

ಬೆಂಗಳೂರು: ಸ್ಯಾಂಟ್ರೋ ರವಿ ಸೂಚನೆ ಮೇರೆಗೆ ಆತನ ಪತ್ನಿ, ನಾದಿನಿ ವಿರುದ್ಧ ಸುಳ್ಳು ಕೇಸ್ ದಾಖಲಿಸಿ ಜೈಲಿಗೆ ಕಳುಹಿಸಿದ ಆರೋಪದ ಮೇಲೆ ಇನ್‌ಸ್ಪೆಕ್ಟರ್ ಪ್ರವೀಣ್‌ನನ್ನು ಅಮಾನತು ಮಾಡಿ ಪೊಲೀಸ್ ಇಲಾಖೆ ಆದೇಶ ನೀಡಿದೆ. ಈ ಬಗ್ಗೆ ಸ್ವಯಂ, ಡಿಜಿಪಿ ಪ್ರವೀಣ್ ಸೂದ್ ಆದೇಶ ನೀಡಿದ್ದಾರೆ.
ಸ್ಯಾಂಟ್ರೋ ರವಿ ಸ್ನೇಹಿತ ನೆಲಮಂಗಲದ ಪ್ರಕಾಶ್, ನ.24ರಂದು ನೀಡಿದ ಸುಳ್ಳು ದೂರಿನ ಮೇರೆಗೆ ಕಾಟನ್‌ಪೇಟೆ ಠಾಣೆಯ ಅಂದಿನ ಇನ್‌ಸ್ಪೆಕ್ಟರ್ ಪ್ರವೀಣ್, ರಶ್ಮಿ, ನಯನ ಮತ್ತು ಶೇಕ್ ಎಂಬುವರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಅವರಿಬ್ಬರೂ 20 ದಿನಗಳ ನಂತರ ಜಾಮೀನು ಪಡೆದು ಹೊರಬಂದಿದ್ದರು. ಹೊರಗಡೆ ಬಂದ ರಶ್ಮಿ, ಘಟನೆ ಬಗ್ಗೆ ನೀಡಿದ ದೂರಿನ ಮೇರೆಗೆ ಪಶ್ಚಿಮ ವಿಭಾಗ ಡಿಸಿಪಿ ಲಕ್ಷ್ಮಣ್ ನಿಂಬರಗಿ, ಆಂತರಿಕ ತನಿಖೆ ನಡೆಸಿದಾಗ ಇನ್‌ಸ್ಪೆಕ್ಟರ್ ಪ್ರವೀಣ್ ಕಳ್ಳಾಟ ಬಯಲಾಗಿದೆ. ಈ ಕುರಿತು ನಗರ ಪೊಲೀಸ್ ಆಯುಕ್ತ ಸಿ.ಎಚ್. ಪ್ರತಾಪ್ ರೆಡ್ಡಿ ಅವರ ಮೂಲಕ ಡಿಜಿಪಿ ಪ್ರವೀಣ್ ಸೂದ್ ಅವರಿಗೆ ವರದಿ ಸಲ್ಲಿಸಿದ್ದರು. ಇದರ ಮೇರೆಗೆ ಆರೋಪಿತ ಇನ್‌ಸ್ಪೆಕ್ಟರ್ ಪ್ರವೀಣ್‌ನನ್ನು ಸೇವೆಯಿಂದ ಅಮಾನತು ಮಾಡಿ ಡಿಜಿಪಿ ಪ್ರವೀಣ್ ಸೂದ್, ಮಂಗಳವಾರ ಆದೇಶ ಹೊರಡಿಸಿದ್ದಾರೆ.
ಕಾಟನ್‌ಪೇಟೆಯ ಅಂದಿನ ಇನ್‌ಸ್ಪೆಕ್ಟರ್ ಪ್ರವೀಣ್, ಲಾಡ್ಜ್ ಮೇಲೆ ದಾಳಿ ನಡೆಸಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಏಜೆಂಟ್‌ಗಳನ್ನು ಬಂಧಿಸಿದ್ದರು. ಈ ವೇಳೆ ಪೊಲೀಸರಿಂದ ತಪ್ಪಿಸಿಕೊಳ್ಳುವ ಉದ್ದೇಶಕ್ಕೆ ಏಜೆಂಟ್‌ಗಳು, ಸಹಾಯ ಕೋರಿ ಸ್ಯಾಂಟ್ರೋ ರವಿಗೆ ಕರೆ ಮಾಡಿದ್ದರು. ಆಗ ಸ್ಯಾಂಟ್ರೋ ರವಿ, ಇನ್‌ಸ್ಪೆಕ್ಟರ್ ಪ್ರವೀಣ್‌ಗೆ ಕರೆ ಮಾಡಿ ತನ್ನ ಪ್ರಭಾವ ಬೀರಿದ್ದ. ಅಲ್ಲದೇ, ಏಜೆಂಟ್‌ಗಳಿಗೆ ಸುಲಭವಾಗಿ ಜಾಮೀನು ಸಿಗುವಂತೆ ಅಲ್ಲದೆ ಕೇಸ್‌ನಿಂದ ಬೇಗ ಹೊರಗೆ ಬರುವಂತೆ ಸಹಾಯ ಮಾಡುವಂತೆ ಪ್ರವೀಣ್‌ಗೆ ಸೂಚನೆ ಕೊಟ್ಟಿದ್ದ. ಅದರ ಪ್ರತಿಫಲವಾಗಿ ವರ್ಗಾವಣೆ ಮಾಡಿಸಿಕೊಡುವುದಾಗಿ ಇನ್‌ಸ್ಪೆಕ್ಟರ್‌ಗೆ ಭರವಸೆ ಕೊಟ್ಟಿದ್ದ. ಅಂದಿನಿಂದ ಪ್ರವೀಣ್ ಮತ್ತು ಸ್ಯಾಂಟ್ರೋ ರವಿ ನಡುವೆ ಆತ್ಮೀಯತೆ ಬೆಳೆದು ವೇಶ್ಯಾವಾಟಿಕೆ ದಂಧೆ ರಾಜಾರೋಷವಾಗಿ ನಡೆಸುತ್ತಿದ್ದರು ಎನ್ನಲಾಗಿದೆ.
