ಸಚಿವ ಕೆ.ಜೆ.ಜಾರ್ಜ್ ಜನಸ್ಪಂದನ

KPCC
Published on

ಬೆಂಗಳೂರು: ವಿದ್ಯುತ್ ಪೂರೈಕೆಯಲ್ಲಿ ಆಗಿರುವ ವ್ಯತ್ಯಯ, ವಿದ್ಯುತ್ ಮಾರ್ಗಗಳ ಸ್ಥಳಾಂತರ, ಮಳೆಯಿಂದ ವಿದ್ಯುತ್ ಕಂಬ, ತಂತಿ ಮತ್ತು ಪರಿವರ್ತಕಗಳಿಗೆ ಹಾನಿ, ಟ್ರಾನ್ಸ್ ಫಾರ್ಮರ್ ಸಮಸ್ಯೆ, ಕುಸುಮ್ ಬಿ ಮತ್ತು ಕುಸುಮ್ ಸಿ ಅಡಿ ಅರ್ಜಿ ಸಲ್ಲಿಸುವುದು ಸೇರಿದಂತೆ ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಕಾಂಗ್ರೆಸ್ ಕಾರ್ಯಕರ್ತರು ಇಂಧನ ಸಚಿವ ಕೆ.ಜೆ.ಜಾರ್ಜ್ ಅವರಲ್ಲಿ ಕೋರಿಕೊಂಡಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸಚಿವರು ನಡೆಸಿದ ಜನಸ್ಪಂದನ ಕಾರ್ಯಕ್ರಮಕ್ಕೆ ಆಗಮಿಸಿದ್ದ ಕಾರ್ಯಕರ್ತರು ತಮ್ಮ ಬೇಡಿಕೆ ಮುಂದಿಟ್ಟರು. ಇಲಾಖೆಗೆ ಸಂಬಂಧಿಸಿದ ಅಹವಾಲುಗಳನ್ನು ಆಲಿಸಿ, ಪರಿಹಾರ ಕ್ರಮಗಳ ಕುರಿತು ಸಚಿವರು ಭರವಸೆ ನೀಡಿದರು.

ಮಳೆಯಿಂದ ಹಾನಿಗೊಳಗಾಗಿರುವ ವಿದ್ಯುತ್ ಕಂಬ, ತಂತಿಗಳನ್ನು ಸರಿಪಡಿಸಿ ವಿದ್ಯುತ್ ಮರು ಸ್ಥಾಪಿಸುವ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಟ್ರಾನ್ಸ್ ಫಾರ್ಮರ್‌ಗಳನ್ನು ತಕ್ಷಣವೇ ದುರಸ್ತಿಗೊಳಿಸಿ ವಿದ್ಯುತ್ ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಬಾರಿ ಭಾರೀ ಮಳೆಯಿಂದ ಸಮಸ್ಯೆ ಆಗಿದ್ದು, ಹೆಚ್ಚುವರಿ ಸಿಬ್ಬಂದಿ ನೇಮಿಸಿ ತಕ್ಷಣವೇ ಸರಿಪಡಿಸಲಾಗುತ್ತಿದೆ ಎಂದರು.

ಇಲಾಖೆ ಸಿಬ್ಬಂದಿ ಹಗಲು- ರಾತ್ರಿ ಕೆಲಸ ಮಾಡುತ್ತಿದ್ದಾರೆ. ಇದರ ಮಧ್ಯೆಯೂ ಮಳೆ-ಗಾಳಿ ಮುಂದುವರಿದಿರುವುದರಿಂದ ಕೆಲವೆಡೆ ಇನ್ನೂ ಸಮಸ್ಯೆ ಮುಂದುವರಿದಿದೆ. ಸಮರೋಪಾದಿಯಲ್ಲಿ ಪರಿಹಾರ ಕಾರ್ಯ ಕೈಗೊಂಡು ತ್ವರಿತವಾಗಿ ದುರಸ್ತಿ ಕಾರ್ಯ ಕೈಗೊಂಡು ವಿದ್ಯುತ್ ಮರುಸ್ಥಾಪನೆ ಮಾಡಲಾಗುತ್ತಿದೆ ಎಂದು ಹೇಳಿದರು.

ಕುಸುಮ್‌ಗೆ ಬಹುಬೇಡಿಕೆ

ಕುಸುಮ್ ಬಿ ಅಡಿ ಈಗಾಗಲೇ ಸ್ವೀಕರಿಸಿರುವ ಅರ್ಜಿಗಳ ಆಧಾರದ ಮೇಲೆ ಸಮೀಕ್ಷೆ ನಡೆಸಲಾಗುತ್ತಿದೆ. ಈ ಪ್ರಕ್ರಿಯೆ ಮುಗಿದ ಕೂಡಲೇ ಫಲಾನುಭವಿಗಳಿಗೆ ಸೋಲಾರ್ ಪಂಪ್ ಸೆಟ್ ಒದಗಿಸಲಾಗುವುದು ಎಂದು ಸಚಿವರು ತಿಳಿಸಿದರು.

ಕುಸುಮ್ ಸಿ ವಿಚಾರದಲ್ಲಿ ಸೋಲಾರ್ ಪ್ಯಾನಲ್ ಅಳವಡಿಸಲು ಭೂಮಿ ಗುರುತಿಸಲಾಗುತ್ತಿದೆ. ಈ ಎರಡೂ ಯೋಜನೆಗಳ ಬಗ್ಗೆ ಸಾರ್ವಜನಿಕರಿಂದ ಇನ್ನಷ್ಟು ಸ್ಪಂದನೆ ಸಿಕ್ಕಿದರೆ ಭವಿಷ್ಯದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ, ಅದರಲ್ಲೂ ಮುಖ್ಯವಾಗಿ ಐಪಿ ಸೆಟ್‌ಗಳಿಗೆ ವಿದ್ಯುತ್ ಸಮಸ್ಯೆ ಎದುರಾಗುವುದಿಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net