ಸಚಿವ ಸಂಪುಟ ಸಭೆಯಲ್ಲಿ ಗಣತಿ ಸಮಸ್ಯೆಗೆ ಪರಿಹಾರ: ಸಚಿವ ಎಂ.ಬಿ.ಪಾಟೀಲ ವಿಶ್ವಾಸ | Internal problem among Lingayats

M B Patil
Published on

ಬೆಂಗಳೂರು: ಜಾತಿ ಜನಗಣತಿ ವಿಚಾರದಲ್ಲಿ ತಲೆದೋರಿರುವ ಸಮಸ್ಯೆಯನ್ನು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಬಗೆಹರಿಸಿಕೊಳ್ಳಬೇಕೆಂದಿದ್ದು, ಪರಿಹಾರ ಸಿಗಲಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು.

ವಿಧಾನಸೌಧದಲ್ಲಿ ಸುದ್ದಿಗಾರರಿಗೆ ಬುಧವಾರ ಪ್ರತಿಕ್ರಿಯಿಸಿದ ಅವರು, ಯಾವ ಲಿಂಗಾಯತ ಮುಖಂಡರು ಸಭೆ ಮಾಡುತ್ತಿಲ್ಲ. ಶಾಮನೂರು ಶಿವಶಂಕರಪ್ಪ ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಎಲ್ಲವೂ ಪ್ರಾಥಮಿಕ ಹಂತದಲ್ಲಿದ್ದು, ಚರ್ಚೆಯಾಗದೆ ಯಾವುದೇ ನಿರ್ಣಯವಾಗುವುದಿಲ್ಲ ಎಂದರು.

ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲು ಮುಕ್ತ ಮನಸ್ಸು ಹೊಂದಿದ್ದೇವೆ. ನಾನು, ಈಶ್ವರ ಖಂಡ್ರೆ ಹೀಗೆ ಅನೇಕ ಸಚಿವರಿದ್ದೇವೆ, ನಮ್ಮ ಆತಂಕವೇನು ? ಏನು ಮಾಡಿದರೂ ಒಳ್ಳೆಯದಾಗುತ್ತದೆ ಎಂಬುದನ್ನೂ ಹೇಳುತ್ತೇವೆ ಎಂದು ಎಂ.ಬಿ.ಪಾಟೀಲ ಹೇಳಿದರು.

ಲಿಂಗಾಯತರಲ್ಲೂ ಸಮಸ್ಯೆ

ಲಿಂಗಾಯತರಲ್ಲೂ ಅನೇಕ ಸಮಸ್ಯೆಗಳಿವೆ. ಇದಕ್ಕೆ ರಾಜ್ಯ ಸರ್ಕಾರ ಅಥವಾ ಕಾಂತರಾಜು ಎಂದು ಹೇಳುವುದಿಲ್ಲ. ಲಿಂಗಾಯತರ ಅನೇಕ ಉಪ ಪಂಗಡಗಳಿವೆ, ಮೀಸಲಾತಿ ಸಿಗುತ್ತದೆ ಎಂಬ ಕಾರಣಕ್ಕೆ ಬೇರೆ ಬೇರೆ ಉಪ ಪಂಗಡ ಬರೆಯಿಸಿದ್ದಾರೆ.

ತಾಂತ್ರಿಕವಾದ ಈ ಸಮಸ್ಯೆ ಅಷ್ಟೇನೂ ಸರಳವಾಗಿಲ್ಲ. ಮೀಸಲಾತಿ ಬಿಡಿ ಎಂದು ಉಪ ಪಂಗಡಗಳಿಗೆ ಹೇಳಲಾಗುವುದಿಲ್ಲ, ಅದನ್ನು ಅವರು ಬಿಡುವುದೂ ಇಲ್ಲ. ಅವರ ಮಕ್ಕಳಿಗೆ ಮೀಸಲಾತಿ ಸಿಗುತ್ತದೆ ಎಂದು ಹೀಗೆ ಬರೆಯಿಸಿರಬಹುದು ಈ ಬಗ್ಗೆ ಟೀಕೆ-ಟಿಪ್ಪಣೆ ಮಾಡುವುದು ಸರಿಯಲ್ಲ ಎಂದರು.

ಸಚಿವ ಸಂಪುಟ ಸಭೆಯಲ್ಲಿ ಶೇ.99ರಷ್ಟು ಸಮಸ್ಯೆ ಬಗೆಹರಿಯಲಿದೆ. ಬೇರೆ ಸಮುದಾಯದವರು ಅವರವರ ಸಭೆ ಮಾಡಿಕೊಳ್ಳುತ್ತಾರೆ. ನಾವು ಯಾರಿಗೋ ಸಮಸ್ಯೆಯಾಗಲಿ ಎಂದು ಮಾತನಾಡಲ್ಲ, ನಮಗೆ ಸಮಸ್ಯೆಯಾಗಿರುವುದನ್ನು ನಾವು ಹೇಳುತ್ತೇವೆ ಎಂದು ಸಚಿವ ಎಂ.ಬಿ.ಪಾಟೀಲ ಸಮಜಾಯಿಷಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net