ಮುಗಿಯದ ವೀಣಾ ಮುನಿಸು; ಆಕೆ ಬಂದ್ರು, ಬರದೇ ಇದ್ರು… ಸಚಿವ ಶಿವಾನಂದ ಪಾಟೀಲ್​ ಹೇಳಿದ್ದಿಷ್ಟು

WhatsApp Image 2024-04-13 at 2.34.52 PM
Published on

ಬಾಗಲಕೋಟೆ: ಲೋಕಸಭಾ ಚುನಾವಣೆ 2024ರ ಕಾವು ದಿನದಿಂದ ದಿನಕ್ಕೆ ತೀವ್ರವಾಗುತ್ತಿದ್ದು, ಬಾಗಲಕೋಟೆ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ್​ ಪರ ಈಗಾಗಲೇ ಬಿರುಸಿನ ಪ್ರಚಾರ ಪ್ರಾರಂಭವಾಗಿದೆ. ಕೈ ಟಿಕೆಟ್ ಆಕಾಂಕ್ಷಿಯಾಗಿದ್ದ ಶಾಸಕ ವಿಜಯಾನಂದ ಕಾಶಪ್ಪನವರ್ ಪತ್ನಿ ವೀಣಾ ಕಾಶಪ್ಪನವರ್​ ತಮಗೆ ಟಿಕೆಟ್ ಸಿಗದಿದ್ದಕ್ಕೆ ಭಾರೀ ಅಸಮಾಧಾನ ಹೊರಹಾಕಿದ್ದರು. ಮುಗಿಯದ ವೀಣಾ ಮುನಿಸು ಇಂದಿಗೂ ಮುಂದುವರೆದಿದ್ದು, ಈ ಬಗ್ಗೆ ಸಚಿವ ಶಿವಾನಂದ ಪಾಟೀಲ್ ಪ್ರತಿಕ್ರಿಯಿಸಿದ್ದಾರೆ.

ಇಂದು ಬಾಗಲಕೋಟೆಯಲ್ಲಿ ಮಾತನಾಡಿದ ಸಚಿವ ಶಿವಾನಂದ ಪಾಟೀಲ, "ವೀಣಾ ಪತಿ ವಿಜಯಾನಂದ ಕಾಶಪ್ಪನವರ ಏನ್ ಮಾತಾಡಿದ್ದಾರೆ? ತನು, ಮನ, ಧನದಿಂದ ಮಾಡ್ತೇನೆ ಅಂದಿದ್ದಾರೆ. ಇದಕ್ಕಿಂತ ಇನ್ನೇನು ಬೇಕು ರೀ, ವೀಣಾ ಕಾಣದೇ ಇದ್ದರೆ ಏನದಾರೂ ಕಡಿಮೆ ಆಗಿತ್ತಂತ ಭಯ ಇದೆಯಾ? ಇಲ್ಲ, ನನಗಂತೂ ಭಯವಿಲ್ಲ. ಅವರು ಕಾಣದಿದ್ರು, ಆ ಕ್ಷೇತ್ರದಲ್ಲಿ ಹೆಚ್ಚಿಗೆ ಮಾಡ್ತೇನೆ ಅಂತ ವಿಜಯಾನಂದ ಹೇಳಿದ್ದಾರೆ" ಎಂದರು.

"ವಿಜಯಾನಂದ ಕಾಶಪ್ಪನವರ ಮೇಲೆ ನನಗೆ ವಿಶ್ವಾಸವಿದೆ. ವೀಣಾ ಬಂದ್ರು, ಬರದೇ ಇದ್ರು ಸ್ವಾಗತ ಮಾಡ್ತೇನೆ. ರಾಜಕಾರಣ ಬಹಳ ದೊಡ್ಡದಿದೆ. ವೀಣಾ ವಯಸ್ಸು ಚಿಕ್ಕದಿದೆ. ಅವರಿಗೆ ಕಳೆದ ಸಲ ನಾನೇ ಜಿಪಂ ಅಧ್ಯಕ್ಷ ಸ್ಥಾನ 6 ತಿಂಗಳು ಮುಂದುವರೆಸಿದ್ದೆ. ಲೋಕಸಭೆ ಟಿಕೆಟ್ ಕೊಡಿಸಿ ಎಲ್ಲರೂ ಪ್ರಯತ್ನ ಮಾಡಿದ್ವಿ. ವೀಣಾ ಇಂದಿಲ್ಲ ನಾಳೆ ಗೆಲ್ಲಬೇಕು ಎನ್ನುವ ಹಾಗೂ ಅವರನ್ನು ಮಾಡಬೇಕು ಎನ್ನುವ ಆಸೆ ನನಗೂ ಇದೆ" ಎಂದರು.

"ಕಾಂಗ್ರೆಸ್​ಗೆ ಯಾರೇ ಬಂದ್ರು ಸ್ವಾಗತ ಮಾಡ್ತೇವೆ ಅಂತ ನಮ್ಮ ರಾಜ್ಯಾಧ್ಯಕ್ಷರೇ ಹೇಳಿದ್ದಾರೆ. ಇಲ್ಲಿ ನಾನು ಪಕ್ಷಕ್ಕೆ ಕರೆತರುವ ಪ್ರಯತ್ನ ಮಾಡ್ತಿದ್ದೀನೆ. ಎಷ್ಟು ಸಫಲ ಆಗ್ತೇನೆ, ವಿಫಲ ಆಗ್ತೇನೆ ಗೊತ್ತಿಲ್ಲ" ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net