

ಮಾಗಡಿ : ಕೋವಿಡ್ ನಿಯಂತ್ರಣಕ್ಕೆ ಶ್ರಮಿಸುತ್ತಿರುವ ಆರೋಗ್ಯ ಇಲಾಖೆ ನೌಕರರು, ವೈದ್ಯರು, ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ ಅಭಿನಂದಿಸಲು ಕಾರ್ಯಕ್ರಮ ರೂಪಿಸುವುದಾಗಿ ಶಾಸಕ ಎ.ಮಂಜುನಾಥ್ ಹೇಳಿದರು.ತಾಲೂಕಿನ ಮಾಡಬಾಳ್ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ನಡೆದ ಕೋವಿಡ್ ಟಾಸ್ಕ್‌ಪೋರ್ಸ್ ಸಭೆಯಲ್ಲಿ ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸ್ಕ್ , ಸ್ಯಾನಿಟೈಸರ್ ವಿತರಿಸಿ ಮಾತನಾಡಿದರು.
ತಾಲೂಕಿನಲ್ಲಿ ಕರೊನಾ ಪಾಸಿಟಿವ್ ಪ್ರಕರಣ ಶೂನ್ಯವಾಗಿದೆ ಎಂದು ನಾಗರಿಕರು ಸುಖಾಸುಮ್ಮನೆ ಓಡಾಡಬೇಡಿ, ಜನರ ಕಾಳಜಿ, ಸರ್ಕಾರದ ಮಾರ್ಗಸೂಚಿ ಪಾಲಿಸುವುದನ್ನು ನಿರ್ಲಕ್ಷ್ಯ ಮಾಡದಿರಿ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸೋಂಕಿನ ಪ್ರಕರಣ, ಲಕ್ಷಣಗಳು ಕಂಡು ಬಂದರೆ ಮುಲಾಜಿಲ್ಲದೆ ಸೋಂಕಿತರು ಹೋಂ ಐಸೋಲೇಷನ್ ಆಗಲು ಬಿಡದೆ ಕೋವಿಡ್ ಸೆಂಟರ್‌ಗೆ ದಾಖಲಿಸಿ ಎಂದು ಕಾರ್ಯಪಡೆ ಸಿಬ್ಬಂದಿಗೆ ಸೂಚಿಸಿದರು.
ಹುಲಿಕಟ್ಟೆ ಕ್ವಾರಂಟೈನ್ ಕೇಂದ್ರಕ್ಕೆ ವೆಲ್‌ಕಂ ಕಿಟ್ ನೀಡಿ, ಕೇಂದ್ರದ ಶೌಚಗೃಹ, ಡೈನಿಂಗ್ ಹಾಲ್, ಸ್ನಾನದ ಗೃಹಗಳನ್ನು ಪ್ರತಿದಿನ ಪಂಚಾಯಿತಿ ವತಿಯಿಂದ ಸ್ವಚ್ಛಗೊಳಿಸಿ. ಪಂಚಾಯಿತಿ ಕೆಲಸದ ಜತೆ ಕೋವಿಡ್ ಕೇಂದ್ರದ ನಿರ್ವಹಣೆಗೂ ಗಮನ ಹರಿಸಬೇಕು. ಲೋಪದೋಷ ಕಂಡುಬಂದರೆ ಅಗಲಕೋಟೆ ಪಿಡಿಒ ಮತ್ತು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಕುಮಾರಸ್ವಾಮಿಯವರೇ ಹೊಣೆಗಾರರಾಗುತ್ತೀರಾ ಎಂದು ಶಾಸಕ ಎ.ಮಂಜುನಾಥ್ ಎಚ್ಚರಿಕೆ ನೀಡಿದರು.
ಮಾಡಬಾಳ್ ಗ್ರಾಮದಲ್ಲಿ ಆರೋಗ್ಯ ಕೇಂದ್ರ ಸ್ಥಾಪಿಸಲು ಎರಡು ಎಕರೆ ಸರ್ಕಾರಿ ಭೂಮಿಯನ್ನು ಗುರುತಿಸಿ, ಇಲ್ಲವೆ ದಾನಿಗಳು ನೀಡಿದರೆ, ಸುಸಜ್ಜಿತ ಹೈಟೆಕ್ ಆಸ್ಪತ್ರೆ ನಿರ್ಮಾಣಕ್ಕೆ ಸುಸರ್ಜಿತ ಹೈಟೆಕ್ ಆರೋಗ್ಯ ಕೇಂದ್ರಕ್ಕೆ ಗುದ್ದಲಿಪೂಜೆ ನೆರವೇರಿಸಲಾಗುವುದು ಎಂದು ಪಿಡಿಒ ಮತ್ತು ಕಂದಾಯ ಇಲಾಖೆ ವೆಂಕಟೇಶ್‌ಗೆ ಸೂಚಿಸಿದರು. ತಹಸೀಲ್ದಾರ್ ಬಿ.ಜಿ. ಶ್ರೀನಿವಾಸ್ ಪ್ರಸಾದ್, ತಾಪಂ ಇಒ ಟಿ. ಪ್ರದೀಪ್, ಸಿಡಿಪಿಒ ಸುಧೀಂದ್ರ, ಬಿಎಂಆರ್‌ಡಿಎ ಮಾಜಿ ಅಧ್ಯಕ್ಷ ಕೆ.ಕೃಷ್ಣಮೂರ್ತಿ, ಮುಂತಾದವರು ಇದ್ದರು.