

ಹೈದರಾಬಾದ್: ನಾಪತ್ತೆಯಾಗಿದ್ದ ಆರು ವರ್ಷದ ಬಾಲಕ ಬುಧವಾರ ಪಾಳುಬಿದ್ದ ಬಾವಿಯಲ್ಲಿ ಶವವಾಗಿ ಪತ್ತೆಯಾಗಿರುವ ಅನುಮಾನಾಸ್ಪದ ಘಟನೆ ತೆಲಂಗಾಣದ ಹೈದರಾಬಾದ್‌ನ ಹೊರವಲಯದಲ್ಲಿರುವ ರಂಗಾರೆಡ್ಡಿ ಜಿಲ್ಲೆಯ ನರಸಿಂಗಿಯಲ್ಲಿ ಈ ಘಟನೆ ನಡೆದಿದೆ.
ಬನ್ನಿ (6) ಎಂಬ ಬಾಲಕನೇ ಮೃತದುರ್ದೈವಿಯಾಗಿದ್ದು, ಮಂಗಳವಾರ ಸಂಜೆ ಕಿರಾಣಿ ಅಂಗಡಿಗೆ ವಸ್ತು ಖರೀದಿಸಲು ಒಬ್ಬನೇ ಹೋಗಿದ್ದ. ಅಂಗಡಿಗೆ ಹೋದ ಆರು ವರ್ಷದ ಬಾಲಕ ವಾಪಸ್ ಬರಲೇ ಇಲ್ಲ. ಎಷ್ಟು ಹುಡುಕಿದರೂ ಆತನ ಕುರುಹು ಸಿಗದಿದ್ದ ಕಾರಣ ಆತನ ತಂದೆ ತಾಯಿಗಳು ನರಸಿಂಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಇದನ್ನೂ ಓದಿ: VIDEO| ಮನಬಂದಂತೆ ವ್ಯಕ್ತಿಗೆ ಥಳಿಸಿ, ಬೂಟುಗಾಲಲ್ಲಿ ಒದ್ದ ಕಾನ್ಸ್ಟೆಬಲ್..!
ನಾಪತ್ತೆ ಪ್ರಕರಣವನ್ನು ದಾಖಲಿಸಿಕೊಂಡಿದ್ದ ಪೊಲೀಸರು ಬಾಲಕನಿಗಾಗಿ ತೀವ್ರ ಹುಡುಕಾಟ ನಡೆಸಿದ್ದು, ಬುಧವಾರದಂದು ಪಾಳು ಬಾವಿಯಲ್ಲಿ ಆತನ ಶವ ಪತ್ತೆಯಾಗಿದೆ. ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕಾಗಮಿಸಿದ್ದು, ಮೃತದೇಹವನ್ನು ಹೊರತೆಗೆದಿದ್ದು, ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಉಸ್ಮಾನಿಯಾ ಜನರಲ್ ಆಸ್ಪತ್ರೆಗೆ ಮೃತದೇಹವನ್ನು ರವಾನಿಸಿದ್ದಾರೆ.
ಬಾಲಕ ಆಕಸ್ಮಿಕವಾಗಿ ಬಾವಿಗೆ ಬಿದ್ದಿದ್ದಾನೆಯೇ ಅಥವಾ ಏನಾದರೂ ಕೃತ್ಯ ನಡೆದಿದಿಯೇ ಎಂಬುದನ್ನು ಪತ್ತೆ ಹಚ್ಚಲು ಪೊಲೀಸರು ತನಿಖೆ ಆರಂಭಿಸಿದ್ದು, ಬಾವಿಗೆ ಯಾವುದೇ ರಕ್ಷಣಾ ಗೋಡೆಗಳು ಇರಲಿಲ್ಲ. ಇತ್ತ ಮಗನ ಸಾವಿನ ಸುದ್ದಿ ಕೇಳಿದ ಆ ಪೋಷಕರ ಎದೆಗೆ ಕಲ್ಲು ಬಿದ್ದಂತಾಗಿದ್ದು, ದಿಕ್ಕು ತೋಚದೆ ಕಂಗಾಲಾಗಿದ್ದಾರೆ.(ಏಜೆನ್ಸೀಸ್)