ಭೂಸವಳು ತಡೆಗೆ ಯೋಜನೆ: ಸಮಗ್ರ ಮರುಪೂರಣಕ್ಕೆ ಆದ್ಯತೆ, ಸಚಿವ ಕಾರಜೋಳ ಘೋಷಣೆ..

Karajola
Published on

ಬೆಂಗಳೂರು: ನೀರಾವರಿ ಸೃಜನೆ ಪ್ರದೇಶ ಹೆಚ್ಚಾದಂತೆ ಅತಿಯಾದ ನೀರು ಬಳಕೆ, ಏಕ ಬೆಳೆ ಅದರಲ್ಲೂ ಹೆಚ್ಚು ನೀರು ಬೇಡುವ ಬೆಳೆ ಉತ್ಪತ್ತಿ ಏರಿಕೆಯಾಗಿ ಫಲವತ್ತಾದ ಜಮೀನು ಸವಳಾಗುವ (ಕ್ಷಾರಯುಕ್ತ) ಪ್ರಮಾಣ ಹೆಚ್ಚುತ್ತಿದೆ. ಈ ಆತಂಕಕ್ಕೆ ಪರಿಹಾರವಾಗಿ ಸರ್ಕಾರ ಸಮಗ್ರ ಮರುಪೂರಣ ಯೋಜನೆ ರೂಪಿಸುವತ್ತ ಹೆಜ್ಜೆ ಇಟ್ಟಿದೆ. ಗುರುವಾರ ವಿಜಯವಾಣಿ ಕಚೇರಿಯಲ್ಲಿ ನಡೆದ ಸಂವಾದದಲ್ಲಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಈ ವಿಚಾರ ತಿಳಿಸಿದರು. ಸಮಗ್ರ ಮರುಪೂರಣ ಯೋಜನೆ ಸಂಬಂಧ ಅಧ್ಯಯನ ವರದಿ ತಯಾರಿಸಲು ಸೂಚನೆ ನೀಡಲಾಗಿದ್ದು, ವರದಿ ಕೈ ಸೇರಿದ ಬಳಿಕ ತೀರ್ಮಾನ ಪ್ರಕಟಿಸಲಾಗುತ್ತದೆ ಎಂದರು. ಇಲಾಖೆಯ ಯೋಜನೆಗಳು, ನೀರಾವರಿ ಯೋಜನೆಗಳಿಗೆ ಅಂಟಿರುವ ತೊಡಕು ನಿವಾರಣೆಗೆ ತಾವು ನಡೆಸಿರುವ ಪ್ರಯತ್ನಗಳ ವಿವರಣೆ ನೀಡುವ ಜತೆಯಲ್ಲೇ ಸಚಿವರು ಸವಳು ಪ್ರಮಾಣ ಹೆಚ್ಚುತ್ತಿರುವ ಸಮಸ್ಯೆಗೆ ಪರಿಹಾರ ಹುಡುಕಲು ಪ್ರಯತ್ನಿಸಿರುವ ಸಂಗತಿ ತಿಳಿಸಿದರು.

ಕೆರೆಗಳ ರಕ್ಷಣೆ: ಕೆರೆ ಸಂರಕ್ಷಣೆ ವಿಚಾರದಲ್ಲಿ ನೀರು ಬಳಕೆದಾರರ ಸಂಘದ ಮಾರ್ಗದರ್ಶನ ಪಡೆದು ಇಲಾಖೆಯಿಂದಲೇ ನಿರ್ವಹಣೆ ಮಾಡುವ ಉದ್ದೇಶವಿದೆ. ಹೇಗೆ ಅನುಷ್ಠಾನ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು. ಒಂದೊಮ್ಮೆಇದು ಸರಿ ಎನಿಸಿದರೆ ಭವಿಷ್ಯದಲ್ಲಿ ಸರ್ಕಾರದ ಕಡೆಯಿಂದಲೇ ದುರಸ್ಥಿ, ನಿರ್ವಹಣೆಯನ್ನು ಮಾಡಲಾಗುತ್ತದೆ. ನೀರು ಸಂರಕ್ಷಣೆ, ನೀರು ಬಿಡುಗಡೆ ಮತ್ತು ಇತರ ವಿಚಾರದಲ್ಲಿ ಮಾರ್ಗದರ್ಶನ ಮಾಡುವ ಅವಕಾಶ ನೀರು ಬಳಕೆದಾರರ ಸಂಘಕ್ಕಿರಲಿದೆ ಎಂದರು. ಈ ಹಿಂದೆ ನೀರು ಬಳಕೆದಾರರ ಸಂಘಕ್ಕೆ ಕೆರೆ ವಹಿಸಲಾಗಿತ್ತು, ಸರ್ಕಾರದಿಂದ ಅನುದಾನ ಬಳಸಿಕೊಂಡು ಒಂದಷ್ಟು ಕೆಲಸ ಮಾಡಿದ್ದರು. ಕಾಲಕ್ರಮೇಣ ಅಲ್ಲಿನ ವ್ಯವಸ್ಥೆ ಬಹತೇಕ ಕಡೆ ಹಾಳು ಬಿದ್ದಿದೆ. ಹೀಗೆ ಬಿಟ್ಟರೆ ಪರಿಸ್ಥಿತಿ ಗಂಭೀರವಾಗಲಿದೆ. ಈ ಕಾರಣಕ್ಕೆ ಬದಲಾವಣೆ ಮಾಡಬೇಕೆನಿಸಿದೆ ಎಂದು ಸಚಿವರು ವಿವರಿಸಿದರು.

