

ಶಿವಮೊಗ್ಗ: ರಾಜ್ಯದಲ್ಲಿ ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ ಎಲ್ಲ ವೃಂದಗಳ ಹುದ್ದೆಗಳನ್ನು ಭರ್ತಿ ಮಾಡುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಸುವಂತೆ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ನೇತೃತ್ವದ ನಿಯೋಗವು ಸಚಿವ ಡಾ. ಕೆ.ಸುಧಾಕರ್ ಅವರನ್ನು ಭೇಟಿ ಮಾಡಿ ಆಗ್ರಹಿಸಿತು.
ವಿಕಾಸಸೌಧದಲ್ಲಿ ಗುರುವಾರ ಸಚಿವರನ್ನು ಭೇಟಿ ಮಾಡಿ, ನೆರೆ-ಹೊರೆ ರಾಜ್ಯಗಳ ಮಾದರಿಯಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ವಿಲೀನಗೊಳಿಸುವುದು. ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳನ್ನು ತಿದ್ದುಪಡಿ ಮಾಡುವುದು. ಇಲಾಖಾ ಪದೋನ್ನತಿ ಸಮಿತಿ ರಚಿಸಿ, ಅರ್ಹ ನೌಕರರಿಗೆ ಸೇವಾ ಜ್ಯೇಷ್ಠತೆ ಅನ್ವಯ ಬಡ್ತಿ ಅವಕಾಶ ಕಲ್ಪಿಸುವಂತೆ ಮನವಿ ಮಾಡಿತು.
ಇಲಾಖಾ ಪದೋನ್ನತಿ ಸಮಿತಿ ರಚನೆ, ವೈದ್ಯರಿಗೆ ನೀಡುತ್ತಿರುವ ವಿಶೇಷ ಭತ್ಯೆಯನ್ನು ಇಲಾಖೆಯ ಇತರೆ ಸಿಬ್ಬಂದಿಗೂ ಮಂಜೂರು ಮಾಡುವುದು, ಕರೊನಾ ಕರ್ತವ್ಯನಿರತ ಸಿಬ್ಬಂದಿಗೆ ಕರೊನಾ ಭತ್ಯೆ ನೀಡುವುದು, ಬಯೋಮೆಟ್ರಿಕ್ ಹಾಜರಾತಿಯಿಂದ ವಿನಾಯಿತಿ ನೀಡುವ ಬಗ್ಗೆ ಕುರಿತು ದೀರ್ಘಾವಧಿಯಿಂದ ಬಾಕಿಯಿರುವ ಇಲಾಖಾ ವಿಚಾರಣೆ ಕಡತಗಳನ್ನು ಹಾಗೂ ಅಮಾನತು ಪ್ರಸ್ತಾವನೆಗಳ ಶೀಘ್ರ ಇತ್ಯರ್ಥ, ನೌಕರರ ಸೇವಾ ಸವಲತ್ತುಗಳನ್ನು ಕಾಲಮಿತಿಯೊಳಗೆ ನೀಡುವುದು, ಆರೋಗ್ಯಸೌಧ ಕಟ್ಟಡದಲ್ಲಿ ಆರೋಗ್ಯ ಕೇಂದ್ರ ಆರಂಭಿಸುವುದು. ವಿಜಯಪುರದಲ್ಲಿ ಆರಂಭಿಸಿರುವ ಅಪರ ನಿರ್ದೇಶಕರ ಕಚೇರಿ ಬಲವರ್ಧನೆ ಮಾಡುವಂತೆ ಒತ್ತಾಯಿಸಿದರು.