

ಬೆಂಗಳೂರು:
ತಾಲೂಕು ಮಟ್ಟದಲ್ಲಿ ಪ್ರತ್ಯೇಕ ಆಹಾರ ಇಲಾಖೆ ಕಚೇರಿಯನ್ನು ತೆರೆಯಲಾಗುವುದು ಎಂದು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದ್ದಾರೆ.
ಜಿಲ್ಲಾ ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ತಹಸೀಲ್ದಾರ್‌ಗೆ ಹೆಚ್ಚು ಜವಬ್ದಾರಿಗಳಿರುವ ಕಾರಣ ಅವರು ಸ್ಪಂಧಿಸಲು ಆಗುತ್ತಿಲ್ಲ. ಆ ಕಾರಣಕ್ಕಾಗಿ ಪ್ರತಿ ತಾಲೂಕಿನಲ್ಲಿ ಸಹಾಯಕ ನಿರ್ದೇಶಕ ಹುದ್ದೆಗಳನ್ನು ಸೃಷ್ಟಿ ಮಾಡಲಾಗುವುದು ಎಂದರು.
ಆಹಾರ ಇಲಾಖೆ ಕಚೇರಿಗಳಿಗೆ ಅಗತ್ಯವಿರುವ ಡಾಟಾ ಎಂಟ್ರಿ ಆಪರೇಟರ್‌ಗಳನ್ನು ನೇಮಕ ಮಾಡಿ ಕೂಡಲೆ ತರಬೇತಿ ನೀಡಬೇಕು ಎಂದು ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಆಹಾರ ಇಲಾಖೆಯಲ್ಲಿ 2181 ಹುದ್ದೆಗಳು ಖಾಲಿ ಇದ್ದು, ಅವುಗಳ ಭರ್ತಿಗೆ ಅಗತ್ಯ ಕ್ರಮ ವಹಿಸುವಂತೆ ಕಾರ್ಯದರ್ಶಿ ಮತ್ತು ಆಯುಕ್ತರಿಗೆ ಸೂಚಿಸಲಾಗಿದೆ. ಆಹಾರ ನಿರೀಕ್ಷಕರಿಗೆ ಸಮವಸ ನೀಡುವ ಬಗ್ಗೆಯೂ ಪರಿಶೀಲನೆ ಮಾಡಲಾಗುವುದು ಎಂದರು.
ಹೊಸ ಎಪಿಎಲ್, ಬಿಪಿಲ್
ಕಾರ್ಡ್ ಸದ್ಯಕ್ಕೆ ಕೊಡಲ್ಲ
ಹೊಸದಾಗಿ ಎಪಿಎಲ್ ಮತ್ತು ಬಿಪಿಎಲ್ ಕಾರ್ಡ್‌ಗಳನ್ನು ಸದ್ಯಕ್ಕೆ ಕೊಡುವುದಿಲ್ಲ. ಅದಕ್ಕಾಗಿಯೇ ಆನ್ ಲೈನ್‌ನಲ್ಲಿ ನೋಂದಣಿ ಮಾಡಲು ಅವಕಾಶ ನೀಡಿಲ್ಲ. ಇದಕ್ಕೆ ಕಾರಣವೂ ಇದೆ. ಅದನ್ನು ಸದ್ಯಕ್ಕೆ ಹೇಳುವುದಿಲ್ಲ. ಮುಂದೆ ತಿಳಿಸುತ್ತೇನೆ ಎಂದರು.
1 ಕೋಟಿ ಅಕೌಂಡ್‌ಗೆ ಹಣ ಜಮೆ
ರಾಜ್ಯದಲ್ಲಿ 1.28 ಕೋಟಿ ಕಾರ್ಡ್‌ದಾರರಿದ್ದು, 1 ಕೋಟಿಗೂ ಹೆಚ್ಚು ಅಕೌಂಟ್‌ಗಳಿಗೆ 170 ರೂ ಹಣ ಜಮೆ ಮಾಡಲಾಗಿದೆ. 21 ಲಕ್ಷ ಕಾರ್ಡ್‌ಗಳ ಅಕೌಂಟ್ ಆಗಿರಲಿಲ್ಲ. ಅದರಲ್ಲಿ ಈಗ 7 ಪಕ್ಷ ಕಾರ್ಡ್‌ಗಳ ಅಕೌಂಟ್‌ಗಳು ಆಗಿದ್ದು, 14 ಲಕ್ಷ ಅಕೌಂಟ್‌ಗಳು ಮಾತ್ರ ಬಾಕಿ ಇದೆ ಎಂದರು.
