

ಬೆಂಗಳೂರು: ಕರೊನಾ ನಿರೋಧಕ ಲಸಿಕೆ ವಿತರಣೆ ಗುರಿ ಸಾಧನೆಗಾಗಿ ಸರ್ಕಾರಿ ಸವಲತ್ತುಗಳ ಕಡಿತ, ತಡೆ ಅಥವಾ ದಂಡ ವಿಧಿಸುವುದು ಸಾಧ್ಯವಿಲ್ಲ, ಸಾಧುವೂ ಅಲ್ಲವೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟಪಡಿಸಿದರು.
ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿ, ತಜ್ಞರು ಶಿಫಾರಸು ಮಾಡಿದ್ದಾರೆಂದು ಇಂತಹ ಕ್ರಮಗಳಿಗೆ ಮುಂದಾದರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ಜನರು ಜಾಗ್ರತೆವಹಿಸುವುದು, ಜಾಗೃತಿ ಮೂಡಿಸುವುದು, ಮನವೊಲಿಕೆಯೊಂದೇ ಲಸಿಕೆ ಅಭಿಯಾನ ಯಶಸ್ಸಿಗೆ ರಹದಾರಿ ಎಂದರು. ಕೆಲವು ದೇಶಗಳಲ್ಲಿ ಹೊಸ ಪ್ರಭೇದ ಒಮಿಕ್ರಾನ್ ಪತ್ತೆಯಾಗಿದೆ ಎಂದು ತಿಳಿದ ಬಳಿಕ ಎರಡನೇ ಡೋಸ್ ಹಾಕಿಸಿಕೊಳ್ಳದವರು ಎಚ್ಚೆತ್ತು ಮುಂದೆ ಬರುತ್ತಿದ್ದಾರೆ. ಸಾಕಷ್ಟು ಲಸಿಕೆ ಡೋಸ್ ದಾಸ್ತಾನಿದ್ದು, ಅರ್ಹ ಎಲ್ಲರೂ ಲಸಿಕೆ ಹಾಕಿಕೊಂಡರೆ ಕರೊನಾ ಪರಿಣಾಮಕಾರಿ ನಿಯಂತ್ರಣ ಸಾಧ್ಯವೆಂದು ಹೇಳಿದರು.
ಕ್ರಮಗಳು ಕಟ್ಟುನಿಟ್ಟಾಗಿ ಜಾರಿ: ‘ಒಮಿಕ್ರಾನ್’ ತಳಿಯು ವೇಗವಾಗಿ ಹರಡುತ್ತದೆ ಎಂಬ ಮಾಹಿತಿ ಲಭ್ಯವಾಗಿದ್ದು, ತಜ್ಞರು ಮತ್ತು ಅಧಿಕಾರಿಗಳ ಜತೆಗೆ ಮುಖ್ಯಮಂತ್ರಿ ರ್ಚಚಿಸಿ ಕಠಿಣ ಕ್ರಮಗಳನ್ನು ಕೈಗೊಂಡಿದ್ದಾರೆ. ಸಂಬಂಧಿಸಿದ ಇಲಾಖೆಗಳು ಪೂರಕವಾಗಿ ಮಾರ್ಗಸೂಚಿ ಹೊರಡಿಸಿದ್ದು, ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಲು ಎಲ್ಲ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು. ನಿರ್ವಹಣೆ ಹಾಗೂ ನಿಯಂತ್ರಣ ಮಾತ್ರವಲ್ಲದೆ, ಒಮಿಕ್ರಾನ್ ಸೋಂಕು ಪ್ರಕರಣಗಳು ಪತ್ತೆಯಾದರೆ ಚಿಕಿತ್ಸೆ, ಆರೈಕೆಗೆ ಬೇಕಾದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳಲ್ಲಿ ವಿಶೇಷ ವಾರ್ಡ್ಗಳನ್ನು ತೆರೆಯಲು ತೀರ್ವನಿಸಲಾಗಿದೆ ಎಂದು ತಿಳಿಸಿದರು.
