

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಗೆ ಮಿಷನ್- 150 ಗುರಿಯನ್ನಿಟ್ಟುಕೊಂಡು ಹೊರಟಿರುವ ಬಿಜೆಪಿ ಹಿಂದಿನ ಫಲಿತಾಂಶಗಳ ಆಧಾರದಲ್ಲಿ ಮೂರು ಪ್ರಶ್ನೆಗಳಿಗೆ ಕಾರಣ ಕಂಡುಕೊಂಡು, ಮುಂದಿನ ಗುರಿ ಸಾಧನೆಯತ್ತ ಕಾರ್ಯೋನ್ಮುಖವಾಗಲು ನಿರ್ಧರಿಸಿದೆ.
ಬೆಂಗಳೂರಿನ ಹೊರ ವಲಯದಲ್ಲಿ ಶುಕ್ರವಾರ ನಡೆದ ಚಿಂತನ ಬೈಠಕ್ನಲ್ಲಿ ರಾಜ್ಯದಲ್ಲಿ ಒಮ್ಮೆಯೂ ನಿಚ್ಚಳ ಬಹುಮತ ಪಡೆಯದಿರುವ ಬಗ್ಗೆ ಸಣ್ಣ ಅಳುಕಿನೊಂದಿಗೆ ವಿಶ್ಲೇಷಣೆ ನಡೆಸಲಾಗಿದೆ. ದೆಹಲಿ ವರಿಷ್ಠರು ರಾಜ್ಯದಲ್ಲಿ ಪಕ್ಷದ ಈ ಹಿಂದಿನ ನಿರ್ವಹಣೆ ಆಧಾರದ ಮೇಲೆ ಮೂರು ಪ್ರಮುಖ ಪ್ರಶ್ನೆಗಳನ್ನು ರೂಪಿಸಿದ್ದು, ಅವುಗಳಿಗೆ ಉತ್ತರ ಕಂಡುಕೊಂಡೇ ಸಂಘಟನೆ ಬಲ ಪಡಿಸಬೇಕು. ಇಲ್ಲವಾದರೆ, ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುವುದು ಕಷ್ಟ ಎಂಬ ಕಾರ್ಯಸೂಚಿಯನ್ನು ರಾಜ್ಯ ನಾಯಕರಿಗೆ ನೀಡಿದ್ದಾರೆ. ಚಿಂತನ ಬೈಠಕ್ನಲ್ಲಿ ಮುಂದಿನ ಗುರಿಯಷ್ಟೇ ಅಲ್ಲದೆ, ಹಿಂದಿನ ವೈಫಲ್ಯಗಳ ಬಗ್ಗೆಯೂ ಚರ್ಚೆ ನಡೆದಿದೆ. ಆ ವೈಫಲ್ಯಗಳನ್ನು ಸರಿಪಡಿಸಿಕೊಳ್ಳದಿದ್ದರೆ ಗುರಿ ಸಾಧನೆ ಅಷ್ಟು ಸುಲಭವಲ್ಲ ಎಂಬುದನ್ನು ಸಭೆಯಲ್ಲಿದ್ದ 41 ಜನರೂ ಸಮ್ಮತಿಸಿದ್ದಾರೆ. ಕಾಂಗ್ರೆಸ್ಗೆ ಸರಿಯಾದ ಪ್ರತಿರೋಧ ನೀಡಬೇಕು. ನಮ್ಮ ಕಾರ್ಯಕರ್ತರು, ಶಾಸಕರು, ಸಚಿವರು ಒಂದು ಕ್ಷಣವೂ ಮೈಮರೆಯದೇ ಕೆಲಸ ಮಾಡುವಂತೆ ಸಜ್ಜುಗೊಳಿಸಬೇಕಾಗಿದೆ ಎಂದು ರ್ಚಚಿಸಲಾಗಿದೆ.