ತಾಲೂಕು ಮಟ್ಟದಲ್ಲಿ ಗೋದಾಮು
ಎಲ್ಲಾ ಜಿಲ್ಲೆಯಲ್ಲಿ ಗೋದಾಮುಗಳಿವೆ. ತಾಲೂಕು ಮಟ್ಟದಲ್ಲಿ ಎಪಿಎಂಸಿ, ಟಿಎಪಿಸಿಎಂಎಸ್ ಮತ್ತು ಖಾಸಗಿ ಗೋದಾಮುಗಳನ್ನು ಅವಲಂಬಿಸಬೇಕಾಗಿದೆ. ಆದ್ದರಿಂದ ಪಡಿತರ ವ್ಯವಸ್ಥೆಯನ್ನು ಇನ್ನಷ್ಟು ಸಮರ್ಪಕವಾಗಿ ನಿರ್ವಹಣೆ ಮಾಡಲು, ತಾಲೂಕು ಮಟ್ಟದಲ್ಲಿಯೂ ಗೋದಾಮುಗಳನ್ನು ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಹೊರ ರಾಜ್ಯದಲ್ಲಿ ರಾಗಿಗೆ ಬೇಡಿಕೆ
8 ಲಕ್ಷ ಮೆಟ್ರಿಕ್ ಟನ್ ಖರೀದಿಗೆ ಕ್ರಮ
ರಾಜ್ಯದಲ್ಲಿ ಎಂಎಸ್‌ಪಿ ದರದಲ್ಲಿ 4 ಲಕ್ಷ ಮೆಟ್ರಿಕ್ ಟನ್ ರಾಗಿ ಮತ್ತು 1 ಲಕ್ಷ ಮೆಟ್ರಿಕ್ ಟನ್ ಜೋಳ ಖರೀದಿ ಮಾಡಿ ಪಡಿತರ ವ್ಯವಸ್ಥೆಗೆ ಬಳಸಲಾಗುತ್ತಿದೆ. ಹೊರ ರಾಜ್ಯ ಕೇರಳ, ತಮಿಳುನಾಡು, ಉತ್ತರ ಭಾರತ ಕಡೆಯಿಂದಲೂ ರಾಗಿಗೆ ಬೇಡಿಕೆ ಬರುತ್ತಿರುವುದರಿಂದ ಈ ಬಾರಿ 8 ಲಕ್ಷ ಮೆಟ್ರಿಕ್ ಟನ್ ರಾಗಿ ಮತ್ತು 3 ಲಕ್ಷ ಮೆಟ್ರಿಕ್ ಟನ್ ಜೋಳವನ್ನು ಎಂಎಸ್‌ಪಿ ದರದಲ್ಲಿ ಖರೀದಿ ಮಾಡಬೇಕು ಎನ್ನುವ ರಾಜ್ಯದ ಪ್ರಸ್ತಾವನೆಗೆ ಕೇಂದ್ರ ಒಪ್ಪಿಗೆ ನೀಡಿದೆ ಎಂದು ಹೇಳಿದರು.
ಅನ್ನಭಾಗ್ಯಕ್ಕೆ ಅಕ್ಕಿ ಖರೀದಿ
ತೆಲಂಗಾಣ ಮತ್ತು ಆಂಧ್ರ ರಾಜ್ಯಗಳಿಂದ ಅನ್ನಭಾಗ್ಯಕ್ಕೆ ಅಕ್ಕಿ ಖರೀದಿ ಮಾಡಲು ನಿರ್ಧರಿಸಲಾಗಿದೆ. ಈ ಪ್ರಕ್ರಿಯೆ ಈಗಾಗಲೇ ಚಾಲ್ತಿಯಲ್ಲಿದೆ. ಅಕ್ಕಿ ಲಭ್ಯವಾದ ಮೇಲೆ ಹಣ ಜಮೆ ಮಾಡುವುದನ್ನು ಬಂದ್ ಮಾಡಿ ಪಡಿತರದಾರರಿಗೆ ಅಕ್ಕಿ ನೀಡಲಾಗುವುದು ಎಂದು ಹೇಳಿದರು.
ನ್ಯಾಯಬೆಲೆ ಅಂಗಡಿಗೆ ಸೂಚನೆ
ಸರ್ಕಾರ ನಿಗಧಿ ಮಾಡಿರುವ ದರ ಪ್ರಕಾರವೇ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರವನ್ನು ಕಾರ್ಡ್‌ದಾರರಿಗೆ ನೀಡಬೇಕು. ತೂಕ ಮತ್ತು ದರದಲ್ಲಿ ವ್ಯತ್ಯಾಸವಾಗುತ್ತಿರುವ ದೂರು ಬಂದರೆ ಕ್ರಮ ವಹಿಸಲಾಗುವುದು. ಕಾಳಸಂತೆಯಲ್ಲಿ ನಡೆಯುವ ವ್ಯವಹಾರಗಳನ್ನು ಸಹಿಸುವುದಿಲ್ಲ. ಅಂಗಡಿ ಲೈಸೆನ್ಸ್ ಪಡೆದು ಬೇರೆಯವರು ನಡೆಸುತ್ತಿದ್ದರೆ ಕಾನೂನು ಕ್ರಮ ಆಗಲಿದೆ ಎಂದು ಸಚಿವ ಮುನಿಯಪ್ಪ ತಿಳಿಸಿದರು.