

ಧಾರವಾಡ: ಕೇಂದ್ರ ಸರ್ಕಾರದ 2023-24ನೇ ಬಜೆಟ್ ಮಂಡಿಸಲು ಕೆಂಪು ಬಣ್ಣದ ಸೀರೆ ಉಟ್ಟು ಬಂದಿದ್ದ ನಿರ್ಮಲಾ ಸೀತಾರಾಮನ್ ವಿಶೇಷವಾಗಿ ಗಮನ ಸೆಳೆದರು. ಮತ್ತೊಂದು ವಿಶೇಷವೆಂದರೆ ವಿತ್ತ ಸಚಿವೆ ಉಟ್ಟಿದ್ದು, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಉಡುಗೊರೆಯಾಗಿ ನೀಡಿದ್ದ ಕೈಮಗ್ಗದ ಸೀರೆ.
ಕಳೆದ ಡಿಸೆಂಬರ್ನಲ್ಲಿ ಕೈಮಗ್ಗದಲ್ಲಿ ಮಾಡಿದ್ದ ಏಳು ಇಳಕಲ್ ರೇಷ್ಮೆ ಸೀರೆಗಳನ್ನು ಆಯ್ಕೆ ಮಾಡಲು ಧಾರವಾಡದಿಂದ ರವಾನೆ ಮಾಡಲಾಗಿತ್ತು. ಈ ವೇಳೆ ನಿರ್ಮಲಾ ಸೀತಾರಾಮನ್ ಅವರೇ ಕೆಂಪು ಬಣ್ಣದ ಕೈಮಗ್ಗದ ಸೀರೆಯನ್ನು ಆಯ್ಕೆ ಮಾಡಿಕೊಂಡಿದ್ದರು. ಇದೀಗ ಅದೇ ಸೀರೆಯನ್ನು ಬಜೆಟ್ ಮಂಡನೆಗೆ ಉಟ್ಟುಕೊಂಡು ಬಂದಿದ್ದಾರೆ.
ನಿರ್ಮಲಾ ಸೀತಾರಾಮನ್ ತಮ್ಮಿಷ್ಟದ ಸೀರೆಯನ್ನು ಆಯ್ಕೆ ಮಾಡಿದ ನಂತರ ಈ ಸೀರೆಗೆ ಧಾರವಾಡದ ಆರತಿ ಹಿರೇಮಠ ಮಾಲೀಕತ್ವದ ಆರತಿ ಕ್ರಾಪ್ಟ್ಸ್ನ ಮಹಿಳೆಯರು ಸೇರಿಕೊಂಡು ಕಸೂತಿ ಮಾಡಿದ್ದಾರೆ. ಸಾಂಪ್ರದಾಯಿಕ ಧಾರವಾಡ ಕಸೂತಿ ಹಾಕಲಾಗಿರುವ ಈ ಇಳಕಲ್ ಸೀರೆಗೆ ಚಿಕ್ಕಪರಾಸ್ ದಡಿಯಿದ್ದು, ತೇರು, ಗೋಪುರ, ನವಿಲು, ಕಮಲದ ಚಿತ್ರಗಳ ಕಸೂತಿ ಹಾಕಲಾಗಿದೆ.