ಸಂಸದರಿಗೂ ಟಾಸ್ಕ್: ಪಕ್ಷಕ್ಕೆ ಮತಬಾರದ 25 ಬೂತ್ಗಳನ್ನು ವಿಧಾನಸಭಾ ಕ್ಷೇತ್ರವಾರು ತಕ್ಷಣ ಗುರುತಿಸಬೇಕು. ಅಲ್ಲಿಂದ ಅಭಿಪ್ರಾಯ ಕ್ರೋಡೀಕರಿಸಿ ಅಂತಹ ಬೂತ್ಗಳಲ್ಲಿ ಮನೆಮನೆಗೂ ಪಕ್ಷವನ್ನು ತಲುಪಿಸಬೇಕು. ಸರ್ಕಾರ ಕಾರ್ಯಕ್ರಮ, ಅಭಿವೃದ್ಧಿ ಯೋಜನೆ ಬಗ್ಗೆ ಮನವರಿಕೆ ಮಾಡಿಕೊಟ್ಟಾಗ ಮಾತ್ರ ಮತದಾರರ ಪರಿವರ್ತನೆ ಸಾಧ್ಯವೆಂಬ ಅಭಿಪ್ರಾಯ ಸಭೆಯಲ್ಲಿ ಕೇಳಿ ಬಂದಿದೆ. ಸಂಸದರು ಸಹ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಕನಿಷ್ಠ 100 ಬೂತ್ಗಳನ್ನು ಗುರುತಿಸಿ ಮತದಾರರ ಪರಿವರ್ತನೆಗೆ ಮುಂದಾಗಬೇಕಾಗಿದೆ ಎಂಬ ಟಾಸ್ಕ್ ನೀಡಲಾಗಿದೆ.
ಸಮನ್ವಯ ಸಮಿತಿ ಅಗತ್ಯ: ಚುನಾವಣೆಗೆ ಕೇವಲ ಎಂಟು ತಿಂಗಳು ಬಾಕಿ ಇರುವ ಸಂದರ್ಭದಲ್ಲಿ ಸರ್ಕಾರ ಹಾಗೂ ಪಕ್ಷದ ನಡುವೆ ಸಮನ್ವಯ ಸಾಧಿಸಲು ಸಮಿತಿಯೊಂದರ ಅಗತ್ಯವಿದೆಯೇ ಎಂಬ ಬಗ್ಗೆಯೂ ಚರ್ಚೆ ನಡೆದಿದೆ. ಕೋರ್ ಕಮಿಟಿ ಇದ್ದರೂ ಸಮನ್ವಯ ಸಾಧ್ಯವಾಗುತ್ತಿಲ್ಲ. ನಿಷ್ಠಾವಂತ ಕಾರ್ಯಕರ್ತರಿಗೆ ಯಾವುದೇ ಅಧಿಕಾರ ಸಿಗದೇ ಬೇಸರಗೊಂಡಿದ್ದಾರೆ. ಸಮನ್ವಯ ಸಮಿತಿ ಇದ್ದಿದ್ದರೆ ಇಂತಹ ಸಮಸ್ಯೆ ಬರುತ್ತಿರಲಿಲ್ಲ ಎಂಬ ಬಗ್ಗೆ ಚರ್ಚೆಯಾದರೂ ಯಾವುದೇ ತೀರ್ವನವಾಗಿಲ್ಲ.
ಎರಡು ತಿಂಗಳಷ್ಟೇ ಸಮಯ: ಚುನಾವಣೆಗೆ ಎಂಟು ತಿಂಗಳಿದ್ದರೂ ರಾಜ್ಯದಲ್ಲಿ ಪರವಾದ ವಾತಾವರಣ ಸೃಷ್ಟಿಸಿಕೊಳ್ಳಲು ಇರುವ ಅವಕಾಶ ಎರಡು ತಿಂಗಳಷ್ಟೇ. ಈ ಅವಧಿಯಲ್ಲಿ ಆ ಕೆಲಸ ಆಗದಿದ್ದರೆ ಪರಿಸ್ಥಿತಿ ಕಷ್ಟವಾಗುತ್ತದೆ. ಮೋದಿ ಹೆಸರು ಹೇಳಿದರೆ ಮತ ಬರುತ್ತದೆ ಎಂಬ ಅವಲಂಬನೆಯಿಂದ ಹೊರಬರಬೇಕಾಗಿದೆ. ಪಕ್ಷದ ಇಮೇಜ್ ಹೆಚ್ಚಿಸುವ ಕ್ರಿಯಾ ಯೋಜನೆಯೊಂದನ್ನು ತಕ್ಷಣ ಸಿದ್ಧಪಡಿಸಬೇಕೆಂದು ರಾಜ್ಯ ಘಟಕಕ್ಕೆ ಸೂಚಿಸಲಾಗಿದೆ.
