

ಐಜ್ವಾಲ್: ವಿದ್ಯಾರ್ಥಿಗಳು ಹಾಗೂ ಸರ್ಕಾರದ ನಡುವಿನ ಸೆಣಸಾಟದಲ್ಲಿ ಕೊನೆಗೂ ವಿದ್ಯಾರ್ಥಿಗಳು ಜಯ ಗಳಿಸಿದ್ದಾರೆ. ಕಳೆದ ಕೆಲ ದಿನಗಳಿಂದ ಭಾರಿ ವಿವಾದ ಹಾಗೂ ಚರ್ಚೆಗೆ ಕಾರಣವಾಗಿದ್ದ ಪಿಯುಸಿ ಪರೀಕ್ಷೆಯನ್ನು ಮುಂದೂಡಲು ಮಿಜೋರಾಂ ಸರ್ಕಾರ ಒಪ್ಪಿಕೊಂಡಿದೆ.
ಹೈಯರ್ ಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೆಟ್ (ಎಚ್ಎಸ್ಎಸ್ಎಲ್ಸಿ- ಅಂದರೆ ನಮ್ಮಲ್ಲಿನ ಪಿಯುಸಿ) ಪರೀಕ್ಷೆಯನ್ನು ಮುಂದಿನ ಆದೇಶದವರೆಗೆ ಮುಂದೂಡಲಾಗಿದೆ ಎಂದು ಮಿಜೋರಾಂ ಪ್ರೌಢ ಶಿಕ್ಷಣ ಮಂಡಳಿ ಪ್ರಕಟಿಸಿದೆ.
ಕರೊನಾ ಸಂಕಷ್ಟದ ಹಿನ್ನೆಲೆಯಲ್ಲಿ ಕೇಂದ್ರದ ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸುವುದು ಅನಿವಾರ್ಯವಾದ ಕಾರಣ ಪರೀಕ್ಷೆಯನ್ನು ಮುಂದೂಡಲಾಗಿದೆ ಎಂದು ಮಂಡಳಿ ಹೊರಡಿಸಿರುವ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಲಾಕ್ಡೌನ್ ಹಿನ್ನೆಲೆಯಲ್ಲಿ ಎಚ್ಎಸ್ಎಸ್ಎಲ್ಸಿ ಮೂರು ವಿಷಯಗಳ ಪರೀಕ್ಷೆ ಬಾಕಿ ಉಳಿದಿದೆ. ಇದಕ್ಕಾಗಿ ಏಪ್ರಿಲ್ 22ರಿಂದ 24ರವರೆಗೆ ಪರೀಕ್ಷೆ ನಡೆಸುವುದಾಗಿ ಶಿಕ್ಷಣ ಸಚಿವ ಲಾಲ್ಚಂದ್ಮಾ ರಾಲ್ಟೆ ಘೋಷಿಸಿದ್ದರು. ಆದರೆ, ಇದಕ್ಕೆ ವಿದ್ಯಾರ್ಥಿಗಳಿಂದ ತೀವ್ರ ವಿರೋಧ ಎದುರಾಗಿತ್ತು. ನೋ ಎಕ್ಸಾಂ, ನೋ ರಿಸ್ಕ್ ಎಂದು ಆನ್ಲೈನ್ನಲ್ಲಿ ಅಭಿಯಾನವನ್ನು ಆರಂಭಿಸಿದ್ದರು. ಬೇರೆಡೆ ತೆರಳಿರುವ ವಿದ್ಯಾರ್ಥಿಗಳಿಗೆ ಇದರಿಂದ ತೊಂದರೆಯಾಗಲಿದೆ ಎಂದು ಆಕ್ಷೇಪಿಸಿದ್ದರು.
ಮಿಜೋರಾಂನಲ್ಲಿ ಈವರೆಗೆ ಕೇವಲ ಒಂದು ಕೋವಿಡ್ ಪ್ರಕರಣವಷ್ಟೇ ವರದಿಯಾಗಿದೆ. ಉಳಿದಂತೆ ಕ್ವಾರಂಟೈನ್ 768 ಜನರನ್ನು ಇರಿಸಲಾಗಿತ್ತು. ಆ ಪೈಕಿ 588 ಜನರು ಕ್ವಾರಂಟೈನ್ ಅವಧಿ ಪೂರೈಸಿದ್ದು, ಯಾರಲ್ಲೂ ಸೋಂಕು ಕಾಣಿಸಿಕೊಂಡಿಲ್ಲ. ಹೀಗಾಗಿ ಮಿಜೋರಾಂ ಬಹುತೇಕ ಕರೊನಾ ಮುಕ್ತವಾಗಿದೆ. ಈ ಕಾರಣಕ್ಕಾಗಿ ಪರೀಕ್ಷೆ ನಡೆಸಲು ಸರ್ಕಾರ ನಿರ್ಧರಿಸಿತ್ತು.