

ಸಾಗರ: ಸೊರಬದಲ್ಲಿ ನಾಲ್ಕು ದಶಕಗಳ ನಂತರ ಇಸ್ಪೀಟ್ ಕ್ಲಬ್ ಆರಂಭವಾಗಿದೆ. ಊರಿಗೆ ಬುದ್ಧಿ ಹೇಳುವ ಜಾಗದಲ್ಲಿರುವ ಶಿಕ್ಷಣ ಸಚಿವರ ಕ್ಷೇತ್ರದಲ್ಲಿಯೇ ಕ್ಲಬ್ ನಡೆಯುತ್ತಿದೆ. ತಂದೆ ಎಸ್.ಬಂಗಾರಪ್ಪ ಅವರ ಹೆಸರು ಉಳಿಸುವ ಉದ್ದೇಶ ಇದ್ದರೆ ಸಚಿವರು ಮೊದಲು ಇಸ್ಪೀಟ್ ಕ್ಲಬ್ ಬಂದ್ ಮಾಡಿಸಲಿ ಎಂದು ಮಾಜಿ ಸಚಿವ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ ಸವಾಲು ಹಾಕಿದರು.
ಎಸ್.ಬಂಗಾರಪ್ಪ ಮುಖ್ಯಮಂತ್ರಿ ಆಗಿದ್ದ ಸಂದರ್ಭ, ಅವರ ಅಣ್ಣ ಕುಮಾರ್ ಬಂಗಾರಪ್ಪ ಸಚಿವರಾಗಿದ್ದ ಸಂದರ್ಭ ಸೊರಬದಲ್ಲಿ ಇಸ್ಪೀಟ್ ಕ್ಲಬ್ ಮತ್ತಿತರ ಜೂಜಾಟಕ್ಕೆ ಅವಕಾಶ ಇರಲಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರಾಗಿ ಜಿಲ್ಲೆಯ ಸಮಗ್ರ ಅಭಿವೃದ್ಧಿ ಬಗ್ಗೆ ಕಿಂಚಿತ್ತೂ ಗಮನ ಕೊಡದಿರುವುದೇ ಸಚಿವರ ಎರಡು ವರ್ಷದ ಸಾಧನೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.
ಸಾಗರ ಕ್ಷೇತ್ರದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಎರಡು ವರ್ಷದಲ್ಲಿ ರೈತರ ಮೇಲೆ ಶೋಷಣೆ ಮಾಡಿದ್ದು ಹೊರತುಪಡಿಸಿದರೆ ಯಾವುದೇ ಅಭಿವೃದ್ಧಿ ಕೆಲಸಕ್ಕೆ ಒತ್ತು ನೀಡಿಲ್ಲ. ಮಡಸೂರಿನ 7 ರೈತರನ್ನು 13 ದಿನ ಜೈಲಿಗೆ ಕಳಿಸಿದ್ದು, ಹೆನಗೆರೆ ಬಡ ಬ್ರಾಹ್ಮಣ ರೈತ ಕುಟುಂಬದ ಮೇಲೆ ಹಲ್ಲೆ, ಇರುವಕ್ಕಿ ಮೂರು ಬ್ರಾಹ್ಮಣ ಕುಟುಂಬವನ್ನು ಒಕ್ಕಲೆಬ್ಬಿಸಿದ್ದು, ಹೊಸನಗರದಲ್ಲಿ ಎಸ್‌ಸಿ ಮಹಿಳೆಯ ಶುಂಠಿ ತೋಟ ನಾಶ ಮಾಡಿದ್ದು, ಕೋಟೆಕೊಪ್ಪದಲ್ಲಿ ಮಡಿವಾಳ ಕುಟುಂಬವನ್ನು ಒಕ್ಕಲೆಬ್ಬಿಸಿದ್ದು, ನೆಲ್ಲಿಬೀಡು ಜೈನ ಸಮಾಜದವರ ಬೇಲಿ ತೆರವು, ಆವಿನಹಳ್ಳಿಯಲ್ಲಿ ಜಮೀನು ಅತಿಕ್ರಮಣ ಹೀಗೆ ಸಾಲು ಸಾಲು ರೈತರ ಶೋಷಣೆ ನಡೆಸಿದ ದೊಡ್ಡಪಟ್ಟಿಯೇ ಸಾಗರ ಕ್ಷೇತ್ರದ ಶಾಸಕರ ಎರಡು ವರ್ಷದ ಸಾಧನೆ ಎಂದು ಕುಟುಕಿದರು.
