ಕಾನೂನಿಗೆ ಪರ-ವಿರೋಧ: ಹಲವು ಕಡೆ ಉಪವಾಸ, ಬಿಜೆಪಿಯಿಂದ ಜಾಗೃತಿ ಅಭಿಯಾನ..

Nation Lead
ಪಂಜಾಬ್​ನ ಪಟಿಯಾಲದಲ್ಲಿ ಸೋಮವಾರ ಪ್ರತಿಭಟನಾ ನಿರತ ರೈತರು.
Published on
ಕೃಷಿ ಸಂಬಂಧಿತ ಹೊಸ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟಿಸುತ್ತಿರುವ ರೈತರು ದೆಹಲಿ ಸೇರಿದಂತೆ ದೇಶಾದ್ಯಂತ ಹಲವು ಕಡೆ ಉಪವಾಸ ಸತ್ಯಾಗ್ರಹ ನಡೆಸುವ ಮೂಲಕ ಹೋರಾಟ ತೀವ್ರಗೊಳಿಸಿದ್ದಾರೆ. ಈ ಮಧ್ಯೆ, ಹೊಸ ಕಾಯ್ದೆಗಳಿಗೆ ರೈತರ ಹಲವು ಸಂಘಟನೆಗಳು ಬೆಂಬಲ ನೀಡಿದ್ದು, ರೈತರ ಹೋರಾಟ ಪರ-ವಿರೋಧ ದಿಕ್ಕಿನಲ್ಲಿ ಸಾಗುತ್ತಿದೆ.

ನವದೆಹಲಿ: ಕೃಷಿ ಸಂಬಂಧಿತ 3 ಹೊಸ ಕಾಯ್ದೆಗಳನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ರೈತರು ದೆಹಲಿ ಸೇರಿದಂತೆ ದೇಶಾದ್ಯಂತ ಬಹುತೇಕ ಜಿಲ್ಲಾ ಕೇಂದ್ರಗಳಲ್ಲಿ ಸೋಮವಾರ 9 ತಾಸು ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕೂಡ ಉಪವಾಸ ನಿರಶನದಲ್ಲಿ ಭಾಗಿಯಾಗಿದ್ದರು. ರೈತ ಸಂಘಟನೆಗಳ 33 ಮುಖಂಡರು ಸಿಂಘು ಗಡಿಯಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದರು. ಈ ನಡುವೆ, ದೆಹಲಿ-ಜೈಪುರ ಹೆದ್ದಾರಿ ಮೂಲಕ ದೆಹಲಿಯೊಳಗೆ ಪ್ರವೇಶಿಸಲು ಯತ್ನಿಸಿದ ಹರಿಯಾಣದ ರೈತರು ಹಾಗೂ ಪೊಲೀಸರ ಮಧ್ಯೆ ಕೆಲ ಕಾಲ ಘರ್ಷಣೆ ನಡೆದಿದೆ. ತಮ್ಮನ್ನು ತಡೆದಿದ್ದಕ್ಕೆ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದಾಗ ಪೊಲೀಸರು ಅವರ ಟ್ರಾ್ಯಕ್ಟರ್​ಗಳ ಕೀಗಳನ್ನು ಕಿತ್ತುಕೊಂಡು ಸುಮಾರು 20ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದಾರೆ. ಬಂಧಿತರನ್ನು ಬಿಡುಗಡೆ ಮಾಡಿ ಎಂದು ಆಗ್ರಹಿಸಿ ರೈತರು ಪ್ರತಿಭಟನೆ ಮುಂದುವರಿಸಿದ್ದಾರೆ. ಈ ಮಧ್ಯೆ, ಉತ್ತರ ಪ್ರದೇಶದ ಹಲವೆಡೆ ಕೃಷಿ ಕಾಯ್ದೆ ಬಗ್ಗೆ ಬಿಜೆಪಿ ಜಾಗೃತಿ ಅಭಿಯಾನ ನಡೆಸಿದೆ. ಮಧ್ಯಪ್ರದೇಶದಲ್ಲಿ ಮಂಗಳವಾರ ರೈತರ ಜತೆ ಸಭೆಯನ್ನು ಏರ್ಪಡಿಸಿದ್ದು, ಹೊಸ ಕೃಷಿ ಕಾನೂನುಗಳ ಬಗ್ಗೆ ಮನವರಿಕೆ ಮಾಡಿಕೊಡಲಿದೆ.

10 ಸಂಘಟನೆಗಳು ಕಾಯ್ದೆ ಪರ: ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿಯೊಂದಿಗೆ ಸಂಯೋಜಿತವಾಗಿರುವ ಉತ್ತರ ಪ್ರದೇಶ, ಕೇರಳ, ತಮಿಳುನಾಡು, ತೆಲಂಗಾಣ, ಬಿಹಾರ ಮತ್ತು ಹರಿಯಾಣ ಸೇರಿದಂತೆ ಹಲವು ರಾಜ್ಯಗಳ 10 ರೈತ ಸಂಘಟನೆಗಳು ನೂತನ ಕೃಷಿ ಕಾಯ್ದೆಗಳಿಗೆ ಬೆಂಬಲ ಸೂಚಿಸಿವೆ. ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರನ್ನು ಭೇಟಿಯಾದ ರೈತ ಮುಖಂಡರ ನಿಯೋಗ, ಹೊಸ ಕಾಯ್ದೆಗಳಿಗೆ ತಮ್ಮ ಬೆಂಬಲವಿದೆ ಎಂದು ಹೇಳಿದೆ. ಸರ್ಕಾರ ಯಾವಾಗ ಬೇಕಾದರೂ ಚರ್ಚೆಗೆ ಸಿದ್ಧವಾಗಿದೆ. ರೈತ ಮುಖಂಡರು ಮುಂದಿನ ಸಭೆಗೆ ಸಿದ್ಧರಾದಾಗ ನಿರ್ಧರಿಸಿ ತಿಳಿಸಬೇಕು ಎಂದು ತೋಮರ್ ಹೇಳಿದ್ದಾರೆ. ಪ್ರತಿಭಟನೆಯಲ್ಲಿ ನಿರತವಾಗಿರುವ ಸುಮಾರು 40 ರೈತ ಸಂಘಟನೆಗಳ ಮುಂಖಂಡರ ಜತೆ ತೋಮರ್ ಸಂಪರ್ಕದಲ್ಲಿದ್ದು, ಮಾತುಕತೆಗೆ ಬರುವಂತೆ ಮನವಿ ಮಾಡುತ್ತಿದ್ದಾರೆ. ಈ ನಡುವೆ, ಗೃಹ ಸಚಿವ ಅಮಿತ್ ಷಾ ಹಾಗೂ ತೋಮರ್ ಸಿಂಗ್ ಸೋಮವಾರವೂ ಸಭೆ ನಡೆಸಿದ್ದರು.

