಾಪೋಷಿತ ಗೂಂಡಾಪಡೆ ನಡೆಸಿದೆ. ಇಲ್ಲಿ ನಮ್ಮ ಪಕ್ಷದ ಪುಟ್ಟ ಕಚೇರಿ ಇದೆ. ಎಂಟು ಅಡಿ ಉದ್ದ-ಅಗಲದಲ್ಲಿ ತಾತ್ಕಾಲಿಕವಾಗಿ ಕಟ್ಟಿಕೊಳ್ಳಲಾಗಿದೆ. ಈ ಕ್ಷೇತ್ರದಲ್ಲಿ ಟಿಎಂಸಿಯ 80 ಗೂಂಡಾಗಳು ಪ್ರತಿ ದಿನ ನಲವತ್ತು ಬೈಕ್​ಗಳಲ್ಲಿ ತೆರಳಿ ಮತದಾರರಿಗೆ ಹಾಗೂ ನಮ್ಮ ಪಕ್ಷದ ಕಾರ್ಯಕರ್ತರಿಗೆ ಬೆದರಿಕೆ ಹಾಕುತ್ತಿದ್ದಾರೆ. ದಿನ ಬೆಳಗಾದರೆ ಅವರದು ಇದೇ ವೃತ್ತಿ. ‘ಈಗೇನೋ ಸಿಆರ್​ಪಿಎಫ್​ನವರು ಇದ್ದಾರೆ. ಓಡಾಡಿ, ಚುನಾವಣೆ ಮುಗಿದ ಮೇಲೆ ನಿಮ್ಮನ್ನು ನೋಡಿಕೊಳ್ಳುತ್ತೇವೆ ’ ಎಂದು ಬೆದರಿಕೆ ಹಾಕಲಾಗುತ್ತಿದೆ. ಇನ್ನು ಪಶ್ಚಿಮ ಕ್ಯಾನಿಂಗ್​ನ ಎರಡೂ ಬ್ಲಾಕ್​ಗಳಲ್ಲೂ ಇದೇ ಪರಿಸ್ಥಿತಿ. ಬಂಗಾಳದ ಇತರ ಕ್ಷೇತ್ರಗಳ ರೀತಿಯಲ್ಲಿ ಇಲ್ಲಿಯೂ ಬೂತ್ ಕ್ಯಾಪ್ಚರಿಂಗ್ ಭೀತಿ ದಟ್ಟವಾಗಿದ್ದು ತೃಣಮೂಲ ಕಾಂಗ್ರೆಸ್ ಗೂಂಡಾಗಿರಿಗೆ ಕೊನೆ ಯಾವಾಗ ಜನ ಪ್ರಶ್ನಿಸುತ್ತಿದ್ದಾರೆ.

ಬಂಗಾಳದಲ್ಲಿ ಬಡತನ ತೀವ್ರವಾಗಿದೆ. ನಮ್ಮ ರಾಜ್ಯದಲ್ಲಿನ ಒಂದು ದಿನದ ಚುನಾವಣಾ ವೆಚ್ಚದಲ್ಲಿ ಇಲ್ಲಿ ಪೂರ್ತಿ ಚುನಾವಣೆ ನಡೆಸಬಹುದು. ಚುನಾವಣೆ ಇಲ್ಲಿಯ ಜನರ ಪಾಲಿಗೆ ಹಬ್ಬವಾಗಿ ಉಳಿದಿಲ್ಲ. ಬದಲಾಗಿ ಅದು ಭೀತಿಯ ಮೆರವಣಿಗೆ. ಈ ಕಾರಣಕ್ಕಾಗಿಯೇ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಷಾ ಬಂಗಾಳದಲ್ಲಿ ಪ್ರಜಾಪ್ರಭುತ್ವವನ್ನು ಮತ್ತೆ ಪ್ರತಿಷ್ಠಾಪಿಸುವ ಪ್ರತಿಜ್ಞೆ ತೊಟ್ಟಿದ್ದಾರೆ. ಖುದ್ದು ಇವರಿಬ್ಬರೂ ಪ್ರಚಾರ ಕಣಕ್ಕೆ ಇಳಿದಿರುವುದರಿಂದ ರಾಷ್ಟ್ರದ ಗಮನವೆಲ್ಲವೂ ಪಶ್ಚಿಮ ಬಂಗಾಳದ ಮೇಲೆ ನೆಟ್ಟಿದೆ. ಒಂದಿಷ್ಟು ವರ್ಷ ಕಾಂಗ್ರೆಸ್, ಇನ್ನೊಂದಿಷ್ಟು ವರ್ಷ ಎಡಪಂಥೀಯರು, ಆಮೇಲೆ ತೃಣಮೂಲ ಕಾಂಗ್ರೆಸ್ ದಬ್ಬಾಳಿಕೆಗೆ ಸಿಲುಕಿರುವ, ಅದಕ್ಕೂ ಮುನ್ನ ಬ್ರಿಟಿಷರ ಸುಲಿಗೆಗೆ ಒಳಪಟ್ಟಿರುವ ಬಂಗಾಳಕ್ಕೆ ನಿಜಕ್ಕೂ ಬಿಡುಗಡೆ ಬೇಕಿದೆ. ಬಂಗಾಳದ ಮುಕ್ತಿಗಾಗಿ ಬಿಜೆಪಿಯ ಕಾರ್ಯಕರ್ತರು ಪ್ರಾಣವನ್ನೇ ಪಣಕ್ಕೊಡ್ಡಿ, ಹೋರಾಟ ನಡೆಸುತ್ತಿದ್ದಾರೆ. ನೊಂದ ಜನರು ಭಯದ ಬವಣೆಯಿಂದ ಬಿಡುಗಡೆ ಪಡೆಯುವಂತಾಲಿ ಎಂಬುದೇ ನನ್ನ ಸದಾಶಯ.

(ಲೇಖಕರು ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಶಾಸಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net