ನೌಕರಿಗೆ ಇನ್ನು ಏಕ ಪರೀಕ್ಷೆ: ಸರ್ಕಾರಿ ಉದ್ಯೋಗ ನೇಮಕಾತಿ ಸರಳೀಕರಣಕ್ಕೆ ಎನ್​ಆರ್​ಎ ಸ್ಥಾಪನೆ

Student
Published on

ನವದೆಹಲಿ: ಕೇಂದ್ರ ಸರ್ಕಾರದ ಉದ್ಯೋಗಗಳ ನೇಮಕಾತಿ ಪ್ರಕ್ರಿಯೆಗೆ ಹೊಸ ಸ್ವರೂಪ ಮತ್ತು ಪಾರದರ್ಶಕತೆ ತರುವ ಸಲುವಾಗಿ ರಾಷ್ಟ್ರೀಯ ನೇಮಕಾತಿ ಸಂಸ್ಥೆ (ಎನ್​ಆರ್​ಎ) ಸ್ಥಾಪಿಸಲು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮಹತ್ವದ ಹೆಜ್ಜೆಯಿಟ್ಟಿದೆ.

ನೇಮಕಾತಿ ಸಂಸ್ಥೆ ರಚಿಸುವ ಕರಡು ಪ್ರಸ್ತಾವಕ್ಕೆ ಬುಧವಾರ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರಕಿದ್ದು, ಸಾಮಾನ್ಯ ಪ್ರವೇಶ ಪರೀಕ್ಷೆ ಮೂಲಕ ಸರ್ಕಾರದ ವಿವಿಧ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಹೊಸ ವಿಧಾನ ದೇಶದಲ್ಲಿ ಜಾರಿಗೆ ಬರಲಿದೆ. 2020ರ ಬಜೆಟ್​ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಸಂಸ್ಥೆ ಸ್ಥಾಪನೆ ಪ್ರಸ್ತಾವನೆ ಮುಂದಿಟ್ಟಿದ್ದರು.

ಗೆಜೆಟೆಡ್ ಅಲ್ಲದ ಗ್ರೂಪ್ ಬಿ ಮತ್ತು ಸಿಯ ಎಲ್ಲ ಹುದ್ದೆಗಳಿಗೆ ಒಂದೇ ಪ್ರವೇಶ ಪರೀಕ್ಷೆ ಇರಲಿದೆ. ಈ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ (ಸಿಇಟಿ) ಅರ್ಹತೆ ಪಡೆದ ಅಭ್ಯರ್ಥಿಗಳು ಯಾವುದೇ ನೇಮಕಾತಿ ಸಂಸ್ಥೆಗಳಿಗೂ ಉನ್ನತ ಮಟ್ಟದ ಪರೀಕ್ಷೆಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಈ ಪರೀಕ್ಷೆಯಲ್ಲಿ ಪಡೆಯುವ ಅಂಕಗಳಿಗೆ ಮೂರು ವರ್ಷಗಳ ಮಾನ್ಯತೆಯಿರಲಿದೆ. ಈ ಅವಧಿಯಲ್ಲಿ ಅಭ್ಯರ್ಥಿಗಳು ತಮ್ಮ ಯೋಗ್ಯತೆ, ಸಾಮರ್ಥ್ಯ ಹಾಗೂ ಆದ್ಯತೆಗಳಿಗೆ ಅನುಸಾರವಾಗಿ ವಿವಿಧ ಕ್ಷೇತ್ರಗಳಲ್ಲಿನ ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವ ಅವಕಾಶವಿರಲಿದೆ.

ದೇಶದಲ್ಲಿ ಪ್ರತಿ ಪರೀಕ್ಷೆಗೆ ಸರಾಸರಿ 2.5ರಿಂದ 3 ಕೋಟಿ ಯುವ ಅಭ್ಯರ್ಥಿಗಳು ಹಾಜರಾಗುತ್ತಾರೆ. ಸಾಮಾನ್ಯ ಪ್ರವೇಶ ಪರೀಕ್ಷೆಯಿಂದಾಗಿ ಅಭ್ಯರ್ಥಿಗಳು ಒಂದು ಬಾರಿ ಪರೀಕ್ಷೆ ಬರೆದು ಅರ್ಹತೆ ಗಿಟ್ಟಿಸಿಕೊಂಡಲ್ಲಿ, ನಂತರ ನೇರವಾಗಿ ಉನ್ನತ ಮಟ್ಟದ ಪರೀಕ್ಷೆಗಾಗಿ ಬೇರೆ ನೇಮಕಾತಿ ಏಜೆನ್ಸಿಗಳಿಗೆ ಅರ್ಜಿ ಸಲ್ಲಿಸಬಹುದು.