ಇನ್ನು ಕೆರೆ ಸಂರಕ್ಷಣೆಯಲ್ಲಿ ಪ್ರಮುಖಪಾತ್ರ ವಹಿಸುತ್ತಿದ್ದ ನೀರಗಂಟಿ ವ್ಯವಸ್ಥೆ ಮರು ಸ್ಥಾಪಿಸುವ ಇಚ್ಛೆಯನ್ನೂ ಸಚಿವರು ವ್ಯಕ್ತಪಡಿಸಿದರು. ಕೆರೆ ಏರಿ ಸಂರಕ್ಷಣೆಗೆ ನೀರಗಂಟಿಗಳ ಪಾತ್ರ ಮಹತ್ವ ಇತ್ತು. ಅವರು ಕಾಳಜಿ ವಹಿಸಿದ್ದರಿಂದ ಬಹುಕಾಲ ಉಳಿಯುವಂತಾಗಿದೆ. ಈಗ ಕೆರೆಗಳ ರಕ್ಷಣೆ ಮಾಡುವ ದೊಡ್ಡ ಜವಾಬ್ದಾರಿ ಇದೆ ಎಂದರು.

ಏತ ನೀರಾವರಿಗೆ ಆದ್ಯತೆ: ಕಾವೇರಿ ನೀರಾವರಿ ನಿಗಮ ವ್ಯಾಪ್ತಿಯಲ್ಲಿ 24ಕ್ಕೂ ಹೆಚ್ಚು ಏತ ನೀರಾವರಿ ಯೋಜನೆಗಳಿದ್ದು, ವಿವಿಧ ಹಂತದಲ್ಲಿವೆ. ಕೆರೆ ತುಂಬಿಸುವ ಉದ್ದೇಶದಿಂದ ಕುಡಿಯುವ ನೀರಿನ ಸಲುವಾಗಿ ಕೈಗೆತ್ತಿಕೊಂಡಿರುವ ಈ ಯೋಜನೆಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಕಾರಜೋಳ ವಿವರಿಸಿದರು.

