ಸಿಮ್ಸ್ ಡಿಪ್ಲೊಮಾ ಸೀಟು ಹೆಚ್ಚಿಸಲು ಪ್ರಸ್ತಾವನೆ ಸಲ್ಲಿಸಲು ಸಚಿವರ ಸೂಚನೆ

sims meeting
Published on

ಶಿವಮೊಗ್ಗ: ಸಿಮ್ಸ್(ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆ)ನಲ್ಲಿನ ವಿವಿಧ ವಿಷಯಗಳ ಡಿಪ್ಲೊಮಾ ತರಬೇತಿಗಳಿಗೆ ಹೆಚ್ಚಿನ ಬೇಡಿಕೆ ಇದ್ದು, ಪ್ರಸ್ತುತ ನಿಗದಿಪಡಿಸಿರುವ 20ರ ಸೀಟುಗಳ ಸಂಖ್ಯೆಯನ್ನು ಹೆಚ್ಚಿಸಲು ಕೂಡಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ ಪಾಟೀಲ ಸೂಚಿಸಿದರು.

ಸಿಮ್ಸ್‌ನಲ್ಲಿ ಶನಿವಾರ ಆಡಳಿತಾಧಿಕಾರಿಗಳು ಹಾಗೂ ಅಧಿಕಾರಿ-ಸಿಬ್ಬಂದಿಗಳೊಂದಿಗೆ ಸಭೆ ನಡೆಸಿದ ಅವರು, ಪ್ರಸ್ತುತ ಸಿಮ್ಸ್‌ನಲ್ಲಿ ಈವರೆಗೆ ನೇಮಕವಾಗದೇ ಖಾಲಿ ಉಳಿದಿರುವ ತಂತ್ರಜ್ಞರು, ತಜ್ಞ ವೈದ್ಯಾಧಿಕಾರಿಗಳ ನೇಮಕ, ಮೂಲಭೂತ ಸೌಕರ್ಯ ಸೇರಿ ಎ, ಬಿ, ಸಿ, ಡಿ ಎಲ್ಲ ಶ್ರೇಣಿಗಳ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು, ಅಗತ್ಯವಿರುವ ಕಟ್ಟಡಗಳ ನಿರ್ಮಾಣಗಳ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಕೋರಿ ಶೀಘ್ರದಲ್ಲಿ ಪ್ರಸ್ತಾವನೆ ಸಲ್ಲಿಸುವಂತೆ ನಿರ್ದೇಶಕರಿಗೆ ಸೂಚಿಸಿದರು. ಕಳೆದ ಮೂರು ತಿಂಗಳ ಅವಧಿಯಲ್ಲಿ ಸರಾಸರಿಯಾಗಿ ಪ್ರತಿದಿನ 2,180 ಹೊರರೋಗಿಗಳಾಗಿ, 220 ಒಳರೋಗಿಗಳಾಗಿ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಅಲ್ಲದೇ ಇರುವ 950 ಹಾಸಿಗೆಗಳಲ್ಲಿ ಕನಿಷ್ಟ 900 ಜನ ಚಿಕಿತ್ಸಾಲಯದ ಲಾಭ ಪಡೆದುಕೊಳ್ಳುತ್ತಿದ್ದಾರೆ. ಇಲ್ಲಿನ ಎಂಆರ್‌ಐ ಯಂತ್ರದಿಂದ ಪ್ರತಿದಿನ ಬೆಳಗ್ಗೆ 8ರಿಂದ ರಾತ್ರಿ 8ರವರೆಗೆ ಸುಮಾರು 25ರಿಂದ 30 ಮಂದಿಗೆ ಮಾತ್ರ ಸ್ಕ್ಯಾನ್ ಮಾಡಲಾಗುತ್ತಿದೆ. ಆದರೆ, ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಅಗತ್ಯ ಸಿಬ್ಬಂದಿ ನಿಯೋಜಿಸಿ, ಕನಿಷ್ಟ ಸ್ಕ್ಯಾನಿಂಗ್ ಪ್ರಮಾಣ ಹೆಚ್ಚಿಸಬೇಕು. ಅಗತ್ಯವಿರುವ ಆರೋಗ್ಯ ತಪಾಸಣಾ ಯಂತ್ರಗಳ ಸಂಖ್ಯೆ ಹೆಚ್ಚಿಸಬೇಕು. ವೆಂಟಿಲೇಟರ್‌ಗಳ ಕೊರತೆ ಇದ್ದು, ಅದನ್ನು ಭರ್ತಿ ಮಾಡುವಂತೆಯೂ ನಿರ್ದೇಶಕರಿಗೆ ಸೂಚಿಸಿದರು. ಎಂಎಲ್‌ಸಿ ಬಲ್ಕಿಷ್ ಬಾನು, ಸೂಡಾ ಅಧ್ಯಕ್ಷ ಎಚ್.ಎಸ್.ಸುಂದರೇಶ್, ಮಾಜಿ ಎಂಎಲ್‌ಸಿ ಆರ್.ಪ್ರಸನ್ನಕುಮಾರ್, ಸಿಮ್ಸ್ ನಿರ್ದೇಶಕ ಡಾ. ವಿ.ವಿರೂಪಾಕ್ಷಪ್ಪ, ಪ್ರಾಚಾರ್ಯ ಡಾ. ಕೆ.ರಮೇಶಬಾಬು, ಮುಖ್ಯ ಆಡಳಿತಾಧಿಕಾರಿ ಉಮಾ ಸದಾಶಿವ, ವೈದ್ಯಕೀಯ ಅಧೀಕ್ಷಕ ಡಾ. ಟಿ.ಡಿ.ತಿಮ್ಮಪ್ಪ, ಮೆಗ್ಗಾನ್ ಜಿಲ್ಲಾ ಸರ್ಜನ್ ಡಾ. ಸಿದ್ಧನಗೌಡ ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.

ಮೈಸೂರು ಹೊರತುಪಡಿಸಿ ಯಾವುದೇ ಜಿಲ್ಲೆಯಲ್ಲಿ ವೈದ್ಯಕೀಯ ವಿಷಯಗಳಿಗೆ ಪೂರಕವಾಗಿ ಕಿವುಡ ಮತ್ತು ಮೂಕ ಮಕ್ಕಳಿಗೆ ತರಬೇತಿ ನೀಡುವ ಡಿಪ್ಲೊಮಾ ತರಬೇತಿ ಇಲ್ಲ. ಈಗಾಗಲೇ ತರಬೇತಿ ಹೊಂದಿದವರು ಕೂಡ ಬೇರೆ-ಬೇರೆ ದೇಶ, ರಾಜ್ಯಗಳಿಗೆ ಸೇವೆಗೆ ತೆರಳುತ್ತಿದ್ದಾರೆ. ಆದ್ದರಿಂದ ಶಿವಮೊಗ್ಗದಲ್ಲಿ ಕಿವುಡು ಮತ್ತು ಮೂಕರು ಚಿಕಿತ್ಸೆಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ಡಿಪ್ಲೊಮಾ ತರಬೇತಿ ಕೇಂದ್ರ ಆರಂಭಿಸುವ ಅಗತ್ಯವಿದೆ. - ಡಾ. ಧನಂಜಯ ಸರ್ಜಿ, ಎಂಎಲ್‌ಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net