ರೈತರ ಬಗ್ಗೆ ಲಘುವಾದ ಹೇಳಿಕೆ; ಸಚಿವ ಶಿವಾನಂದ ಪಾಟೀಲ್ ರಾಜೀನಾಮೆಗೆ ಬಿಜೆಪಿ ಆಗ್ರಹ

B Y Vijayendra 2
Published on

ಬೆಂಗಳೂರು:
ಸಚಿವ ಶಿವಾನಂದ ಪಾಟೀಲರು ರೈತರ ಬಗ್ಗೆ ಲಘುವಾದ ಹೇಳಿಕೆ ನೀಡಿರುವ ಬಗ್ಗೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಮಾತನಾಡಿ, ಪದೇ ಪದೇ ಅನ್ನದಾತರನ್ನು ಅವಮಾನಿಸುವುದು, ರೈತರ ಜೀವನನ್ನು ಹಂಗಿಸುವುದು, ರೈತರ ಮೇಲೆ ದೌರ್ಜನ್ಯ ನಡೆಸುವುದು ಕಾಂಗ್ರೆಸ್‌ನ ಸಂಸ್ಕೃತಿಯಾಗಿದೆ ಎಂದರು.
ರೈತರನ್ನು ಹಂಗಿಸುವ ಉಸ್ತುವಾರಿಯನ್ನು ಶಿವಾನಂದ ಪಾಟೀಲರಿಗೆ ಕಾಂಗ್ರೆಸ್ ನೀಡಿದಂತಿದೆ. ಹಿಂದೆಯೂ ಅವರು ರೈತರನ್ನು ಅವಮಾನಿಸಿದ್ದರು. ಸಿದ್ದರಾಮಯ್ಯ ಸಂಪುಟದಲ್ಲಿ ಅಜ್ಞಾನಿಗಳು, ಅವಿವೇಕಿಗಳೇ ತುಂಬಿದ್ದಾರೆ ಎಂದು ಟೀಕಿಸಿದ್ದಾರೆ.
ಯಾವ ರೈತರು ಬರಗಾಲ ಬರಲಿ ಎಂದು ಕಾಯ್ದು ಕುಳಿತಿಲ್ಲ. ರಾಜ್ಯ ಸರಕಾರದ ಸಚಿವರು ಬೇಜವಾಬ್ದಾರಿ ಹೇಳಿಕೆಗಳನ್ನು ನೀಡಿ ರೈತರನ್ನು ಅವಮಾನಿಸುತ್ತಿದ್ದಾರೆ. ಇಂಥ ಸಚಿವರಿಗೆ ಮುಖ್ಯಮಂತ್ರ್ರಿಗಳು ಬುದ್ಧಿವಾದ ಹೇಳಬೇಕು. ಆದರೂ, ತಿದ್ದಿಕೊಳ್ಳದ ಸಚಿವರುಗಳ ರಾಜೀನಾಮೆ ಪಡೆಯಬೇಕು ಎಂದು ಆಗ್ರಹಿಸಿದರು.
ಅನ್ನ ಕೊಡುವ ರೈತರ ಬಗ್ಗೆ ಸಚಿವರ, ಸರಕಾರದ ಧೋರಣೆ ಆಕ್ಷೇಪಾರ್ಹ. ಮತ್ತೆ ಮತ್ತೆ ಅವರು ರೈತರನ್ನು ಅವಮಾನ ಮಾಡಿದ್ದಾರೆ ಎಂದು ಆಕ್ಷೇಪಿಸಿದರು.
ದೆಹಲಿ ಪ್ರವಾಸದ ವೇಳೆ ಜಮೀರ್ ಅಹಮದ್ ಅವರ ವರ್ತನೆಯನ್ನೂ ಖಂಡಿಸಿದರು.
ರೈತರಿಗೆ ಅವಮಾನ ಮಾಡುವ ರಾಜ್ಯ ಸರ್ಕಾರ, ಬರಗಾಲದಿಂದ ರೈತರು ನೊಂದಿದ್ದರೂ, ಇನ್ನೂ ಸಮರ್ಪಕ ಪರಿಹಾರ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಿವಾನಂದ ಪಾಟೀಲ್, ಜಮೀರ್ ಅಹಮದ್ ಸೇರಿ ಸಚಿವರ ನಡವಳಿಕೆ ನಾವೆಲ್ಲ ತಲೆತಗ್ಗಿಸುವಂತಿದೆ ಎಂದೂ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net