ಬಾಕಿ ಬಿಲ್ 10 ಸಾವಿರ ಕೋಟಿ ರೂ.: ಕೋವಿಡ್ ಸಂದರ್ಭ ಸೇರಿದಂತೆ ಇಲಾಖೆಯಲ್ಲಿ ಬಾಕಿ ಬಿಲ್ 10 ಸಾವಿರ ಕೋಟಿ ರೂ ಇದೆ. ಆದ್ಯತೆ ಮೇಲೆ ಬಿಲ್ ಕ್ಲಿಯರ್ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಸುಮಾರು 4 ಸಾವಿರ ಗುತ್ತಿಗೆದಾರರು ಇಲಾಖೆಯ ಕಾಮಗಾರಿಗಳ ಮೇಲೆ ಅವಲಂಬಿಸಿ ಜೀವನ ನಡೆಸುತ್ತಿದ್ದಾರೆ. ಈ ಬಾರಿ ಸಿಎಂ 300 ಕೋಟಿ ರೂ ಅನುದಾನ ನೀಡಿದ್ದು, ಅದನ್ನು 1 ಕೋಟಿ ರೂ. ತನಕ ಬಾಕಿ ಬಿಲ್ ಇರುವ ಸಣ್ಣ ಸಣ್ಣ ಗುತ್ತಿಗೆದಾರರಿಗೆ ನೀಡಬೇಕು. ದೊಡ್ಡ ಬಿಲ್ ಬಾಕಿ ಇರುವವರಿಗೆ ಕೊಡಬಾರದು ಎಂದು ಕಟ್ಟು ನಿಟ್ಟಿನ ಆದೇಶ ನೀಡಲಾಗಿದೆ. ಸಣ್ಣ ಪ್ರಮಾಣದ ಗುತ್ತಿಗೆದಾರರು ತೀವ್ರ ಸಂಕಷ್ಟದಲ್ಲಿರುತ್ತಾರೆ ಎನ್ನುವ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಂಡಿದ್ದು, ಅವರ ಬಳಿ ಕಾಫಿ ಕುಡಿಯುವುದನ್ನು ನಿರೀಕ್ಷೆ ಮಾಡದೆ ಬಿಲ್ ಕ್ಲಿಯರ್ ಮಾಡಬೇಕು ಎಂಬ ಸೂಚನೆ ನೀಡಲಾಗಿದೆ ಎಂದರು.

ನವಲೆ ಬಳಿ ಪರ್ಯಾಯ ಡ್ಯಾಂ: ತುಂಗಭದ್ರ ಜಲಾಶಯದಲ್ಲಿ 30 ಟಿಎಂಸಿಯಷ್ಟು ಹೂಳು ತುಂಬಿದೆ ಎಂದು ಅಂದಾಜಿಸಲಾಗಿದೆ. ಹೂಳು ತೆಗೆಯುವುದು ಯಾವ ದೃಷ್ಟಿಯಿಂದಲೂ ಸರಿಯಾದ ಕ್ರಮ ಅಲ್ಲ ಎಂಬ ತಜ್ಞರ ಸಲಹೆ ಮೇರೆಗೆ ನವಲೆ ಬಳಿ ಪರ್ಯಾಯ ಜಲಾಶಯವನ್ನು ನಿರ್ಮಾಣ ಮಾಡಲು ನಿರ್ಧರಿಸಿದ್ದು, ಅದಕ್ಕಾಗಿ ಡಿಪಿಆರ್ ಮಾಡಲಾಗುತ್ತಿದೆ. ತುಂಗಭದ್ರ ಜಲಾಶಯ ಮೂರು ರಾಜ್ಯಗಳಿಗೆ ಸೇರಿದ್ದು, ಆ ರಾಜ್ಯಗಳ ಅಭಿಪ್ರಾಯವನ್ನು ಕ್ರೋಢೀಕರಿಸಿಕೊಂಡು ಜಲಾಶಯ ನಿರ್ವಿುಸಲಾಗುವುದೆಂದು ಸಚಿವ ಕಾರಜೋಳ ವಿವರಿಸಿದರು.

ಎತ್ತಿನಹೊಳೆ ಮೊದಲ ಹಂತ ಪೂರ್ಣ: ನಮ್ಮಸರ್ಕಾರದ ಅಧಿಕಾರಾವಧಿ ಮುಗಿಯುವ ಹೊತ್ತಿಗೆ ಎತ್ತಿನಹೊಳೆ ಯೋಜನೆಯ ಮೊದಲ ಹಂತದ ಕಾಮಗಾರಿ ಪೂರ್ಣಗೊಳಿಸಲಾಗುವುದು. ಭೂಸ್ವಾಧೀನ ಪ್ರಕ್ರಿಯೆ ತಡವಾಗುತ್ತಿರುವುದು ಯೋಜನೆ ವಿಳಂಬಕ್ಕೆ ಕಾರಣ. ಸಕಲೇಶಪುರ ಬಳಿ ಕೇವಲ 2 ಎಕರೆ ಜಾಗಕ್ಕಾಗಿ ಯೋಜನೆ ಸ್ಥಗಿತಗೊಂಡಿತ್ತು. ಮತ್ತೊಂದು ಕಡೆ ಕೇವಲ 10 ಗುಂಟೆ ಜಾಗಕ್ಕಾಗಿ ತಕರಾರಿತ್ತು. ಇದೆಲ್ಲವನ್ನು ತಾವು ಸ್ಥಳಕ್ಕೆ ಭೇಟಿ ನೀಡಿದ್ದಾಗ ಪರಸ್ಪರ ಮಾತುಕತೆಯ ಮೂಲಕ ಇತ್ಯರ್ಥಪಡಿಸಿ ಯೋಜನೆಗೆ ಚಾಲನೆ ನೀಡಲಾಗಿದೆ ಎಂದು ಸಚಿವರು ಹೇಳಿದರು.