ಹತ್ತು ಹಲವು ಪರೀಕ್ಷೆ ಬರೆದು ಗೊಂದಲದಲ್ಲಿ ಸಿಲುಕುವ ಅಭ್ಯರ್ಥಿಗಳಿಗೆ ಏಕ ಪರೀಕ್ಷೆ ವರದಾನ ಎನಿಸಿಕೊಳ್ಳಲಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅಭಿಪ್ರಾಯಪಟ್ಟಿದ್ದಾರೆ.

10, 12ನೇ ತರಗತಿ ಮತ್ತು ಪದವಿ ಪೂರ್ಣಗೊಂಡವರಿಗೆ ಮೂರು ಹಂತಗಳಲ್ಲಿ ಪ್ರತ್ಯೇಕ ಸಿಇಟಿ ಪರೀಕ್ಷೆಗಳನ್ನು ಕೈಗೊಳ್ಳಲಾಗುವುದು. ರಾಷ್ಟ್ರೀಯ ನೇಮಕಾತಿ ಸಂಸ್ಥೆ ರಚನೆಗೊಳ್ಳುವ ಮೂಲಕ ಈವರೆಗೆ ಅಸ್ತಿತ್ವದಲ್ಲಿದ್ದ ಸ್ಟಾಫ್ ಸೆಲೆಕ್ಷನ್ ಕಮಿಷನ್, ರೈಲ್ವೆ ನೇಮಕಾತಿ ಮಂಡಳಿ ಮತ್ತು ಬ್ಯಾಂಕಿಂಗ್ ಸೇವಾ ಸಿಬ್ಬಂದಿ ಸಂಸ್ಥೆ (ಐಬಿಪಿಎಸ್) ಎಂಬ ಮೂರು ನೇಮಕಾತಿ ಸಂಸ್ಥೆಗಳು ಬದಿಗೆ ಸರಿಯಲಿವೆ. ಸಿಇಟಿಯಲ್ಲಿ ಉತ್ತೀರ್ಣಗೊಂಡ ಅಭ್ಯರ್ಥಿಗಳಲ್ಲಿ ತಮಗೆ ಬೇಕಾದವರನ್ನು ಈ ಮೂರು ಸಂಸ್ಥೆಗಳು ನಿರ್ದಿಷ್ಟ ಕ್ಷೇತ್ರಗಳಲ್ಲಿನ ಉದ್ಯೋಗಕ್ಕಾಗಿ ಆಯ್ಕೆ ಮಾಡಿಕೊಳ್ಳಬಹುದಾಗಿದೆ.

