ಕೊರಟಗೆರೆ ಮಳೆ ಹಾನಿ ಪ್ರದೇಶಗಳಲ್ಲಿ ಸಚಿವ ಪರಮೇಶ್ವರ ರೌಂಡ್ಸ್​

Param_rounds
Published on

ತುಮಕೂರು: ಜಿಲ್ಲೆಯಾದ್ಯಂತ ವರುಣನ ಆರ್ಭಟ ಮುಂದುವರೆದಿದ್ದು ಮಂಗಳವಾರ ರಾತ್ರಿ ಹಾಗೂ ಬುಧವಾರ ಬೆಳ್ಳಂಬೆಳಗ್ಗೆಯು ಭರ್ಜರಿ ಮಳೆ ಸುರಿದ ಹಿನ್ನೆಲೆಯಲ್ಲಿ ರಾಗಿ ಹೊಲದ ತಾಕುಗಳು, ತೋಟಗಳು, ತಗ್ಗು ಪ್ರದೇಶಗಳು ಹಾಗೂ ರಸ್ತೆಗಳು ಜಲಾವೃತಗೊಂಡಿವೆ.

ಕೊರಟಗೆರೆಯಲ್ಲಿ ಕಳೆದೆರಡು ದಿನಗಳಿಂದ ಸುರಿದ ಭಾರೀ ಮಳೆಯಿಂದ ಅನಾಹುತ ಸಂಭವಿಸಿರುವ ಸ್ಥಳಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರು ಆದ ಗೃಹ ಸಚಿವ ಡಾ.ಜಿ.ಪರಮೇಶ್ವರ ಭೇಟಿ ನೀಡಿ ಸ್ಥಳಿಯರ ಅಹವಾಲು ಸ್ವೀಕರಿಸಿದರು. ತತ್​ಕ್ಷಣವೇ ಪರಿಹಾರ ಜತೆಗೆ ಹಾನಿಗೊಳಗಾದ ಕುಟುಂಬಗಳಿಗೆ ಪರ್ಯಾಯ ವ್ಯವಸ್ಥೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.

ತುಮಕೂರು ನಗರ, ಗ್ರಾಮಾಂತರ, ಗುಬ್ಬಿ, ತಿಪಟೂರು, ಕೊರಟಗೆರೆ, ಮಧುಗಿರಿ, ಚಿಕ್ಕನಾಯಕನಹಳ್ಳಿ ತಾಲೂಕು ಸೇರಿದಂತೆ ಜಿಲ್ಲೆಯ ವಿವಿಧೆಡೆ ಮಳೆರಾಯ ಅಬ್ಬರಿಸುತ್ತಿದ್ದು, ಬುಧವಾರ ಬೆಳ್ಳಂಬೆಳಗ್ಗೆಯೇ ಸುಮಾರು ಒಂದೂವರೆ ಗಂಟೆಗೂ ಹೆಚ್ಚು ಕಾಲ ಆರ್ಭಟಿಸಿದ್ದಾನೆ.

ತುಮಕೂರು ನಗರ ಸೇರಿದಂತೆ ಗ್ರಾಮಾಂತರ ಭಾಗಗಳಲ್ಲಿ ಬುಧವಾ ಬೆಳಗ್ಗೆ 7 ರಿಂದ ಆರಂಭವಾದ ಮಳೆ 8.30ರವರೆಗೆ ಸುರಿದಿದ್ದು, ಹಳ್ಳ-ಕೊಳ್ಳಗಳು, ತೊರೆಗಳು ತುಂಬಿ ಹರಿದಿವೆ. ಜತೆಗೆ ರಾಗಿ ಬೆಳೆಯ ಹೊಲಗಳು, ಅಡಿಕೆ, ತೆಂಗು, ಬಾಳೆ ತೋಟಗಳು ನೀರಿನಿಂದ ತುಂಬಿ ಜಲಾವೃತಗೊಂಡಿವೆ.

ತುಮಕೂರು ನಗರದಲ್ಲೂ ಸಹ ಬೆಳ್ಳಂಬೆಳಿಗ್ಗೆಯೇ ವರುಣ ಆರ್ಭಟಿಸಿದ್ದು, ಶಾಲಾ-ಕಾಲೇಜುಗಳಿಗೆ ತೆರಳು ವಿದ್ಯಾರ್ಥಿಗಳು, ಕಾರ್ಮಿಕರು, ಸರ್ಕಾರಿ ನೌಕರರು ಸೇರಿದಂತೆ ಇನ್ನಿತರೆ ಕೆಲಸ ಕಾರ್ಯಗಳಿಗೆ ತೆರಳುವ ಜನರು ಕೊಡೆಗಳನ್ನು ಆಶ್ರಯಿಸಿದ್ದು ಕಂಡುಬಂತು.

ಮಳೆಗೆ ಮನೆ ಕುಸಿತ: ತಿಪಟೂರು ತಾಲೂಕಿನ ಮಾಯಗೊಂಡನಹಳ್ಳಿಯಲ್ಲಿ ಇಡೀ ರಾತ್ರಿ ಸುರಿದ ಮಳೆಗೆ ಮನೆಯೊಂದರ ಗೋಡೆ ಕುಸಿದು ಬಿದ್ದಿದೆ. ಈ ಮನೆಯಲ್ಲಿ ವೃದ್ಧ ದಂಪತಿಗಳು ವಾಸವಾಗಿದ್ದು, ಅದೃಷ್ಟವಶಾತ್​ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಚನ್ನಬಸಪ್ಪ, ರಾಜಣ್ಣ ಎಂಬುವರ ಮನೆಯ ಗೋಡೆ ರಾತ್ರಿಯಿಡೀ ಸುರಿದ ಮಳೆಗೆ ಕುಸಿದಿದ್ದು, ಮನೆಯಲ್ಲಿದ್ದ ವಸ್ತುಗಳು ಸಂಪೂರ್ಣ ನೀರು ಪಾಲಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net