2 ಕೋಟಿ ರೂ. ನೀಡಿದ್ದರೆ ಸಾಕಿತ್ತು, ಬಿಜಾಪುರ ಜಿಲ್ಲೆ ನೀರಾವರಿ ಆಗುತ್ತಿತ್ತು: ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಆಗಿರುವ ಲೋಪ, ಅನ್ಯಾಯ ಅಷ್ಟಿಷ್ಟಲ್ಲ. ಆಗ ಕೇಂದ್ರದಲ್ಲಿ, ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಮೂರು ಕಡೆಯಲ್ಲಿಯೂ (ತ್ರಿಬ್ಬಲ್ ಇಂಜಿನ್) ಕಾಂಗ್ರೆಸ್ ಸರ್ಕಾರವೇ ಇತ್ತು. ಕೋಯ್ನಾ ಜಲಾಶಯ ಯೋಜನೆ ಮಾಡುವ ಸಂದರ್ಭದಲ್ಲಿ ಕೇವಲ 2 ಕೋಟಿ ರೂ ಹಣ ನೀಡಿದರೆ, ವಿಜಯಪುರ ಜಿಲ್ಲೆಗೆ ಸಹಜವಾಗಿ ಹರಿಯುವ ನೀರು ಬಳಸಿ ನಾಲೆ ಮೂಲಕ ನೀರಾವರಿ ಮಾಡಲಾಗುತ್ತಿತ್ತು. ಇಡೀ ಜಿಲ್ಲೆ ಸಮೃದ್ಧವಾಗುತ್ತಿತ್ತು. ಆದರೆ, ಆಗ ರಾಜ್ಯ ಆ ಹಣ ಕೊಡಲಿಲ್ಲ. ಕೇಂದ್ರವೂ ನೆರವಿಗೆ ಬರಲಿಲ್ಲ. ಪರಿಣಾಮ ಮಹಾರಾಷ್ಟ್ರ ಸರ್ಕಾರ ಈ ಯೋಜನೆ ಕೈ ಬಿಟ್ಟಿತು. ಈ ಕಾರಣಕ್ಕೆ ದಶಕಗಳಿಂದ ಈ ಜಿಲ್ಲೆ ನೀರಾವರಿಯಿಂದ ವಂಚಿತವಾಗಬೇಕಾಯಿತು. ಇದು ಕಾಂಗ್ರೆಸ್ ಮಾಡಿದ ಅನ್ಯಾಯವಲ್ಲದೆ ಮತ್ತೇನು? ಎಂದು ಸಚಿವರು ಪ್ರಶ್ನಿಸಿದರು.

ನಮ್ಮ ಅವಧಿಯಲ್ಲಿ ಅದು ಮಾಡಿಬಿಡುತ್ತೇನೆ, ಇದು ಮಾಡಿ ಬಿಡುತ್ತೇನೆಂದು ಹೋದಲ್ಲೆಲ್ಲ ಘೋಷಣೆ ಮಾಡುವ ಹುಚ್ಚು ಭ್ರಮೆಯಲ್ಲಿಲ್ಲ. ಬಹುತೇಕ ನೀರಾವರಿ ಯೋಜನೆಗಳು ವ್ಯಾಜ್ಯದಲ್ಲಿವೆ. ಬಿಕ್ಕಟ್ಟು ಬಗೆಹರಿಸಿ ನಮ್ಮ ಕಾಲಾವಧಿಯಲ್ಲಿ ಚಾಲನೆ ಕೊಡುತ್ತೇವೆ. ನೀರಾವರಿ ಪ್ರದೇಶ ಹೆಚ್ಚಿಸುತ್ತೇವೆ.

