ಪುತ್ತೂರಿನ 10 ರೂ. ಡಾಕ್ಟರ್ ಎಂ.ಕೆ. ಪ್ರಸಾದ್‌ಗೆ ಪ್ರತಿಷ್ಠಿತ ಐಎಂಎ - ಕೆಎಸ್‌ಬಿ ಡಾಕ್ಟರ್ಸ್‌ ಡೇ ಪ್ರಶಸ್ತಿ

ptr_22 aug prasad
ಪುತ್ತೂರಿನ ವೈದ್ಯ ಡಾ. ಎಂ.ಕೆ. ಪ್ರಸಾದ್ ಅವರಿಗೆ ವೈದ್ಯಕೀಯ ಕ್ಷೇತ್ರದ ಸಾಧಕರಿಗೆ ನೀಡುವ ಪ್ರತಿಷ್ಠಿತ ಐಎಂಎ - ಕೆಎಸ್‌ಬಿ ಡಾಕ್ಟರ್ಸ್‌ ಡೇ ಪ್ರಶಸ್ತಿಯನ್ನು ಪುತ್ತೂರಿನಲ್ಲಿ ಪ್ರದಾನ ಮಾಡಲಾಯಿತು.
Published on

ಪುತ್ತೂರು: ಪುತ್ತೂರಿನ ವೈದ್ಯ ಡಾ. ಎಂ.ಕೆ. ಪ್ರಸಾದ್ ಅವರಿಗೆ ವೈದ್ಯಕೀಯ ಕ್ಷೇತ್ರದ ಸಾಧಕರಿಗೆ ನೀಡುವ ಪ್ರತಿಷ್ಠಿತ ಐಎಂಎ - ಕೆಎಸ್‌ಬಿ ಡಾಕ್ಟರ್ಸ್‌ ಡೇ ಪ್ರಶಸ್ತಿಯನ್ನು ಪುತ್ತೂರಿನಲ್ಲಿ ಪ್ರದಾನ ಮಾಡಲಾಯಿತು. ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಪುತ್ತೂರು ಇದರ ಆಶ್ರಯದಲ್ಲಿ ಪುತ್ತೂರು ಮಹಾವೀರ ವೆಂಚರ್ಸ್‌ನಲ್ಲಿ ನಡೆದ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಐಎಂಎ-ಕೆಎಸ್‌ಬಿಯ ರಾಜ್ಯ ಪದಾಧಿಕಾರಿಗಳು ಪ್ರಶಸ್ತಿ ಪ್ರದಾನ ಮಾಡಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ಎಂ.ಕೆ. ಪ್ರಸಾದ್‌ರವರು, ಆಹಾರ, ಓದು, ಹಾಸ್ಟೆಲ್ ಸೇರಿದಂತೆ ಒಟ್ಟು 15 ಸಾವಿರ ರೂ.ನಲ್ಲಿ ವೈದ್ಯಕೀಯ ವ್ಯಾಸಂಗವನ್ನು ಪೂರ್ಣಗೊಳಿಸಿದ್ದೆ. ತಾನೇನು ಬುದ್ಧಿವಂತ ವಿದ್ಯಾರ್ಥಿ ಆಗಿರಲಿಲ್ಲ. ಕೊನೆ ಕ್ಷಣದಲ್ಲಿ ವೈದ್ಯಕೀಯ ಸೀಟು ಸಿಗುವಂತಾಯಿತು. ವಿದ್ಯಾಭ್ಯಾಸದ ಬಳಿಕ ತೀರಾ ಹಳ್ಳಿ ಪ್ರದೇಶವಾದ ಸಿದ್ಧಾಪುರದಲ್ಲಿ ಕೆಲಸ ಮಾಡುತ್ತಾ, ಎಂ.ಎಸ್. ಪದವಿಯನ್ನು ಪೂರೈಸಿದೆ. ಎಂ.ಎಸ್. ಪದವಿಯನ್ನು ಸರ್ಕಾರದ ಹಣದಲ್ಲೇ ಓದುವಂತಾಯಿತು. ಇದರಿಂದಾಗಿ 10 ರೂ. ಚಿಕಿತ್ಸಾ ಶುಲ್ಕ ಪಡೆಯಲು ನಿರ್ಧರಿಸಿದೆ ಎಂದರು.
ಪ್ರಶಸ್ತಿ ಪ್ರದಾನ ಮಾಡಿದ ಐಎಂಎ ಕೆಎಸ್‌ಬಿ ಅಧ್ಯಕ್ಷ ಡಾ. ಸುರೇಶ್ ಕುಡ್ವ ಮಾತನಾಡಿ, ಹತ್ತೂರಿನಲ್ಲಿ ಪುತ್ತೂರಿನ ಹೆಸರನ್ನು ಪಸರಿಸಿದ, ಪುತ್ತೂರಿನ ಮುತ್ತು ಡಾ. ಎಂ.ಕೆ. ಪ್ರಸಾದ್ ಅವರು. ನಾನು ಹಲವು ಊರು ಸುತ್ತಿದ್ದೇನೆ. ಹಲವು ವೈದ್ಯರನ್ನು ಸಂಪರ್ಕಿಸಿದ್ದೇನೆ. ಅವರಲ್ಲಿ ಗುರುತಿಸಬಹುದಾದ ವೈದ್ಯರೆಂದರೆ ಅದು ಡಾ. ಎಂ.ಕೆ. ಪ್ರಸಾದ್. ಇವರಿಗೆ ಬೆಂಗಳೂರಿನಲ್ಲಿ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆಯವರು ಪ್ರಶಸ್ತಿ ಪ್ರದಾನ ಮಾಡಬೇಕಿತ್ತು. ಆದರೆ ಪುತ್ತೂರಿನ ಮಣ್ಣಿನ ಮಗನನ್ನು ಪುತ್ತೂರಿನಲ್ಲಿಯೇ ಸನ್ಮಾನ ಮಾಡುವಂತಾಯಿತು ಎಂದರು.
ಐಎಂಎ ಪುತ್ತೂರು ಘಟಕದ ಅಧ್ಯಕ್ಷ ಡಾ. ನರಸಿಂಹ ಶರ್ಮ ಕಾನಾವು ಅಧ್ಯಕ್ಷತೆ ವಹಿಸಿದ್ದರು. ಐಎಂಎ ಕೆಎಸ್‌ಬಿಯ ಉಪಾಧ್ಯಕ್ಷ ಡಾ. ಕೆ.ಆರ್. ಕಾಮತ್, ಪಿಆರ್‌ಓ ಡಾ. ಜಿ.ಕೆ. ಭಟ್ ಸಂಕಬಿತ್ತಿಲು ಇದ್ದರು.
ಐಎಂಎ ಪುತ್ತೂರು ಘಟಕದ ಕಾರ್ಯದರ್ಶಿ ಡಾ. ಗಣೇಶ್ ಪ್ರಸಾದ್ ಮುದ್ರಾಜೆ ಸ್ವಾಗತಿಸಿ, ಕೋಶಾಧಿಕಾರಿ ಡಾ. ಅಶೋಕ್ ಜಿ.ಕೆ. ವಂದಿಸಿದರು. ಡಾ. ಅನಿಲ್ ಹಾಗೂ ಡಾ. ಸುಲೇಖಾ ವರದರಾಜ್ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net