ಸಚಿವರ ಮೇಲೆಯೇ ಅಸಮಾಧಾನ; ಸತ್ಯಶೋಧನಾ ಸಮಿತಿಗೆ ಬರಪೂರ ದೂರು

congress
Published on

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ತಮ್ಮ ಪಕ್ಷಕ್ಕೆ ನಿರೀಕ್ಷಿಸಿದಷ್ಟು ಸ್ಥಾನಗಳು ಬಾರದೇ ಇರಲು ಸಿದ್ದರಾಮಯ್ಯ ಸಂಪುಟದ ಬಹುತೇಕ ಸಚಿವರೇ ಕಾರಣ ಎಂದು ಕಾಂಗ್ರೆಸ್ ಶಾಸಕರು, ಪದಾಧಿಕಾರಿಗಳು, ಹಿರಿಯ ಮುಖಂಡರು ಎಐಸಿಸಿ ಕಳಿಸಿದ ಸತ್ಯಶೋಧನಾ ಸಮಿತಿಗೆ ದೂರಿತ್ತಿದ್ದಾರೆ.

ಎರಡು ದಿನಗಳಿಂದ 12 ವಿವಿಧ ಹಂತದ ಸಭೆ ನಡೆಸಿದ ಮಧುಸೂಧನ್ ಮಿಸಿ ನೇತೃತ್ವದ ಸಮಿತಿ, ಸಾವಧಾನವಾಗಿ ಎಲ್ಲರ ಅಭಿಪ್ರಾಯ ಸಂಗ್ರಹಿಸಿತು. ಸಮಿತಿಯವರು ಕೆಲವರನ್ನು ಹೊಗಳಿದರೆ, ಕೆಲವರ ವಿರುದ್ಧ ನೇರವಾಗಿ ಚಾಟಿ ಬೀಸಿದರು.

ಶುಕ್ರವಾರ ಕೆಪಿಸಿಸಿ ಪದಾಧಿಕಾರಿಗಳು, 2024ರ ಲೋಕಸಭಾ ಚುನಾವಣೆ ಅಭ್ಯರ್ಥಿಗಳು 2023ರ ವಿಧಾನಸಭಾ ಅಭ್ಯರ್ಥಿಗಳು, ಮುಂಚೂಣಿ ಘಟಕಗಳ ಅಧ್ಯಕ್ಷರು, ನಿಗಮ, ಮಂಡಳಿ ಅಧ್ಯಕ್ಷರು, ಕೆಪಿಸಿಸಿ ಕಾರ್ಯಾಧ್ಯಕ್ಷರೊಂದಿಗೆ ಸಮಾಲೋಚನೆ ನಡೆಸಿದ ಮಿಸಿ ತಂಡ ಅಭಿಪ್ರಾಯ ಸಂಗ್ರಹಿಸಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರತ್ಯೇಕವಾಗಿ ತಮ್ಮ ಅಭಿಪ್ರಾಯವನ್ನು ಸಮಿತಿಗೆ ನೀಡಿದರು. ಒಕ್ಕಲಿಗ ಸಮುದಾಯದ ಮತಗಳು ನಿರೀಕ್ಷಿತ ಪ್ರಮಾಣದಲ್ಲಿ ಬಾರದೇ ಇರುವುದು ಹಾಗೂ ಕೆಲವೊಂದು ನಿರ್ದಿಷ್ಟ ಕ್ಷೇತ್ರದಲ್ಲಿ ಅಹಿಂದ ಮತ ಪಕ್ಷದ ಅಭ್ಯರ್ಥಿಗೆ ಒಟ್ಟಾಗಿ ಸಿಕ್ಕಿಲ್ಲ, ಚದುರಿದೆೆ ಎಂಬ ಸಂಗತಿ ಮಿಸಿ ಸಮಿತಿಯನ್ನು ಹುಬ್ಬೇರುವಂತೆ ಮಾಡಿದೆ.

ಒಟ್ಟಾರೆ ಎರಡೂ ದಿನದ ಸಭೆಯಲ್ಲಿ ಸಚಿವರ ಬಗ್ಗೆಯೇ ತೀವ್ರ ಅಸಮಾಧಾನದ ಮಾತು ಕೇಳಿಬಂದಿದೆ. ಶಾಸಕರು, ಪದಾಧಿಕಾರಿಗಳಂತೂ ನಿರ್ದಿಷ್ಟವಾಗಿ ಕೆಲವು ಸಚಿವರ ಹೆಸರ ಹೆಸರು ಪ್ರಸ್ತಾಪಿಸಿ, ಅಸಹನೆ ಹೊರಹಾಕಿದ್ದಾರೆ. ಸಚಿವರು ಗ್ಯಾರಂಟಿಯನ್ನು ಸರಿಯಾಗಿ ತಲುಪಸಲಿಲ್ಲ, ತಮ್ಮ ಕರ್ತವ್ಯವನ್ನು ಸರಿಯಾಗಿ ನಿಭಾಯಿಸಲಿಲ್ಲ, ಕಾರ್ಯಕರ್ತರು ಹಾಗೂ ಮುಖಂಡರ ಕೆಲಸ ಮಾಡಿಕೊಡಲಿಲ್ಲ ಎಂದು ದೂರುವ ಜತೆಗೆ ಕೂಡಲೇ ಇದನ್ನು ಸರಿಪಡಿಸದೇ ಇದ್ದರೆ ಪಕ್ಷ ಹಾಗೂ ಸರ್ಕಾರದ ನಡುವೆ ಕಂದಕ ಹೆಚ್ಚಾಗಲಿದೆ ಎಂದೂ ಎಚ್ಚರಿಸಿದ್ದಾರೆಂದು ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net