ಪ್ರತಿಭಟನೆಗೆ ಎಸ್​ಜೆಎಂ ಬೆಂಬಲ

ರೈತರ ಪ್ರತಿಭಟನೆಗೆ ಸ್ವದೇಶಿ ಜಾಗರಣ ಮಂಚ್ (ಎಸ್​ಜೆಎಂ) ಬೆಂಬಲ ವ್ಯಕ್ತಪಡಿಸಿದ್ದು, ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್​ಪಿ) ಕಾನೂನಾತ್ಮಕಗೊಳಿವುದು ಸೇರಿ ಹಲವು ಬದಲಾವಣೆಗಳಿಗೆ ಆಗ್ರಹಿಸಿದೆ. ಪ್ರತಿಭಟನೆಗೆ ಬೆಂಬಲ ಸೂಚಿಸಿರುವ ಎಸ್​ಜೆಎಂ, ಆರ್​ಎಸ್​ಎಸ್ ನಂಟಿರುವ 2ನೇ ಅಂಗಸಂಸ್ಥೆ ಆಗಿದೆ. ಈ ಮೊದಲು ಬಿಕೆಎಸ್ ಬೆಂಬಲ ಸೂಚಿಸಿತ್ತು. ಆದರೆ ರೈತ ಸಂಘಟನೆಗಳ ರೀತಿ ಹೊಸ ಕಾಯ್ದೆಗಳನ್ನು ಸಂಪೂರ್ಣವಾಗಿ ಹಿಂಪಡೆಯಬೇಕು ಎಂಬ ಆಗ್ರಹವನ್ನು ಈ ಎರಡು ಸಂಘಟನೆಗಳು ವ್ಯಕ್ತಪಡಿಸಿಲ್ಲ.

  • ಪ್ರತಿಭಟನೆಯನ್ನು ತಮ್ಮ ಉದ್ದೇಶಕ್ಕೆ ಬಳಸಿಕೊಳ್ಳುತ್ತಿದ್ದೀರಿ ಎಂದಿದ್ದ ಪಂಜಾಬ್ ಸಿಎಂ ಅಮರಿಂದರ್ ಸಿಂಗ್​ಗೆ ತಿರುಗೇಟು ನೀಡಿರುವ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್, ನಿಮ್ಮ ಮಗನ ವಿರುದ್ಧ ಇಡಿ ಪ್ರಕರಣ ಮುಚ್ಚಿಹಾಕಲು ನೀವು ಕೇಂದ್ರದೊಂದಿಗೆ ಒಪ್ಪಂದ ಮಾಡಿಕೊಂಡಿರಿ ಎಂದು ಆರೋಪಿಸಿದ್ದಾರೆ.
  • ಪ್ರತಿಭಟನೆಯನ್ನು ಬೆಂಬಲಿಸುತ್ತಿರುವ ಕೇಜ್ರಿವಾಲ್​ವಿರುದ್ಧ ಹರಿಹಾಯ್ದಿರುವ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್, ಪಂಜಾಬ್ ವಿಧಾನಸಭೆ ಚುನಾವಣಾ ಪ್ರಚಾರದಲ್ಲಿ ನೀವು ಎಪಿಎಂಸಿ ಕಾಯ್ದೆ ತಿದ್ದುಪಡಿಯ ಭರವಸೆ ನೀಡಿದ್ದೀರಿ, ಆದರೆ ಇಂದು ಉಪವಾಸ ನಡೆಸುತ್ತಿದ್ದೀರಿ ಎಂದು ಟೀಕಿಸಿದ್ದಾರೆ.
ರೈತ ಸಹೋದರರ ಮಾತುಗಳನ್ನು ಕೇಳಲು, ಅವರ ಅನುಮಾನಗಳನ್ನು ನಿವಾರಿಸಲು ಹಾಗೂ ಅವರಿಗೆ ನೀಡಬಹುದಾದ ಆಶ್ವಾಸನೆ ಗಳೆಲ್ಲದಕ್ಕೂ ನಾವು ಯಾವಾಗಲೂ ಸಿದ್ಧರಿದ್ದೇವೆ. ಪ್ರತಿಭಟನೆಯನ್ನು ಹಿಮ್ಮೆಟ್ಟಿಸುವ ಕ್ರಮವನ್ನು ಸರ್ಕಾರ ಕೈಗೊಳ್ಳುವುದಿಲ್ಲ.

| ರಾಜನಾಥ ಸಿಂಗ್ ರಕ್ಷಣಾ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net