| ಗೋವಿಂದ ಕಾರಜೋಳ ಜಲಸಂಪನ್ಮೂಲ ಸಚಿವ

ಕಲ್ಯಾಣಕ್ಕೆ 100 ಇಂಜಿನಿಯರ್ಸ್: ಕಲ್ಯಾಣ ಕರ್ನಾಟಕ ಭಾಗದವರಿಗೊಂದು ಶುಭ ಸುದ್ದಿ ಇರುವುದಾಗಿ ತಿಳಿಸಿದ ಸಚಿವರು, 100 ಜನ ಸಹಾಯಕ ಇಂಜಿನಿಯರ್, ಕಿರಿಯ ಇಂಜಿನಿಯರ್ ನೇಮಕ ಮಾಡಿಕೊಳ್ಳಲು ಉದ್ದೇಶಿಸಲಾಗಿದೆ. ಕೆಪಿಎಸ್ಸಿ ಮೂಲಕ ನೇಮಕ ಮಾಡಿಕೊಳ್ಳಲಾಗುತ್ತದೆ. ಶೀಘ್ರವೇ ಪ್ರಕ್ರಿಯೆ ಆರಂಭಿಸಲಾಗುತ್ತದೆ ಎಂದು ವಿವರಿಸಿದರು.

ರಿಪೋರ್ಟ್ ಕಾರ್ಡ್

  1. ಕೃಷ್ಣ ಮೇಲ್ದಂಡೆ ಯೋಜನೆ ಕಾರ್ಯಗತಕ್ಕಾಗಿ ಭೂ ಸ್ವಾಧೀನ ಪ್ರಕ್ರಿಯೆಗೆ ವೇಗ ನೀಡಲಾಗಿದೆ. 20 ಹಳ್ಳಿಗಳ ಪುನರ್ವಸತಿಗೆ ಕ್ರಮಕೈಗೊಳ್ಳಲಾಗುತ್ತಿದೆ.
  2. 2018ರಿಂದ ಸಣ್ಣ ಗುತ್ತಿಗೆದಾರರಿಗೆ ಬಾಕಿ ಇರುವ ಮೊತ್ತವನ್ನು ಪಾವತಿ ಮಾಡಲು ಹಣ ಬಿಡುಗಡೆ ಮಾಡಲಾಗಿದೆ, ಹಣ ಪಾವತಿಯಲ್ಲಿ ಪಾರದರ್ಶಕತೆ ಕಾಯಲು ಸೂಚನೆ ನೀಡಲಾಗಿದೆ.
  3. ನೀರಾವರಿ ಯೋಜನೆಗಳ ವಿಷಯ ಕೋರ್ಟ್​ನಲ್ಲಿರುವು ದರಿಂದ ಪ್ರತಿಕ್ರಿಯೆ ನೀಡಿದರೆ ಅಡ್ಡಿಯೇ ಜಾಸ್ತಿ, ಅನುಷ್ಠಾನಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ.
  4. ಭದ್ರಾ ಮೇಲ್ದಂಡೆ ಯೋಜನೆ ರಾಷ್ಟ್ರೀಯ ಯೋಜನೆಯಾಗಿ ಘೋಷಿಸಲು ಅಗತ್ಯ ಪ್ರಕ್ರಿಯೆ ಮುಗಿದಿದೆ. ಕೇಂದ್ರದ ಅಂತಿಮ ಒಪ್ಪಿಗೆ ಬಾಕಿ ಇದೆ.
  5. ತುಂಗಭದ್ರಾ ಜಲಾಶಯದ ಹೂಳೆತ್ತುವುದು ಕಷ್ಟ ಸಾಧ್ಯ. ಹೀಗಾಗಿ ಹೊಸ ಜಲ ಸಂಗ್ರಹಾರವನ್ನು ನೆರೆ ರಾಜ್ಯಗಳ ಸಹಕಾರದಲ್ಲಿ ಸ್ಥಾಪಿಸಲು ಪ್ರಯತ್ನ ಸಾಗಿದೆ. ಡಿಪಿಆರ್ ತಯಾರಾಗುತ್ತಿದೆ.
  6. ಕೃಷ್ಣಾ ವ್ಯಾಪ್ತಿ 15 ಲಕ್ಷ ಎಕರೆ ನೀರಾವರಿಗೆ ಒಳಪಡಿಸುತ್ತೇವೆ.
  7. ಮೇಕೆದಾಟು ಹಾಗೂ ಮಹಾದಾಯಿ ಯೋಜನೆ ಜಾರಿ ಮಾಡಿಯೇ ಮಾಡುತ್ತೇವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net