ಕೆಳಹಂತದ ಸಿಬ್ಬಂದಿ ಮೇಲೆ ಪ್ರಭಾವ:
ಸ್ಯಾಂಟ್ರೋ ರವಿ ಸ್ನೇಹಿತ ಪ್ರಕಾಶ್ ನೀಡಿದ ಸುಳ್ಳು ದೂರಿನ ತನಿಖೆ ನಡೆಸುವಂತೆ ಇನ್‌ಸ್ಪೆಕ್ಟರ್ ಪ್ರವೀಣ್, ತನ್ನ ಕೆಳಹಂತದ ಅಧಿಕಾರಿಗಳಿಗೆ ಸೂಚನೆ ನೀಡುತ್ತಾರೆ. ವಿಚಾರಣೆ ವೇಳೆ ಸುಳ್ಳು ಆರೋಪ ಮತ್ತು ಮಹಿಳೆಯರು ಅಮಾಯಕರು ಎಂದು ಗೊತ್ತಾಗಿ ಇನ್‌ಸ್ಪೆಕ್ಟರ್ ಗಮನಕ್ಕೆ ತಂದಾಗ ಅವರಿಗೆ ಬೈದು ಪ್ರವೀಣ್ ತಾನೇ ತನಿಖೆ ಶುರು ಮಾಡುತ್ತಾರೆ. ಯಾರಿಗೂ ಗೊತ್ತಾಗದಂತೆ ಮೈಸೂರಿನಲ್ಲಿ ರಶ್ಮಿ ಮತ್ತು ನಯನನನ್ನು ಬಂಧಿಸುತ್ತಾರೆ. ಇತ್ತ ಸ್ಯಾಂಟ್ರೋ ರವಿ ಸೂಚನೆ ಮೇರೆಗೆ ಆರೋಪಿ ಶೇಕ್ ಠಾಣೆಗೆ ಬಂದು ತಪ್ಪೊಪ್ಪಿಕೊಂಡಿದ್ದ. ಎಲ್ಲವೂ ಸ್ಯಾಂಟ್ರೋ ರವಿ ಹೇಳಿದಂತೆ ಪ್ರವೀಣ್, ಕಳ್ಳಾಟವಾಡಿದ್ದ.
ಎಫ್ಐಆರ್ ಆಗುವ ಸಾಧ್ಯತೆ:
ಸುಳ್ಳು ಡಕಾಯಿತಿ ಕೇಸ್ ದಾಖಲಿಸಿದ ಇನ್‌ಸ್ಪೆಕ್ಟರ್ ಪ್ರವೀಣ್, ಕಳ್ಳಾಟ ಇಲಾಖಾ ತನಿಖೆಯಲ್ಲಿ ದೃಢವಾಗಿದೆ. ಜತೆಗೆ ಕರ್ತವ್ಯ ಲೋಪದ ಆರೋಪದ ಮೇಲೆ ಪ್ರವೀಣ್‌ನ್ನು ಅಮಾನತು ಮಾಡಲಾಗಿದೆ. ಇದನ್ನೇ ಮುಂದಿಟ್ಟುಕೊಂಡು ಸಂತ್ರಸ್ತರು, ಸಂಬಂಧಪಟ್ಟ ಕೋರ್ಟ್ ಗಮನಕ್ಕೆ ತಂದು ಈಗಾಗಲೇ ದಾಖಲಾಗಿರುವ ಡಕಾಯಿತಿ ಕೇಸ್‌ನ್ನು ರದ್ದು ಮಾಡಿಸಲು ಅವಕಾಶವಿದೆ. ಅಲ್ಲದೆ, ಇಲಾಖಾ ತನಿಖೆ ಆಧಾರವಾಗಿ ಇಟ್ಟುಕೊಂಡು ಆರೋಪಿತ ಇನ್‌ಸ್ಪೆಕ್ಟರ್ ಪ್ರವೀಣ್ ಸೇರಿದಂತೆ ಇತರರ ವಿರುದ್ಧ ಎಫ್ಐಆರ್ ದಾಖಲಿಸಿ ಜೈಲಿಗೆ ಕಳುಹಿಸಲು ಅವಕಾಶವಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.