ಕೈತಪ್ಪಿದ ಹೂಡಿಕೆ, ಸರ್ಕಾರದ ಸಮರ್ಥನೆ

vidhanasoudha
Published on

ಬೆಂಗಳೂರು: ಸೆಮಿಕಂಡಕ್ಟರ್ ಘಟಕವೊಂದು ಕರ್ನಾಟಕದಲ್ಲಿ ಹೂಡಿಕೆ ಮಾಡುವುದಾಗಿ ಭರವಸೆ ಕೊಟ್ಟು ತೆಲಂಗಾಣದತ್ತ ಮುಖಮಾಡಿದೆ ಎಂಬ ವಿಚಾರದಲ್ಲಿ ಉದ್ಯಮಿ ಮೋಹನ್ ದಾಸ್ ಪೈ ನೀಡಿರುವ ಪ್ರತಿಕ್ರಿಯೆಗೆ ಸರ್ಕಾರ ಅಸಮಾಧಾನ ಹೊರಹಾಕಿದೆ.

ಕೇಯ್ನ ಟೆಕ್ನಾಲಜಿ ಮೈಸೂರಿನಲ್ಲಿ 2800 ಕೋಟಿ ರೂ. ಹೂಡಿಕೆ ಮಾಡಿ ಸೆಮಿಕಂಡಕ್ಟರ್ ಯೋಜನೆ ಆರಂಭಿಸಲು ಉದ್ದೇಶಿಸಿತ್ತು. ಅದಕ್ಕಾಗಿ ಸರ್ಕಾರದ ಜತೆ ಒಡಂಬಡಿಕೆ ಮಾಡಿಕೊಂಡಿತ್ತು. ಈ ನಡುವೆ ಆ ಕಂಪನಿ ಹೈದರಾಬಾದ್ ಸಮೀಪ ಸೆಮಿಕಂಡಕ್ಟರ್ ಘಟಕ ಸ್ಥಾಪನೆಗೆ ಭೂಮಿ ಪೂಜೆ ನೆರವೇರಿಸಿದೆ.

ಈ ಸಂಗತಿಯನ್ನು ಪ್ರಸ್ತಾಪಿಸಿರುವ ಉದ್ಯಮಿ ಮೋಹನ್ ದಾಸ್ ಪೈ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಉದಾಸೀನ ಮತ್ತು ನಿರ್ಲಕ್ಷ್ಯದಿಂದಾಗಿ ಮೈಸೂರಿನಿಂದ ಒಂದು ಒಳ್ಳೆಯ ಕಂಪನಿಯನ್ನು ನಾವು ಹೊರಗೆ ಕಳಿಸಿದ್ದೇವೆ. ಇದು ಕರ್ನಾಟಕದ ಪಾಲಿಗೆ ಅತ್ಯಂತ ಬೇಸರದ ದಿನ. ಹೀಗಾದರೆ ನಾವು ಉದ್ಯೋಗ ಸೃಷ್ಟಿ ಮಾಡುವುದು ಹೇಗೆ? ಎಂದು ಸಿಎಂ, ಡಿಸಿಎಂ, ಕೈಗಾರಿಕೆ ಸಚಿವರನ್ನು ಪ್ರಶ್ನಿಸಿದ್ದಾರೆ.

ಆದರೆ, ಈ ಟೀಕೆಗೆ ಪ್ರತಿಕ್ರಿಯೆ ನೀಡಿರುವ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್, ಸರ್ಕಾರದ ಕಡೆಯಿಂದ ಒಂದು ಸಣ್ಣ ಲೋಪವೂ ಆಗಿಲ್ಲ. ಮುಖ್ಯಮಂತ್ರಿ ಅಧ್ಯಕ್ಷತೆಯ ಉನ್ನತ ಮಟ್ಟದ ಸಮಿತಿಯಲ್ಲಿ ಅನುಮೋದನೆಗೆ ಮೊದಲೇ ಆದೇಶ ನೀಡಿದ್ದೆವು. ಇಷ್ಟೆಲ್ಲಾ ಮಾಡಿರುವಾಗ ಸರ್ಕಾರದಿಂದ ವಿಳಂಬ ಧೋರಣೆ ಎಂದು ಟೀಕಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ.

ಆ ಕಂಪನಿಯು ತೆಲಂಗಾಣಕ್ಕೆ ಹೋಗಿರುವುದಕ್ಕೆ ಬೇರಯದೇ ಕಾರಣಗಳಿರಬಹುದು. ಸರ್ಕಾರದ ನಿಯಮಗಳ ಪ್ರಕಾರ ನಾವು ವಿನಾಯಿತಿ ಕೊಡಲು ಸಿದ್ಧರಿದ್ದೆವು. ನಿರೀಕ್ಷೆ ಹೆಚ್ಚಿಗೆ ಇದ್ದಾಗ ನಾವು ನಿಯಮ ಮೀರಲು ಸಾಧ್ಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಮೋಹನ್ ದಾಸ್ ಪೈಗೆ ಈ ಬೆಳವಣಿಗೆಗಳ ಬಗ್ಗೆ ಮಾಹಿತಿ ಇಲ್ಲದೇ ಇರಬಹುದು. ಅಧಿಕಾರಿಗಳು ಅವರೊಂದಿಗೆ ಮಾತನಾಡಿ ವಿವರಿಸಲಿದ್ದಾರೆ ಎಂದು ಸಚಿವರು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net