ಸಮೀಪದಲ್ಲೇ ಪರೀಕ್ಷೆ

ದೇಶದ ಪ್ರತಿ ಜಿಲ್ಲೆಯಲ್ಲಿ ಪರೀಕ್ಷಾ ಕೇಂದ್ರ ತೆರೆಯುವುದರಿಂದ ದೂರದ ಪ್ರದೇಶಗಳಿಂದ ಬರುವ ಅಭ್ಯರ್ಥಿಗಳಿಗೆ ಅನುಕೂಲವಾಗಲಿದೆ. 117 ಮಹತ್ವಾಕಾಂಕ್ಷಿ ಜಿಲ್ಲೆಗಳಲ್ಲಿ ಪರೀಕ್ಷಾ ಮೂಲಸೌಕರ್ಯಗಳನ್ನು ಹೆಚ್ಚಿಸುವ ಬಗ್ಗೆ ವಿಶೇಷ ಗಮನ ನೀಡಲು ಕೇಂದ್ರ ಉದ್ದೇಶಿಸಿದೆ. ಇದರಿಂದ ಅಭ್ಯರ್ಥಿಗಳು ತಮ್ಮ ಮನೆ/ಊರಿಗೆ ಹತ್ತಿರದ ಸ್ಥಳದಲ್ಲಿ ಪರೀಕ್ಷೆ ಬರೆಯಬಹುದು. ಗ್ರಾಮೀಣ ಅಭ್ಯರ್ಥಿಗಳಿಗೆ ಹೆಚ್ಚು ಅನುಕೂಲವಾಗಲಿದ್ದು ಮತ್ತು ಸರ್ಕಾರಿ ಉದ್ಯೋಗಗಳ ಮೇಲೆ ಹೆಚ್ಚಿನ ಆಸಕ್ತಿ ಮೂಡುವಂತೆ ಪ್ರೇರೇಪಿಸಲಿದೆ. ಈ ಮೂಲಕ ಕೇಂದ್ರ ಸರ್ಕಾರದ ಉದ್ಯೋಗಗಳಲ್ಲಿ ಅವರ ಪ್ರಾತಿನಿಧ್ಯ ಹೆಚ್ಚಲಿದೆ. ಅನೇಕ ಸಂದರ್ಭಗಳಲ್ಲಿ ಸುರಕ್ಷತೆ ಹಾಗೂ ಬೇರೆ ಬೇರೆ ಸಮಸ್ಯೆಗಳಿಂದಾಗಿ ಮಹಿಳಾ ಅಭ್ಯರ್ಥಿಗಳಿಗೆ ಪರೀಕ್ಷೆಗೆಂದು ದೂರದ ಊರುಗಳಿಗೆ ಪ್ರಯಾಣಿಸಲು ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ ಯಾರನ್ನಾದರೂ ಅವಲಂಬಿಸಿ ತೆರಳಬೇಕಾಗುತ್ತದೆ. ಜಿಲ್ಲೆಗಳಲ್ಲಿ ಪರೀಕ್ಷಾ ಕೇಂದ್ರ ಸ್ಥಾಪಿಸುವುದರಿಂದ ಈ ತೊಂದರೆ ನಿವಾರಣೆಯಾಗಲಿದೆ.

ಬಡವರಿಗೆ ಪರಿಹಾರ

ಪ್ರಸ್ತುತ ಅಭ್ಯರ್ಥಿಗಳು ವಿವಿಧ ಏಜೆನ್ಸಿಗಳು ನಡೆಸುವ ಹಲವು ಪರೀಕ್ಷೆಗಳಿಗೆ ಹಾಜರಾಗಬೇಕಾಗುತ್ತದೆ. ಪರೀಕ್ಷಾ ಶುಲ್ಕದ ಹೊರತಾಗಿ, ಪ್ರಯಾಣ, ವಾಸ್ತವ್ಯ ಮತ್ತು ಇತರ ಹೆಚ್ಚುವರಿ ವೆಚ್ಚಗಳನ್ನೂ ಭರಿಸಬೇಕು. ಒಂದೇ ಪರೀಕ್ಷೆಯಿಂದಾಗಿ ಅಭ್ಯರ್ಥಿಗಳ ಮೇಲಿನ ಆರ್ಥಿಕ ಹೊರೆ ಕಡಿಮೆಯಾಗಲಿದೆ.

1517 ಕೋಟಿ ರೂ. ನೆರವು

ರಾಷ್ಟ್ರೀಯ ನೇಮಕಾತಿ ಸಂಸ್ಥೆಗೆ ವಿನಿಯೋಗಿಸಲೆಂದೇ 1517.57 ಕೋಟಿ ರೂ. ಬಿಡುಗಡೆ ಮಾಡಲು ಸರ್ಕಾರ ಒಪ್ಪಿಗೆ ನೀಡಿದೆ. ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ಈ ಹಣ ಬಳಸಿಕೊಳ್ಳಲಾಗುವುದು. ಎನ್​ಆರ್​ಎ ಸ್ಥಾಪಿಸುವುದರ ಹೊರತಾಗಿ, 117 ಜಿಲ್ಲೆಗಳಲ್ಲಿ ಪರೀಕ್ಷಾ ಮೂಲಸೌಕರ್ಯಗಳನ್ನು ಹೊಂದಲು ಈ ಹಣ ವಿನಿಯೋಗಿಸಲಾಗುವುದು

