

ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಸಚಿವ ಪರಮೇಶ್ವರ್, ಎಲ್ಲಾ ಇಲಾಖೆಯಲ್ಲಿ ವರ್ಗಾವಣೆ ನಡೆಯುತ್ತಿದೆ. ನಮ್ಮ ಇಲಾಖೆಯಲ್ಲಿ ನಾವು ತುಂಬಾ ಎಚ್ಚರಿಕೆಯಿಂದ ನೋಡಿಕೊಂಡು ವರ್ಗಾವಣೆ ಮಾಡುತ್ತಿದ್ದೇವೆ ಎಂದರು.
ಕೆಲವರು KATಗೆ ಹೋಗಬಹುದು. ಆದರೆ ಹಾಗಾಗದಂತೆ ಎಚ್ಚರವಹಿಸಿ ವರ್ಗಾವಣೆ ಮಾಡುತ್ತಿದ್ದೇವೆ. ಪೊಲೀಸ್ ಇಲಾಖೆಯಲ್ಲಿ ಎಲ್ಲಾ ಇಲಾಖೆಯಂತೆ ವರ್ಗಾವಣೆ ಮಾಡಲು ಆಗಲ್ಲ. ಕೆಲವು ಪ್ರಕರಣ ತನಿಖೆಯಾಗುತ್ತಿವೆ. ಈಗ ವರ್ಗಾವಣೆ ಆದರೆ ತನಿಖೆಗೆ ಸಮಸ್ಯೆ ಆಗಬಹುದು. ಇದೆಲ್ಲವನ್ನೂ ನೋಡಿಯೇ ವರ್ಗಾವಣೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಬಿಜೆಪಿಯಿಂದ ವರ್ಗಾವಣೆ ದಂಧೆ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಪರಮೇಶ್ವರ್, ಸಿಎಂ ಜೊತೆ ರಹಸ್ಯ ಸಭೆ ಮಾಡಿ ವರ್ಗಾವಣೆ ಮಾಡ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಹೌದು ನಾನು-ಸಿಎಂ ರಹಸ್ಯವಾಗಿಯೇ ಮಾತಾಡಿಕೊಂಡು ವರ್ಗಾವಣೆ ಮಾಡ್ತಿದ್ದೇವೆ. ರಹಸ್ಯವಾಗಿ ಮಾತಾಡಿ ಮಾಡಿದ್ರೆ ದಂಧೆ ಮಾಡ್ತೀವಿ ಅಂತಾನಾ?, ನಾನು ಮತ್ತು ಸಿಎಂ ರಹಸ್ಯವಾಗಿ ಕುಳಿತೇ ಚರ್ಚೆ ಮಾಡಿ ವರ್ಗಾವಣೆ ಮಾಡಿದ್ದೇವೆ. ರಹಸ್ಯವಾಗಿ ಮಾಡದೇ ವಿಧಾನಸೌಧದಲ್ಲಿ, ಬೀದಿಯಲ್ಲಿ ಕುಳಿತು ವರ್ಗಾವಣೆ ಬಗ್ಗೆ ಚರ್ಚೆ ಮಾಡಲು ಸಾಧ್ಯವಿಲ್ಲ. ಮುಂದೆಯೂ ಹೀಗೆ ರಹಸ್ಯವಾಗಿ ಮಾಡುತ್ತೇವೆ ಎಂದರು.