ವಿಳಂಬಕ್ಕೆ ಸಹಕಾರ ಅಗತ್ಯ: ವಿದೇಶದಿಂದ ಬರುವ ಎಲ್ಲರಿಗೂ ಆರ್ಟಿಪಿಸಿಆರ್ ಟೆಸ್ಟ್ ಕಡ್ಡಾಯಗೊಳಿಸಿದ್ದು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರತಿದಿನ 2,000 ಜನ ಬರುತ್ತಾರೆ. ಟೆಸ್ಟ್ ಮಾಡುವುದರಿಂದ ಹೊರಗೆ ಬರುವುದು ವಿಳಂಬವಾಗಲಿದೆ. ವಿದೇಶಿ ಪ್ರಯಾಣಿಕರು ವಿಶೇಷ ಪರಿಸ್ಥಿತಿ ಅರ್ಥ ಮಾಡಿಕೊಂಡು ಸಹಕರಿಸಬೇಕು ಎಂದು ಕೋರಿದರು. ಆರ್ಟಿಪಿಸಿಆರ್ ಟೆಸ್ಟ್ನ ನೆಗೆಟಿವ್ ವರದಿ ಬಂದರೂ ಏಳು ದಿನ ಮನೆಯಲ್ಲೇ ಇರುವುದು ಕಡ್ಡಾಯ. ಈ ಅವಧಿಯಲ್ಲಿ ಕ್ವಾರಂಟೈನ್ ಆಪ್ ಮೂಲಕ ಅವರ ಮೇಲೆ ನಿಗಾವಹಿಸಲಾಗುತ್ತದೆ. ನೆಗೆಟಿವ್ ವರದಿ ಬಂದರೂ ರೋಗ ಲಕ್ಷಣಗಳಿದ್ದರೆ ಐದು ದಿನಗಳ ನಂತರ ಮತ್ತೊಮ್ಮೆ ಟೆಸ್ಟ್ ಮಾಡಲಿದ್ದು, ಮತ್ತೆ ನೆಗೆಟಿವ್ ದೃಢಪಟ್ಟರೆ ಏಳು ದಿನ ಹೋಂ ಕ್ವಾರಂಟೈನ್ ತಪು್ಪವುದಿಲ್ಲ. ತಪಾಸಣೆ ಕಾಲಕ್ಕೆ ಪಾಸಿಟಿವ್ ಖಚಿತವಾದರೆ ಅಂತಹವರನ್ನು ಪ್ರತ್ಯೇಕ ವಾರ್ಡ್ಗೆ ದಾಖಲಿಸಿ ಚಿಕಿತ್ಸೆ ಮತ್ತು ಆರೈಕೆಗೆ ಬೇಕಾದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಇಎಸ್ಐ ಆಸ್ಪತ್ರೆ ಡೀನ್ ತಲೆದಂಡ: ಶವಾಗಾರದ ಶೈತ್ಯಾ ಗಾರದಲ್ಲಿ 15 ತಿಂಗಳ ಕಾಲ ಕೋವಿಡ್ನಿಂದ ಮೃತರಾದ ಚಾಮರಾಜ ಪೇಟೆಯ ದುರ್ಗಾ ಮತ್ತು ಕೆ.ಪಿ. ಅಗ್ರಹಾರದ ಮುನಿರಾಜು ಶವಗಳು ಕೊಳೆತಿದ್ದ ಪ್ರಕರಣ ಹಿನ್ನೆಲೆಯಲ್ಲಿ ಬೆಂಗಳೂರಿನ ರಾಜಾಜಿನಗರ ಇಎಸ್ಐ ಆಸ್ಪತ್ರೆಯ ಡೀನ್ ಜಿತೇಂದ್ರ ಕುಮಾರ್ ತಲೆದಂಡ ಆಗಿದ್ದು, ಆಸ್ಪತ್ರೆಗೆ ಹೊಸ ಡೀನ್ ಆಗಿ ಡಾ. ರೇಣುಕಾ ರಾಮಯ್ಯ ಅವರನ್ನು ನೇಮಿಸಿ ಕಾರ್ವಿುಕ ಇಲಾಖೆ ಅದೇಶ ಹೊರಡಿಸಿದೆ.
ಕೋವಿಡ್ ಸೇನಾನಿಗಳಿಗೆ ಬೂಸ್ಟರ್ ಡೋಸ್ ಚಿಂತನೆ: ಕೋವಿಡ್ ಸೇನಾನಿಗಳಿಗೆ ಬೂಸ್ಟರ್ ಡೋಸ್ ನೀಡುವ ಬಗ್ಗೆ ಚಿಂತನೆ ನಡೆದಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಡಿ. 2ರಂದು ದೆಹಲಿಗೆ ತೆರಳಲಿದ್ದು, ಕೇಂದ್ರ ಆರೋಗ್ಯ ಸಚಿವರನ್ನು ಭೇಟಿ ಮಾಡಿ ಈ ಕುರಿತು ರ್ಚಚಿಸಲಾಗುವುದು. ಟಾಸ್ಕ್ಫೋರ್ಸ್ ಸಭೆಯಲ್ಲಿಯೂ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು.
ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಕೋವಿಡ್ ಮೊದಲ ಮತ್ತು 2ನೇ ಲಸಿಕೆ ನೀಡಿ 6-7 ತಿಂಗಳು ಕಳೆದಿವೆ. ಈಗ ಬೂಸ್ಟರ್ ಡೋಸ್ ನೀಡಬಹುದೇ ಎಂಬುದರ ಬಗ್ಗೆ ರ್ಚಚಿಸಲಾಗುವುದು ಎಂದರು. ಬೂಸ್ಟರ್ ಡೋಸ್ನ ಸ್ಯಾಂಪಲ್ ಅನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅದರ ವರದಿ ಬಂದ ನಂತರ ಬೂಸ್ಟರ್ ಡೋಸ್ ನೀಡುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು. ಕೋವಿಡ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕ್ರಿಸ್ಮಸ್ ಹಾಗೂ ಹೊಸ ವರ್ಷಾಚರಣೆಗೆ ನಿರ್ಬಂಧ ಹೇರುವ ಬಗ್ಗೆ ಇನ್ನೂ ಅಂತಿಮ ತೀರ್ಮಾನ ಕೈಗೊಂಡಿಲ್ಲ ಎಂದರು. ಹೊಸ ತಾಲೂಕುಗಳಿಗೆ ಮೂಲ ಸೌಕರ್ಯ ನೀಡಿದ್ದಕ್ಕೆ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿರುವುದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಪ್ರತಿಕ್ರಿಯಿಸಿ, ಕೋವಿಡ್ ಹಿನ್ನೆಲೆಯಲ್ಲಿ ಹೊಸ ತಾಲೂಕುಗಳಿಗೆ ಸೌಲಭ್ಯ ನೀಡುವುದು ತಡವಾಗಿದೆ. ಶೀಘ್ರ ಅಗತ್ಯ ಸೌಕರ್ಯ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಕರೊನಾ ಪರೀಕ್ಷೆಗಳ ಸಂಖ್ಯೆ ಒಂದು ಲಕ್ಷಕ್ಕೆ ಹೆಚ್ಚಳ: ಕೋವಿಡ್ ಹೊಸತಳಿ ಒಮಿಕ್ರಾನ್ ಹಾಗೂ ಸೋಂಕು ಪ್ರಕರಣಗಳ ಏರಿಕೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕೋವಿಡ್ ಪರೀಕ್ಷೆ ಸಂಖ್ಯೆ ಹೆಚ್ಚಿಸಲಾಗಿದೆ. ಬುಧವಾರ 1.01 ಲಕ್ಷ ಮಾದರಿಗಳ ಪರೀಕ್ಷೆ ನಡೆಸಲಾಗಿದ್ದು, 322 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಚಿಕಿತ್ಸೆ ಫಲಿಸದೆ ಇಬ್ಬರು ಸೋಂಕಿತರು ಸಾವಿಗೀಡಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 162 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಗುಣಮುಖರ ಒಟ್ಟು ಸಂಖ್ಯೆ 29.51 ಲಕ್ಷ ಮೀರಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 6,574 ತಲುಪಿದೆ. ಈವರೆಗೂ 38,213 ಮಂದಿ ಮೃತ ಪಟ್ಟಿದ್ದು, 29.96 ಲಕ್ಷಕ್ಕೂ ಅಧಿಕ ಮಂದಿ ಸೋಂಕಿನಿಂದ ಬಳಲಿದ್ದಾರೆ.
9ನೇ ತರಗತಿ ವಿದ್ಯಾರ್ಥಿಗೆ ಕರೊನಾ: ಹುಬ್ಬಳ್ಳಿಯ ಆದರ್ಶ ನಗರ ರೋಟರಿ ಶಾಲೆ 9ನೇ ತರಗತಿ ವಿದ್ಯಾರ್ಥಿಗೆ ಕೋವಿಡ್ ತಗುಲಿರುವುದು ಗೊತ್ತಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಡಿ. 6ರವರೆಗೆ ಶಾಲೆಗೆ ರಜೆ ಘೊಷಿಸಲಾಗಿದೆ.
655 ರೂಪಾಂತರ ತಳಿಗಳ ಪತ್ತೆ: ಒಮಿಕ್ರಾನ್ ಕೋವಿಡ್ ರೂಪಾಂತರ ತಳಿಯ ಆತಂಕದ ಬೆನ್ನಲ್ಲೇ ರಾಜ್ಯದಲ್ಲಿ 655 ರೂಪಾಂತರ ತಳಿ ವರದಿಯಾಗಿವೆ. ಈ ಪೈಕಿ 397 ಡೆಲ್ಟಾ (ಬಿ.1.617.2) ಹಾಗೂ 258 (ಡೆಲ್ಟಾ ಉಪ ತಳಿಗಳು)ಪತ್ತೆಯಾಗಿವೆ. ರಾಜ್ಯದಲ್ಲಿ ಈವರೆಗೆ 155 ಆಲ್ಪಾ (ಬಿ.1.1.7), ಬೀಟ (ಬಿ.1.351), ಡೆಲ್ಟಾ (ಬಿ.1.617.2), ಡೆಲ್ಟಾ ಉಪತಳಿ 558, ಕಾಪಾ (ಬಿ.1.617.1) 160 ಮತ್ತು ಈಟಾ (ಬಿ.1.525) ಒಂದು ಸೇರಿ ರೂಪಾಂತರ ತಳಿಗಳ ಒಟ್ಟು ಸಂಖ್ಯೆ 2,977ಗೆ ಏರಿಕೆಯಾಗಿದೆ.