

ರಾಣೆಬೆನ್ನೂರ: ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದೆ. ಶೇ. 90ರಷ್ಟು ರೈತರು ಬಿತ್ತನೆ ರ್ಪೂಣಗೊಳಿಸಿದ್ದು, ಈ ವರ್ಷ ಉತ್ತಮ ಬೆಳೆಯ ನಿರೀಕ್ಷೆಯಲ್ಲಿದ್ದಾರೆ ಎಂದು ಸಚಿವ ಶಿವಾನಂದ ಪಾಟೀಲ, ರಾಣೆಬೆನ್ನೂರ ಗುಣಮಟ್ಟದ ಬಿತ್ತನೆ ಬೀಜ ಮಾರಾಟಕ್ಕೆ ಹೆಸರುವಾಸಿಯಾಗಬೇಕು ಹೊರತು "ನಕಲಿ ಬೀಜ ಮಾರಾಟಗಾರರ ನಗರ' ಆಗಬಾರದು ಎಂದು ಕೃಷಿ ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕಿನ ಹೂಲಿಹಳ್ಳಿ ಬಳಿ ಎಪಿಎಂಸಿ ಮೆಗಾ ಮಾರುಕಟ್ಟೆಯಲ್ಲಿ ಅಧಿಕಾರಿಗಳೊಂದಿಗೆ ಮಾತನಾಡಿದ ಅವರು, ರೈತರಿಗೆ ಕಳಪೆ ಬೀಜ ಪೂರೈಕೆಯಾಗಿರುವ ಬಗ್ಗೆ ವರದಿಯಾಗಿದೆ. ಅದನ್ನು ಪರಿಶೀಲಿಸಿ ಸಂಬಂಧ ಪಟ್ಟವರ ಮೇಲೆ ಕ್ರಮ ಜರುಗಿಸಬೇಕು. ಈಗಾಗಲೇ ಪರವಾನಗಿ ರದ್ದುಪಡಿಸಲಾಗಿದೆ. ಆದರೆ, ಅವರ ಮೇಲೆ ಕಾನೂನು ಕ್ರಮ ಕೂಡ ಜರುಗಿಸಬೇಕು ಎಂದರು. ಹಾಗೆಯೇ ಅಗತ್ಯ ರಸಗೊಬ್ಬರ ಸಂಗ್ರಹಣೆ ಮಾಡಿಕೊಳ್ಳುವಂತೆ ಮತ್ತು ರಸ ಗೊಬ್ಬರದ ಕೊರತೆಯಾಗದಂತೆ ನೋಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.