ಕಾರ್ಯಕರ್ತರ ಕೋಪಕ್ಕೇನು ಕಾರಣ?: ಪಕ್ಷದ ಕಾರ್ಯಕರ್ತರು ಕಚೇರಿಗೆ ಬರುವುದಕ್ಕೂ ಕೆಲವರ ಅಪ್ಪಣೆ ಪಡೆಯಬೇಕಾಗಿದೆ ಎಂಬ ವಾತಾವರಣ ಇರುವ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ. ಮೊದಲು ಅಂತಹ ವ್ಯವಸ್ಥೆಯನ್ನು ತೆಗೆದು ಹಾಕಿ. ಕಚೇರಿಯಲ್ಲಿ ಕಾರ್ಯಕರ್ತರಿಗೆ ಮುಕ್ತ ವಾತಾವರಣ ಸೃಷ್ಟಿಸುವಂತೆ ಸಭೆಯಲ್ಲಿದ್ದ ಕೆಲವರು ರಾಜ್ಯಾಧ್ಯಕ್ಷರಿಗೆ ತಾಕೀತು ಮಾಡಿದ್ದಾರೆಂದು ಮೂಲಗಳು ಖಚಿತಪಡಿಸಿವೆ.
5-6 ಜಿಲ್ಲೆಯಲ್ಲಿ ಸಂಘಟನೆಗೆ ಆದ್ಯತೆ: ರಾಜ್ಯದಲ್ಲಿ ಐದಾರು ಜಿಲ್ಲೆಗಳಲ್ಲಿ ಪಕ್ಷದ ಸಂಘಟನೆ ಸೂಕ್ತವಾಗಿಲ್ಲ. ಮಂಡ್ಯ, ರಾಮನಗರ, ಹಾಸನ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಸಂಘಟನೆಯನ್ನು ಬಲಗೊಳಿಸುವ ಮೂಲಕ ಶಕ್ತಿ ತುಂಬಬೇಕಿದೆ. ಈ ಜಿಲ್ಲೆಗಳಲ್ಲಿ ಈ ಚುನಾವಣೆಯಲ್ಲಿ ಪ್ರತಿಜಿಲ್ಲೆಗೂ ಕನಿಷ್ಠ ಎರಡು ಕ್ಷೇತ್ರದಲ್ಲಿ ಗೆಲ್ಲಬೇಕು ಎಂಬುದನ್ನು ಸವಾಲಿನ ರೀತಿಯಲ್ಲಿ ತೆಗೆದುಕೊಳ್ಳಲಾಗಿದೆ.
ಪಕ್ಷ ಗೆಲ್ಲದ ಹಾಗೂ ಗೆದ್ದರೂ ಕಡಿಮೆ ಮತಗಳಿಸುವ ಬೂತ್ಗಳಿಂದ ಈ ಕೆಳಕಂಡ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡು ಮುಂದುವರಿಯಬೇಕೆಂದು ತಿಳಿಸಲಾಗಿದೆ.
ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮಾಡುವ ಟೀಕೆಗಳಿಗೆ ನೀಡುತ್ತಿರುವ ಪ್ರತಿರೋಧ ಸಾಲದು. ಅದಕ್ಕಾಗಿಯೇ ಕನಿಷ್ಠ 10 ಜನರ ಒಂದು ತಂಡವನ್ನು ರಚನೆ ಮಾಡಬೇಕು. ಅವರ ಟೀಕೆಗಳಿಗೆ ತಕ್ಷಣ ಆ 10 ಜನರು ಉತ್ತರ ನೀಡುವಂತಾಗಬೇಕು ಎಂಬ ಸಲಹೆಯನ್ನು ನೀಡಲಾಗಿದೆ.