

ಬೆಂಗಳೂರು: ರಸ್ತೆ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬೇಗ ಗುಣಮುಖರಾಗಲಿ ಎಂದು ಹಾರೈಸುವೆ. ಈ ಅಪಘಾತದ ಬಗ್ಗೆ ಅನುಮಾನಗಳಿರುವ ಕಾರಣ ಹಾಲಿ ನ್ಯಾಯಾಧೀಶ ನೇತೃತ್ವದಲ್ಲಿ ತನಿಖೆಯಾಗಬೇಕು ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದರು.
ಬಿಜೆಪಿ ರಾಜ್ಯ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಅವರು, ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು. ಎಲ್ಲ ಸೆಕ್ಯೂರಿಟಿ ಬಿಟ್ಟು ಯಾಕೆ ಹೋದರು. ಆ ಡ್ರೈವರ್ ಯಾರು? ಎಲ್ಲಿದ್ದಾನೆ? ಬಹಿರಂಗಪಡಿಸಬೇಕು ಎಂದರು.
ನಾಯಿ ಎದುರು ಬಂದಾಗ ಘಟನೆಯಾಯಿತು ಎಂದು ಒಮ್ಮೆ ಹೇಳಿದರೆ ಹಿಂದಿನಿಂದ ಬಂದು ಗುದ್ದಿದ್ದಾರೆ ಎಂದು ಮತ್ತೊಮ್ಮೆ ಹೇಳಿದ್ದಾರೆ. ಹಾಗಾದರೆ ಯಾವುದು ಸತ್ಯ.? ಎಂದು ಛಲವಾದಿ ಪ್ರಶ್ನಿಸಿದರು.
ಸಚಿವರ ಪ್ರವಾಸ ಕಾರ್ಯಕ್ರಮ ಹಾಕಿಲ್ಲ, ಎಸ್ಕಾರ್ಟ್ ಕೂಡಾ ಇಲ್ಲ. ಬಹಳಷ್ಟು ದೊಡ್ಡ ಮೊತ್ತದ ಹಣ ಆ ಕಾರಿನಲ್ಲಿ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ. ಪೊಲೀಸರ ಬೆಂಗಾವಲಿನಲ್ಲಿ ತರಾತುರಿಯಿಂದ ಕಾರ್ ಕೊಂಡೊಯ್ಯಲಾಗಿದೆ.
ಯಾವುದೇ ಮಹಜರು ಮಾಡದೇ ಕಾರ್‌ನಲ್ಲಿದ್ದ ಬ್ಯಾಗ್‌ಗಳನ್ನು ತೆಗೆದುಕೊಂಡಿದ್ದಾರೆ. ಅದರಲ್ಲಿ ಭಾರಿ ಪ್ರಮಾಣದ ಹಣವಿತ್ತು ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಅಪಘಾತದ ಬಳಿಕ ವಿದ್ಯಮಾನಗಳು ಅನುಮಾನಕ್ಕೆ ಪುಷ್ಠಿ ನೀಡುವಂತಿದೆ.
ಬಹಳಷ್ಟು ಅನುಮಾನ, ಪೊಲೀಸರ ನಡೆಯ ಬಗ್ಗೆಯೂ ಗುಮಾನಿಯಿದೆ. ಹೀಗಾಗಿ ಪ್ರಕರಣದ ಬಗ್ಗೆ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದು ಛಲವಾದಿ ನಾರಾಯಣಸ್ವಾಮಿ ಒತ್ತಾಯಿಸಿದರು.