ತಸ್ತಿಕ್ ಬಿಡುಗಡೆಗೆ ಸಚಿವರಿಂದ ಸ್ಪಂದನೆ

varalakshmi
ಪಡುವಳ್ಳಿಯ ಏಳು ಮಕ್ಕಳ ಚೌಡೇಶ್ವರಿ ದೇವಸ್ಥಾನದ ಆವರಣದಲ್ಲಿ ಬಿ.ವರಲಕ್ಷ್ಮೀ ಪ್ರಕಾಶ್ ಗೋಪೂಜೆ ನೆರವೇರಿಸಿದರು. ಹರ್ಷೇಂದ್ರಕುಮಾರ್, ಕಿಟ್ಟಪ್ಪ, ಭಾಗ್ಯಮ್ಮ, ಪ್ರೀತಂಕುಮಾರ್ ಇತರರಿದ್ದರು.
Published on

ಶಿವಮೊಗ್ಗ: ಜಿಲ್ಲೆಯ ಮುಜರಾಯಿ ದೇವಸ್ಥಾನಗಳ ಸಮಸ್ಯೆಗಳನ್ನು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಅವರ ಗಮನಕ್ಕೆ ತರಲಾಗಿದೆ. ಹಾಗೆಯೇ ಅರ್ಚಕರಿಗೆ ತಸ್ತಿಕ್ ಹಣ ಕೂಡಲೇ ಬಿಡುಗಡೆ ಮಾಡುವಂತೆಯೂ ಮನವಿ ಮಾಡಿದ್ದು, ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಧಾರ್ಮಿಕ ದತ್ತಿ ಮತ್ತು ಧರ್ಮದಾಯ ಇಲಾಖೆಯ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯೆ ಬಿ.ವರಲಕ್ಷ್ಮೀ ಪ್ರಕಾಶ್ ತಿಳಿಸಿದ್ದಾರೆ.

ಮುಜರಾಯಿ ದೇವಸ್ಥಾನಗಳಲ್ಲಿ ಗೋಪೂಜೆ ನೆರವೇರಿಸಲು ಸರ್ಕಾರ ಸುತ್ತೋಲೆ ಹೊರಡಿಸಿದ್ದ ಹಿನ್ನೆಲೆಯಲ್ಲಿ ತೀರ್ಥಹಳ್ಳಿ ತಾಲೂಕಿನ ಪಡುವಳ್ಳಿಯ ಏಳು ಮಕ್ಕಳ ಚೌಡೇಶ್ವರಿ ದೇವಸ್ಥಾನದ ಆವರಣದಲ್ಲಿ ಗೋಪೂಜೆ ನೆರವೇರಿಸಿ ಮಾತನಾಡಿದ ಅವರು, ಮುಜರಾಯಿ ದೇವಸ್ಥಾನಗಳಲ್ಲಿ ಪೂಜಾ ಕೈಂಕರ್ಯ ನಡೆಸುತ್ತಿರುವ ಅರ್ಚಕ ಸಮುದಾಯಕ್ಕೆ ತಸ್ತಿಕ್ ಹಣ ಬಿಡುಗಡೆ ವಿಳಂಬದಿಂದ ತೊಂದರೆಯಾಗುತ್ತಿರುವ ಬಗ್ಗೆ ಸರ್ಕಾರಕ್ಕೆ ಹಾಗೂ ಜಿಲ್ಲಾ ಧಾರ್ಮಿಕ ಪರಿಷತ್‌ಗೆ ಸಹಾನುಭೂತಿಯಿದೆ ಎಂದರು.

ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಗ್ರಾಮಸ್ಥರ ಪರವಾಗಿ ಬಿ.ವರಲಕ್ಷ್ಮೀ ಪ್ರಕಾಶ್ ಅವರನ್ನು ಸನ್ಮಾನಿಸಲಾಯಿತು. ಸಫಾಯಿ ಕರ್ಮಚಾರಿ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯ ಪಡುವಳ್ಳಿ ಹರ್ಷೇಂದ್ರಕುಮಾರ್, ತೀರ್ಥಹಳ್ಳಿ ಬ್ಲಾಕ್ ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ಕಿಟ್ಟಪ್ಪ, ಹೊನ್ನೆತಾಳು ಗ್ರಾಪಂ ಸದಸ್ಯೆ ಭಾಗ್ಯಮ್ಮ, ಭರತ್‌ಕುಮಾರ್, ಇ.ಪ್ರಕಾಶ್, ಪ್ರೀತಂಕುಮಾರ್, ರಮೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net