ನಾಪತ್ತೆಯಾಗಿದ್ದ ಯುವಕ ಶವವಾಗಿ ಪತ್ತೆ

Published on

ಸೋಮವಾರಪೇಟೆ : ಐದು ದಿನಗಳಿಂದ ನಾಪತ್ತೆಯಾಗಿದ್ದ ಪುರುಷನ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ.

ಸೋಮವಾರಪೇಟೆ ಕಕ್ಕೆಹೊಳೆ ಜಂಕ್ಷನ್ ನಿವಾಸಿ ದಾಮೋದರ್ ನಾಯರ್ ಅವರ ಪುತ್ರ ಸಂಪತ್(45) ಮೃತದೇಹ ರಕ್ತಸಿಕ್ತವಾಗಿದ್ದ ಕಾರಿನಲ್ಲಿ ಕೊಳೆತ ಸ್ಥಿತಿಯಲ್ಲಿ ದೊರೆತಿದೆ. ಸಂಪತ್ ಮೇ 10 ರಂದು ನಾಪತ್ತೆಯಾಗಿದ್ದ ಬಗ್ಗೆ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಸಹೋದರ ದೂರು ನೀಡಿದ್ದರು.

ಮೇ 9 ರಂದು ರಾತ್ರಿ ಸಂಪತ್ ಕಾರನ್ನು ತೆಗೆದುಕೊಂಡು ಹೋಗಿರುವ ಬಗ್ಗೆ ಕುಟುಂಬಸ್ಥರು ಮಾಹಿತಿ ನೀಡಿದ್ದ ಹಿನ್ನೆಲೆಯಲ್ಲಿ ಕುಶಾಲನಗರ, ಸೋಮವಾರಪೇಟೆ, ಯಸಳೂರು ಪೊಲೀಸರು ತನಿಖೆ ತೀವ್ರಗೊಳಿಸಿದ್ದರು. ಸೋಮವಾರಪೇಟೆ ಯಿಂದ ಯಸಳೂರು, ಸಕಲೇಶಪುರ ಮಾರ್ಗದ ಎಲ್ಲ ಸಿ.ಸಿ. ಕ್ಯಾಮರಾಗಳ ಫೂಟೇಜ್‌ಗಳನ್ನು ಪರಿಶೀಲಿಸಿದ ಸಂದರ್ಭ ಸಂಪತ್ ತೆರಳಿದ ಕಾರಿನ ಜತೆ ಮತ್ತೆರಡು ಕಾರುಗಳು ತೆರಳಿರುವುದು ಪೊಲೀಸರ ಗಮನಕ್ಕೆ ಬಂದಿದೆ.

ಏತನ್ಮಧ್ಯೆ ಸಕಲೇಶಪುರ ತಾಲೂಕಿನ ಯಸಳೂರು ಹೋಬಳಿ ಮಾಗೇರಿಯ ಸಮೀಪದ ಕಲ್ಲಹಳ್ಳಿ ಗ್ರಾಮದಲ್ಲಿ ಶನಿವಾರ ಬೆಳಗ್ಗೆ ಕಾರು ಚಾಲಕನೊಬ್ಬ ರಕ್ತಸಿಕ್ತವಾಗಿ ನಿಂತಿದ್ದ ಕಾರನ್ನು ಗಮನಿಸಿ, ಯಸಳೂರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದ. ತನಿಖೆ ನಡೆಸುತ್ತಿದ್ದ ಯಸಳೂರು ಠಾಣೆ ಸಬ್ ಇನ್‌ಸ್ಪೆಕ್ಟರ್ ಶ್ರೀನಿವಾಸ್ ಮತ್ತು ಸಿಬ್ಬಂದಿ ಕೂಡಲೇ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು.

ಪೊಲೀಸರು ಸಂಪತ್ ಜತೆಯಲ್ಲಿ ಗಲಾಟೆ ಮಾಡಿಕೊಂಡ ಅನೇಕರನ್ನು ಠಾಣೆಗೆ ಕರೆಸಿ ವಿಚಾರಣೆ ಮಾಡಿದ್ದಾರೆ. ಅದರಲ್ಲಿ ಕೆಲವರು ನಾಪತ್ತೆಯಾಗಿದ್ದಾರೆ. ಸಂಪತ್ ಕೊಲೆಯಾಗಿರುವ ಬಗ್ಗೆ ಪೊಲೀಸರಿಗೆ ಖಚಿತವಾಗುತ್ತಿದ್ದಂತೆ ಬುಧವಾರ ಬೆಳಗ್ಗೆ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಸ್ಥಳಕ್ಕೆ ಕೊಡಗು ಎಸ್ಪಿ ರಾಮರಾಜನ್ ಹಾಗು ಹಿರಿಯ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಮಹಜರು ನಡೆಸಿದರು. ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಪರಿಶೀಲಿಸಿ ಮಡಿಕೇರಿ ಜಿಲ್ಲಾಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಸಾಗಿಸಲಾಗಿದೆ.

ಅರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಪ್ರಕರಣ ತನಿಖಾ ಹಂತದಲ್ಲಿದೆ. ಇನ್ನು ಹಲವರ ವಿಚಾರಣೆ ನಡೆಸಬೇಕಿದ್ದು, ಸದ್ಯಕ್ಕೆ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಎಸ್ಪಿ ರಾಮರಾಜನ್ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net