ಹೀಗೊಂದು ವಿಚಿತ್ರ ಪ್ರಸಂಗ: ತನ್ನದೇ ಶೋಧ ಕಾರ್ಯದಲ್ಲಿ ಪಾಲ್ಗೊಂಡ ಪುರುಷ!

man
ತನ್ನ ಶೋಧ ಕಾರ್ಯ ನಡೆಸುತ್ತಿದ್ದವರ ನಡುವಲ್ಲೇ ಪ್ರತ್ಯಕ್ಷನಾದ ಬೇಹನ್ ಮುತ್ಲು
Published on

ಇನೆಗಾಲ್​, ಟರ್ಕಿ: ಕಳೆದುಹೋಗಿದ್ದಾನೆ ಎಂದು ಭಾವಿಸಲಾಗಿದ್ದ ವ್ಯಕ್ತಿಯೊಬ್ಬ ತನ್ನದೇ ಶೋಧ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ವಿಚಿತ್ರ ಘಟನೆ ಟರ್ಕಿಯಲ್ಲಿ ನಡೆದಿದೆ. ಬೇಹಾನ್​ ಮುತ್ಲು ಎಂಬಾತನನ್ನು ಹುಡುಕುತ್ತಿದ್ದ ಪೊಲೀಸರು ಮತ್ತು ಗ್ರಾಮಸ್ಥರು ತಬ್ಬಿಬ್ಬಾದ ಸನ್ನಿವೇಶ ಟ್ವಿಟರ್​ ಮೂಲಕ ಬೆಳಕಿಗೆ ಬಂದಿದೆ.

ಇನೆಗಾಲ್​ ನಗರದ ಬಳಿಯ ಕಯ್ಯಾಕ ಗ್ರಾಮದಲ್ಲಿ ಈ ಘಟನೆ ನಡೆದಿದೆ. ತನ್ನ ಗೆಳೆಯರೊಂದಿಗೆ ಕುಡಿದು ಪಾರ್ಟಿ ಮಾಡುತ್ತಿದ್ದ ಮುತ್ಲು, ಕಾಡಿನೊಳಕ್ಕೆ ತೆರಳಿದ್ದ. ರಾತ್ರಿ ಎಷ್ಟು ಹೊತ್ತಾದರೂ ವಾಪಸ್​ ಬಾರದ ಮುತ್ಲು ಬಗ್ಗೆ ಚಿಂತಿತರಾದ ಮಿತ್ರರು ಪೊಲೀಸರಿಗೆ ಮಿಸ್ಸಿಂಗ್​ ಕಂಪ್ಲೆಂಟ್​ ನೀಡಿದರು. ತಕ್ಷಣ ಶೋಧ ಕಾರ್ಯ ಆರಂಭಿಸಿದ ಪೊಲೀಸರಿಗೆ, ಹಲವು ಸ್ಥಳೀಯರು ಗುಂಪುಗಳಲ್ಲಿ ಸಾಥ್​ ನೀಡಿದರು.

ಅರಣ್ಯದಲ್ಲಿ ಮುತ್ಲುವನ್ನು ಹುಡುಕುತ್ತಿದ್ದ ಸ್ಥಳೀಯರು ಆತನ ಹೆಸರನ್ನು ಮತ್ತೆ ಮತ್ತೆ ಕೂಗಲಾರಂಭಿಸಿದಾಗ, ಅವರ ನಡುವಿನಲ್ಲೇ ಇದ್ದವನೊಬ್ಬ "ನಾವು ಯಾರನ್ನು ಹುಡುಕುತ್ತಿದ್ದೇವೆ? ನಾನಿಲ್ಲೇ ಇದ್ದೇನೆ" ಎಂದಿದ್ದಾನೆ. ಯಾರನ್ನು ಹುಡುಕುತ್ತಿದ್ದರೋ ಅವನೇ ತಮ್ಮ ಮಧ್ಯೆ ದಿಢೀರ್​ ಪ್ರತ್ಯಕ್ಷವಾದಾಗ ಕೆಲಕ್ಷಣಗಳು ಎಲ್ಲರೂ ತಬ್ಬಿಬ್ಬಾಗಿದ್ದಾರೆ.

ತಾನು ಮಿಸ್​ ಆಗಿರುವುದಾಗಿ ಸ್ನೇಹಿತರು ದೂರು ನೀಡಿದ್ದ ಮಾಹಿತಿ ಇಲ್ಲದ ಮುತ್ಲು, ಕಾಡಿನಲ್ಲೇ ಅಡ್ಡಾಡುತ್ತಿದ್ದೆ ಎಂದು ಹೇಳಿದ್ದಾನೆ. ಇನ್ನೂ ಮದ್ಯದ ಅಮಲಿನಲ್ಲಿದ್ದ ಆತನನ್ನು ಮನೆಗೆ ತಲುಪಿಸಿ ಜನರು ನೆಮ್ಮದಿಯಿಂದ ವಾಪಸಾಗಿದ್ದಾರೆ ಎಂದು ಟರ್ಕಿಯ ಎನ್​ಟಿವಿ ವರದಿ ಮಾಡಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net