ವಿಪಕ್ಷ ನಾಯಕರಿಗೆ ಸಚಿವರ ಟಾಂಗ್

priyank kharge
Published on

ಬೆಂಗಳೂರು: ಅವ್ಯವಹಾರ ಆರೋಪ ಎದುರಿಸುತ್ತಿರುವ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಅಮಾನತು ಆದೇಶ ವಾಪಸ್ ಪಡೆದ ಕ್ರಮವನ್ನು ಟೀಕಿಸಿದ್ದ ವಿಧಾನ ಪರಿಷತ್ ವಿರೋಧಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಆರೋಪಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಅಮಾನತ್ತು ಆದ ಅಧಿಕಾರಿ, ಸಿಬ್ಬಂದಿಯನ್ನು ಶಾಶ್ವತವಾಗಿ ಅಮಾನತ್ತಿನಲ್ಲಿ ಇಡಲು ನಿಯಮಗಳನ್ವಯ ಸಾಧ್ಯವಿಲ್ಲ, ಹಾಗಾಗಿ ಅವ್ಯವಹಾರದ ಗಂಭೀರತೆಯನ್ನು ಪರಿಗಣಿಸಿ ಅಮಾನತ್ತು ಮಾಡಿದ 8-9 ತಿಂಗಳ ನಂತರ ಅಮಾನತುಗೊಂಡ ಅದೇ ಹುದ್ದೆಯಲ್ಲಿ ಮುಂದುವರೆಸದೆ, ನಿಯಮಾನುಸಾರ ಇಲಾಖಾ ವಿಚಾರಣೆ ಬಾಕಿ ಇರಿಸಿ, ಅವರು ಕಾರ್ಯನಿರ್ವಹಿಸುತ್ತಿದ್ದ ಜಿಲ್ಲೆಯ ಹೊರಗಡೆ ಸೇವೆಗೆ ಪುನರ್ ಸ್ಥಾಪಿಸಿ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.

ಹಾಗೆಯೇ, ಫ್ಯಾಕ್ಟೃ್ ಚೆಕ್ ಮಾಡಿ ಆರೋಪ ಮಾಡಿ ಇಲ್ಲದಿದ್ದರೆ ಚಡ್ಡಿ ಹೊತ್ತಾಗ ನಗೆಪಾಟಲಿಗೆ ಈಡಾದಂತೆ ಹಾಸ್ಯಾಸ್ಪದವಾಗುವಿರಿ ಎಂದು ಹೇಳಿರುವ ಪ್ರಿಯಾಂಕ್ ಖರ್ಗೆ, ನಿಮ್ಮ ಸರ್ಕಾರದ ದುರಾಡಳಿತವನ್ನು ಜನತೆಗೆ ತಿಳಿಸಲು ನೀವೇ ಅವಕಾಶ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು, ಹಗರಣ ನಡೆದಿದ್ದು ನಿಮ್ಮ ಸರ್ಕಾರದಲ್ಲಿ, ಅಮಾನತು ಕ್ರಮ ಜರುಗಿಸಿದ್ದು ನಮ್ಮ ಸರ್ಕಾರದಲ್ಲಿ ಎನ್ನುವುದನ್ನು ಮರೆಯದಿರಿ ಎಂದು ಕಾಲೆಳೆದಿದ್ದಾರೆ.

2020-21 ರಿಂದ 2022-23ರವರೆಗೆ ನರೇಗಾ ಯೋಜನೆಯ ಅನುಷ್ಠಾನದಲ್ಲಿ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನಲ್ಲಿ ನಡೆದಿರುವ ಅವ್ಯವಹಾರಕ್ಕೆ ಸಂಬಂಧಿಸಿದಂತೆ, ದೇವದುರ್ಗ ತಾಲೂಕಿನ ಅಧಿಕಾರಿಗಳು ಸೇರಿ 37 ಅಧಿಕಾರಿಗಳನ್ನು ಅಮಾನತ್ತುಗೊಳಿಸಿ ಜನವರಿ 2024ರಲ್ಲಿ ಆದೇಶಿಸಲಾಗಿತ್ತು. ಕರ್ನಾಟಕ ನಾಗರಿಕ ಸೇವಾ (ಸಿಸಿಎ) ನಿಯಮಗಳನ್ವಯ ಸರ್ಕಾರಿ ಅಧಿಕಾರಿ, ನೌಕರರನ್ನು 6 ತಿಂಗಳ ಕಾಲದವರೆಗೆ ಅಮಾನತ್ತಿನಲ್ಲಿ ಇರಿಸಲು ಅವಕಾಶ ಕಲ್ಪಿಸಲಾಗಿದೆ ಎಂದಿದ್ದಾರೆ.

ಅಮಾನತ್ತುಗೊಂಡ ಆರು ತಿಂಗಳ ಅವಧಿಯೊಳಗೆ ಆಪಾದಿತ ನೌಕರನ ವಿರುದ್ಧ ಇಲಾಖಾ ವಿಚಾರಣೆ ಪ್ರಾರಂಭಿಸದಿದ್ದಲ್ಲಿ ಅಥವಾ ನ್ಯಾಯಾಲಯದಲ್ಲಿ ದೋಷಾರೋಪಣೆ ಪಟ್ಟಿ ಸಲ್ಲಿಸದಿದ್ದಲ್ಲಿ ಅಂತಹ ನೌಕರನ ಅಮಾನತ್ತನ್ನು ರದ್ದುಗೊಳಿಸುವ ಅಥವಾ ಮುಂದುವರೆಸುವ ಬಗ್ಗೆ ಸಕ್ಷಮ ಪ್ರಾಧಿಕಾರವು ವಿಳಂಬವಿಲ್ಲದೇ ತೀರ್ಮಾನಿಸತಕ್ಕದ್ದು ಹಾಗೂ ಈ ಅವಧಿಯೊಳಗೆ ತೀರ್ಮಾನಿಸಿ ಮುಂದುವರೆಸಲು ಆದೇಶಿಸದಿದ್ದಲ್ಲಿ ಅಮಾನತ್ತು ಭಾವಿತ ಆಧಾರದಮೇಲೆ ಅಂದರೆ ಅಮಾನತ್ತಿನ ದಿನಾಂಕದಿಂದ 6 ತಿಂಗಳು ಪೂರ್ಣಗೊಂಡ ದಿನಾಂಕದಿಂದ ರದ್ದಾಗುವುದು ಎಂದು ವಿವರಿಸಿದ್ದಾರೆ.

ಅವ್ಯವಹಾರದ ಬಗ್ಗೆ ನಡೆಯುತ್ತಿರುವ ತನಿಖೆ ಅಂತಿಮ ಹಂತದಲ್ಲಿದೆ, ಅಧಿಕಾರಿಗಳ ವಿರುದ್ಧದ ಆರೋಪ ಸಾಬೀತಾದ ನಂತರ ಕಠಿಣ ಕ್ರಮ ಜರುಗಿಸಲು ನಮ್ಮ ಸರ್ಕಾರ ಬದ್ಧವಾಗಿದೆ.

ಸಿಸಿಎ ನಿಯಮಗಳ ಬಗ್ಗೆ ನಿಮಗೆ ಅರಿವಿಲ್ಲದಿದ್ದರೆ ನೀವು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಅನರ್ಹರು ಎನ್ನುವುದು ನನ್ನ ಭಾವನೆ ಎಂದೂ ಕಾಲೆಳೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net