ಎನ್​ಆರ್​ಎ ಸ್ಥಾಪನೆ ಮೂಲಕ ಸಿಇಟಿ ನಡೆಸಿ ಸರ್ಕಾರಿ ಹುದ್ದೆಗಳಿಗೆ ನೇಮಕಾತಿ ನಡೆಸುವುದು ಕ್ರಾಂತಿಕಾರಿ ಸುಧಾರಣೆ. ಇದರಿಂದ ನೇಮಕಾತಿ ಪ್ರಕ್ರಿಯೆ ಸುಲಭವಾಗಲಿದೆ. ಉದ್ಯೋಗಾಕಾಂಕ್ಷಿಗಳಿಗೂ ಅನುಕೂಲವಾಗಲಿದೆ. ಜಿತೇಂದ್ರ ಸಿಂಗ್, ಕೇಂದ್ರ ಸಚಿವ

ಲಾಭಗಳೇನು

  • ಏಕರೂಪದ ಪರಿವರ್ತಕ ನೇಮಕಾತಿ ಪ್ರಕ್ರಿಯೆ
  • ಗ್ರಾಮೀಣ ಯುವಕರು, ಮಹಿಳೆಯರು, ಹಿಂದುಳಿದ ಅಭ್ಯರ್ಥಿ ಗಳಿಗೆ ಸುಲಭ ಪ್ರವೇಶ
  • ಹತ್ತು ಹಲವು ಪರೀಕ್ಷೆ ಬರೆಯುವ ತಲೆನೋವಿಲ್ಲ
  • ಗ್ರಾಮೀಣ ಭಾಗದ ಯುವಕರಿಗೆ ಎನ್​ಆರ್​ಎ ಮಾದರಿ (ಮಾಕ್) ಪರೀಕ್ಷೆಗಳನ್ನೂ ನಡೆಸಲಿದೆ
  • 24 ಗಂಟೆ ಸಹಾಯವಾಣಿ, ಸಮಸ್ಯೆ ಪರಿಹಾರಕ್ಕಾಗಿ ವೆಬ್​ಸೈಟ್ ಕೂಡ ತೆರೆಯಲಾಗುವುದು

ಹೀಗಿರಲಿದೆ ಎನ್​ಆರ್​ಎ ಸಿಇಟಿ ಮೂಲಕ ಗ್ರೂಪ್ ಬಿ ಮತ್ತು ಸಿ (ತಾಂತ್ರಿಕೇತರ) ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಶಾರ್ಟ್​ಲಿಸ್ಟ್ ಮಾಡುವುದು ಎನ್​ಆರ್​ಎ ಜವಾಬ್ದಾರಿ. ಈ ಸಂಸ್ಥೆಯಲ್ಲಿ ರೈಲ್ವೆ ಸಚಿವಾಲಯ, ಹಣಕಾಸು ಸಚಿವಾಲಯ, ಸ್ಟಾಫ್ ಸೆಲೆಕ್ಷನ್ ಕಮಿಷನ್, ರೈಲ್ವೆ ನೇಮಕಾತಿ ಮಂಡಳಿ ಮತ್ತು ಐಬಿಪಿಎಸ್ ಪ್ರತಿನಿಧಿಗಳು ಇರಲಿದ್ದಾರೆ. ಸರ್ಕಾರದ ಕಾರ್ಯದರ್ಶಿ ಶ್ರೇಣಿಯ ಅಧಿಕಾರಿ ಸಂಸ್ಥೆಯ ಮುಖ್ಯಸ್ಥರಾಗಿರುತ್ತಾರೆ. ಕೇಂದ್ರ ಸರ್ಕಾರದ ನೇಮಕಾತಿ ಪ್ರಕ್ರಿಯೆಗೆ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಸಮರ್ಪಕ ವಿಧಾನಗಳನ್ನು ಅಳವಡಿಸುವ ವಿಶೇಷ ಸಂಸ್ಥೆಯಾಗಿ ಎನ್​ಆರ್​ಎ ಗುರುತಿಸಿಕೊಳ್ಳಲಿದೆ.

