

ಸಾಗರ: ತಾಲೂಕು ಶಿಕ್ಷಣಾಧಿಕಾರಿಗಳ ಸಂಘದ ನೂತನ ಅಧ್ಯಕ್ಷರಾಗಿ ಬಿ.ಓಂಕಾರಪ್ಪ ಆಯ್ಕೆಯಾಗಿದ್ದಾರೆ. ಶುಕ್ರವಾರ ನಡೆದ ಸಭೆಯಲ್ಲಿ ಉಪಾಧ್ಯಕ್ಷರಾಗಿ ಸರ್ಕಾರಿ ಉರ್ದು ಶಾಲೆ ಮುಖ್ಯಶಿಕ್ಷಕ ದತ್ತಾತ್ರೇಯ ಭಟ್, ಕಾರ್ಯದರ್ಶಿಯಾಗಿ ಆನಂದಪುರ ಕೆಪಿಎಸ್‌ನ ಎಚ್.ಎಂ.ಈಶ್ವರಪ್ಪ, ಕೋಶಾಧ್ಯಕ್ಷರಾಗಿ ಹುಲಿದೇವರಬನ ಪ್ರೌಢಶಾಲೆ ಮುಖ್ಯ ಶಿಕ್ಷಕ ನಾಗರಾಜ ಹೆಗಡೆ ಆಯ್ಕೆಯಾಗಿದ್ದಾರೆ. ಜಿಲ್ಲಾ ಪ್ರತಿನಿಧಿಯಾಗಿ ತಡಗಳಲೆ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಯಮನೂರಪ್ಪ, ನಿರ್ದೇಶಕರಾಗಿ ಎಲ್.ದಾಮೋದರ್, ಗಜೇಂದ್ರ, ಇಂದಿರಾ ಬೇಡ್ಕಣಿ, ಹೇಮಲತಾ, ಶ್ರೀನಿವಾಸ್ ಸಿಂಗ್ ಆಯ್ಕೆಯಾದರು. ನೂತನ ಪದಾಧಿಕಾರಿಗಳನ್ನು ಅಭಿನಂದಿಸಿ ಮಾತನಾಡಿದ ಬಿಇಒ ಇ.ಪರಶುರಾಮಪ್ಪ, ಸಂಘಟನಾತ್ಮಕವಾಗಿ ಇದ್ದರೆ ಧ್ಯೇಯೋದ್ದೇಶಗಳನ್ನು ಈಡೇರಿಸಲು ಸಾಧ್ಯವಾಗುತ್ತದೆ. ಶೈಕ್ಷಣಿಕವಾಗಿ ಪೂರಕವಾದ ಚಟುವಟಿಕೆಗಳನ್ನು ನಿರಂತರವಾಗಿ ಕೈಗೊಳ್ಳಬೇಕು. ಉತ್ತಮ ಕೆಲಸ ಮಾಡುವ ಮೂಲಕ ತಾಲೂಕಿನ ಶೈಕ್ಷಣಿಕ ವಾತಾವರಣ ಮತ್ತು ಸದಸ್ಯರ ಹಿತ ಕಾಯಬೇಕು ಎಂದು ಸಲಹೆ ನೀಡಿದರು. ಸಮನ್ವಯಾಧಿಕಾರಿ ಡಾ. ಅನ್ನಪೂರ್ಣಾ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಭೂಮೇಶ್ ಇತರರಿದ್ದರು.