ಮುಜರಾಯಿ ದೇಗುಲಗಳ ಹಣ ದುರ್ಬಳಕೆ

skp (4)
ಹಿಂದು ಧಾರ್ಮಿಕ ದತ್ತಿ ಇಲಾಖೆಯ ಹಣ ದುರ್ಬಳಕೆ ಮಾಡಿಕೊಂಡವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಮಂದಿರ ಮಹಾಸಂಘದ ಪದಾಧಿಕಾರಿಗಳು ಶಿಕಾರಿಪುರ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು. ವಿ.ರಾಮಣ್ಣ, ಬಿ.ವಿ.ಮಂಜುನಾಥ್, ಎಸ್.ವೆಂಕಟೇಶ್, ಅರ್ಜುನ್ ರಾವ್, ನಾರಾಯಣ್ ರಾವ್, ಎಸ್.ಮಧುಕುಮಾರ್ ಇತರರಿದ್ದರು.
Published on

ಶಿಕಾರಿಪುರ: ಹಿಂದು ಧಾರ್ಮಿಕ ದತ್ತಿ ಇಲಾಖೆಯ ಕೆಲವು ಅಧಿಕಾರಿಗಳು ದೇವಸ್ಥಾನದ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಮಂದಿರ ಮಹಾಸಂಘದ ಪದಾಧಿಕಾರಿಗಳು ತಹಸೀಲ್ದಾರ್ ಮಲ್ಲೇಶ್ ಪೂಜಾರ್‌ಗೆ ಮಂಗಳವಾರ ಮನವಿ ಸಲ್ಲಿಸಿದರು.

ತಾಲೂಕಿನ ಸಾಸಲು ಹೋಬಳಿಯಲ್ಲಿ ತಹಸೀಲ್ದಾರರು ಮತ್ತು ಕೇಸ್ ವರ್ಕರ್ ಸಹಿ ಮತ್ತು ಮುದ್ರೆ ನಕಲು ಮಾಡಿ ಹಿಂದು ಧಾರ್ಮಿಕ ದತ್ತಿ ಇಲಾಖೆಯ 60 ಲಕ್ಷ ರೂ.ಗಳನ್ನು ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಿ ಹಣ ಲೂಟಿ ಮಾಡಲಾಗಿದೆ. ಇದೇ ರೀತಿ ಲಿಂಗಸುಗೂರಿನ ತಹಸೀಲ್ದಾರ್ ಕಚೇರಿಯ ನೌಕರ ತನ್ನ ಸಂಬಂಧಿಗಳ ಹೆಸರಲ್ಲಿ ನಕಲಿ ಬ್ಯಾಂಕ್ ಖಾತೆ ತೆರೆದು ಧಾರ್ಮಿಕ ದತ್ತಿ ಇಲಾಖೆಯಡಿ ಬರುವ ದೇವಸ್ಥಾನಗಳ ಅರ್ಚಕರಿಗೆ ಮೀಸಲಿಟ್ಟ 1,87,86,561 ರೂ.ಗಳನ್ನು ವರ್ಗಾವಣೆ ಮಾಡಿ ಭ್ರಷ್ಟಾಚಾರ ಎಸಗಿದ್ದಾರೆ ಎಂದು ಹಿಂದು ಜನಜಾಗೃತಿ ಸಮಿತಿಯ ಪರಶುರಾಮ್ ದೊಡ್ಡಬಳ್ಳಾಪುರ ಆರೋಪಿಸಿದರು.

ತನಿಖೆಗಾಗಿ ವಿಶೇಷ ತನಿಖಾ ದಳ ನೇಮಿಸಬೇಕು. ಭ್ರಷ್ಟಾಚಾರದಲ್ಲಿ ಭಾಗಿಯಾದ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು. ಅವರಿಗೆ ಶಿಕ್ಷೆಯಾಗುವಂತೆ ಕ್ರಮ ಜರುಗಿಸಬೇಕು. ಹಿಂದು ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರ, ಹಣ ದುರುಪಯೋಗ ರಾಜ್ಯದ ಎಲ್ಲೆಲ್ಲಿ ನಡೆದಿದೆ ಎಂಬುದನ್ನು ಸಂಪೂರ್ಣವಾಗಿ ತನಿಖೆ ನಡೆಸಬೇಕು. ಧಾರ್ಮಿಕ ದತ್ತಿ ಇಲಾಖೆ ನಿಧಿ ದುರ್ಬಳಕೆ ತಡೆಯಲು ಕಠಿಣ ಕಾನೂನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಕರ್ನಾಟಕ ಮಂದಿರ ಮಹಾಸಂಘದ ಸದಸ್ಯ ವಿ.ರಾಮಣ್ಣ, ಅಲ್ಲಮಪ್ರಭು ಹಿರಿಯ ನಾಗರಿಕ ಸಂಘದ ಅಧ್ಯಕ್ಷ ಬಿ.ವಿ.ಮಂಜುನಾಥ್, ಶ್ರೀ ಲಕ್ಷ್ಮೀವೆಂಕಟೇಶ್ವರ ದೇವಸ್ಥಾನ ಸಮಿತಿ ಉಪಾಧ್ಯಕ್ಷ ಎಸ್.ವೆಂಕಟೇಶ್, ಶ್ರೀ ತುಳಜಾ ಭವಾನಿ ದೇವಸ್ಥಾನದ ಅಧ್ಯಕ್ಷ ಅರ್ಜುನ್ ರಾವ್, ಆರ್‌ಎಸ್‌ಎಸ್‌ನ ನಾರಾಯಣ್ ರಾವ್, ಸವಿತಾ ಯುವಕ ಸಂಘದ ಅಧ್ಯಕ್ಷ ಎಸ್.ಮಧುಕುಮಾರ್, ಈರೇಶ್, ವಿ.ರಘು, ಎಂ.ಎನ್.ಶ್ರೀನಿವಾಸ್, ಎಂ.ವಿಜಯಭಾಸ್ಕರ್, ಆರ್.ಬಾಲರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net