ಶಾಸಕ ಗೋಪಾಲಕೃಷ್ಣ ಬೇಳೂರಿಗೆ ಸಂಸದ ಬಿ.ವೈ.ರಾಘವೇಂದ್ರ ಅವರು ಪ್ರಯಾಣಿಕರ ತಂಗುದಾಣ ಮಾಡಿದ್ದು ಮಾತ್ರ ಕಾಣುತ್ತದೆ. ಆದರೆ ಸಂಸದರು ಮಾಡಿರುವ ವಿಮಾನ ನಿಲ್ದಾಣ, ತುಮರಿ ಸೇತುವೆ, ರೈಲ್ವೆ ಅಭಿವೃದ್ದಿ ಕಾಮಗಾರಿಗಳು ಅವರ ಕಣ್ಣಿಗೆ ಕಾಣುತ್ತಿಲ್ಲ. ಜಿಲ್ಲೆಗೆ ಅತಿ ಹೆಚ್ಚು ಹಣ ತಂದು ಜಿಲ್ಲೆಯ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ಎರಡು ವರ್ಷದಿಂದ ಹಸಿರುಮಕ್ಕಿ ಸೇತುವೆ ಕಾಮಗಾರಿ ಯಾಕೆ ಮುಂದುವರಿದಿಲ್ಲ. ನಾನು ಶಾಸಕನಾಗಿದ್ದಾಗ 11 ಕೋಟಿ ರೂ. ಮಂಜೂರು ಮಾಡಿಸಲಾಗಿತ್ತು. ಆದರೆ ಈಗ ಶಾಸಕರು ಕಾಮಗಾರಿ ವಿಳಂಬವಾಗಲು ಕಾರಣ ಏನೆಂಬುದನ್ನು ಮೊದಲು ಜನತೆಗೆ ತಿಳಿಸಲಿ ಎಂದರು.
ಹಕ್ಕುಪತ್ರ ವಿಚಾರದಲ್ಲಿ ಎಲ್ಲರಿಂದಲೂ ಪ್ರಮಾದ: ಶರಾವತಿ ಮುಳುಗಡೆ ಸಂತ್ರಸ್ತರಿಗೆ ಹಕ್ಕುಪತ್ರ ಕೊಡಿಸುವಲ್ಲಿ ಎಲ್ಲರೂ ಎಡವಿದ್ದಾರೆ. ಬಂಗಾರಪ್ಪ ಮುಖ್ಯಮಂತ್ರಿಯಾಗಿ, ಕಾಗೋಡು ತಿಮ್ಮಪ್ಪ ಸಚಿವರಾಗಿ, ಬೇಳೂರು ಮೂರನೇ ಬಾರಿ ಶಾಸಕರಾಗಿ ಹಕ್ಕುಪತ್ರ ಏಕೆ ಕೊಡಿಸಲಿಲ್ಲ? ಶರಾವತಿ ಮುಳುಗಡೆ ಸಂತ್ರಸ್ತರಿಗೆ ಹಕ್ಕುಪತ್ರ ಕೊಡಿಸುವುದು ನನ್ನ ಆದ್ಯತಾ ವಿಷಯ. ಇದಕ್ಕಾಗಿ ದೆಹಲಿಗೆ ಹೋಗಿ ಸಚಿವರ ಮೇಲೆ ಒತ್ತಡ ತರಲಾಗಿದೆ. ಬೇಳೂರು ಎಷ್ಟು ಬಾರಿ ದೆಹಲಿಗೆ ಹೋಗಿದ್ದಾರೆ. ಅಷ್ಟಕ್ಕೂ ಮಧು ಬಂಗಾರಪ್ಪ, ಬೇಳೂರಿಗೆ ಶರಾವತಿ ಮುಳುಗಡೆ ಸಂತ್ರಸ್ತರ ಬಗ್ಗೆ ಸರಿಯಾದ ವಿಷಯವೇ ಗೊತ್ತಿಲ್ಲ. ಸಮಸ್ಯೆಯನ್ನೇ ಪ್ರಚಾರಕ್ಕಾಗಿ ಬಳಸಿಕೊಳ್ಳುವುದು ಒಳ್ಳೆಯದಲ್ಲ. ಪರಿಹಾರಕ್ಕೆ ಆದ್ಯತೆ ನೀಡಬೇಕು ಎಂದರು
ದೇವೇಂದ್ರಪ್ಪ, ಗಣೇಶ್ ಪ್ರಸಾದ್, ಟಿ.ಡಿ.ಮೇಘರಾಜ್, ಮಲ್ಲಿಕಾರ್ಜುನ ಹಕ್ರೆ, ಎಚ್.ಎಸ್.ರಮೇಶ್, ಗಿರೀಶ್ ಗುಳ್ಳಳ್ಳಿ, ಸತೀಶ್, ಸುಜಯ್ ಶೆಣೈ, ಜನಾರ್ದನ್ ಸುದ್ದಿಗೋಷ್ಠಿಯಲ್ಲಿದ್ದರು.