ದೇಶದ ಕೋಟ್ಯಂತರ ಯುವಕರಿಗೆ ಎನ್​ಆರ್​ಎ ವರದಾನವೆನಿಸಲಿದೆ. ಉದ್ಯೋಗಕ್ಕಾಗಿ ಹಲವು ಪರೀಕ್ಷೆಗಳನ್ನು ಬರೆಯಬೇಕೆನ್ನುವ ಅನಿವಾರ್ಯತೆಯನ್ನು ಇದು ತಪ್ಪಿಸಲಿದೆ. ಅಮೂಲ್ಯ ಸಂಪನ್ಮೂಲ, ಸಮಯವನ್ನೂ ಉಳಿಸಲಿದೆ. ಪಾರದರ್ಶಕತೆಗೂ ಉತ್ತೇಜನ ನೀಡಲಿದೆ. | ನರೇಂದ್ರ ಮೋದಿ ಪ್ರಧಾನಮಂತ್ರಿ

ಸಿಇಟಿ ಎಂದರೆ?

ಇದು ಕಂಪ್ಯೂಟರ್ ಆಧಾರಿತ ಆನ್​ಲೈನ್ ಸಾಮಾನ್ಯ ಅರ್ಹತಾ ಪರೀಕ್ಷೆಯಾಗಲಿದೆ. ಪದವಿ, ಹೈಯರ್ ಸೆಕೆಂಡರಿ (12 ನೇ ಪಾಸ್) ಮತ್ತು ಮೆಟ್ರಿಕ್ಯುಲೇಟ್ (10ನೇ ತರಗತಿ ಪಾಸ್) ಹೊಂದಿದ ಅಭ್ಯರ್ಥಿಗಳು ಈ ಪರೀಕ್ಷೆಗಳನ್ನು ಬರೆಯಲು ಅರ್ಹರಾಗಿರುತ್ತಾರೆ

ಆಯ್ಕೆಗಳು ಹೆಚ್ಚು

  • ಏಕರೂಪದ ಪಠ್ಯಕ್ರಮ ಮತ್ತು ಬಹು ಭಾಷೆಗಳಲ್ಲಿ ಪರೀಕ್ಷೆ ಬರೆಯುವ ಅವಕಾಶ
  • ಸಿಇಟಿ ಪರೀಕ್ಷೆಯ ಅಂಕಕ್ಕೆ ಮೂರು ವರ್ಷ ಅವಧಿಯ ಮಾನ್ಯತೆ ಇರಲಿದೆ
  • ವಯಸ್ಸಿನ ಮಿತಿ ಗಮನದಲ್ಲಿರಿಸಿಕೊಂಡು ಈ ಅವಧಿಯಲ್ಲಿ ಎಷ್ಟು ಬಾರಿ ಬೇಕಾದರೂ ಪರೀಕ್ಷೆ ಬರೆಯಬಹುದು. ಅಧಿಕ ಅಂಕಕ್ಕೆ ಮೊದಲ ಆದ್ಯತೆ
  • ಎಸ್ಸಿ/ಎಸ್ಟಿ, ಒಬಿಸಿ ಮತ್ತು ಅಂಗವಿಕಲರಿಗೆ ವಯಸ್ಸಿನ ಮಿತಿಯಲ್ಲಿ ವಿನಾಯಿತಿ
  • ಅಭ್ಯರ್ಥಿಗಳು ಪರೀಕ್ಷೆಗಳನ್ನು ತಮಗೆ ಬೇಕಾದಂತೆ ನಿಗದಿಗೊಳಿಸಬಹುದು ಮತ್ತು ತಮ್ಮಿಚ್ಛೆಯ ಪರೀಕ್ಷಾ ಕೇಂದ್ರವನ್ನುಆಯ್ದುಕೊಳ್ಳಬಹುದು
  • ಸಿಇಟಿ ಪರೀಕ್ಷೆ ಅಂಕಗಳನ್ನು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಕೇಂದ್ರಾಡಳಿತ ಪ್ರದೇಶ, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಮತ್ತು ಖಾಸಗಿ ಕ್ಷೇತ್ರದ ಸಂಸ್ಥೆಗಳೊಂದಿಗೆ ಹಂಚಿಕೊಳ್ಳಲಾಗುವುದು
  • ಇದರಿಂದ ಈ ಸಂಸ್ಥೆಗಳು ನೇಮಕಾತಿ ಪ್ರಕ್ರಿಯೆಗೆ ಬಳಸುವ ಅವಧಿ ಉಳಿಯಲಿದೆ ಮತ್ತು ಭರಿಸುವ ವೆಚ್ಚವನ್ನೂ ನಿಯಂತ್ರಿಸಬಹುದು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net