

ಬೆಂಗಳೂರು: ಕೃಷಿ ಸಚಿವ ಬಿ.ಸಿ. ಪಾಟೀಲ್, ಪತ್ನಿ ಹಾಗೂ ಅಳಿಯನಿಗೂ ಕರೊನಾ ಸೋಂಕು ದೃಢಪಟ್ಟಿದೆ.
ಇದೀಗ ಬಂದ ವರದಿಯ ಪ್ರಕಾರ ನನಗೆ ಕರೊನಾ ಪಾಸಿಟಿವ್ ಎಂದು ದೃಢಪಟ್ಟಿದೆ. ಬೆಂಗಳೂರಿನ ನನ್ನ ನಿವಾಸದಲ್ಲಿ ಹೋಂ ಕ್ವಾರಂಟೈನ್ ಆಗುತ್ತಿದ್ದೇನೆ. ಕೊಪ್ಪಳ ಜಿಲ್ಲೆಗೆ ಇತ್ತೀಚೆಗೆ ಭೇಟಿ ನೀಡಿದ ಸಂದರ್ಭದಲ್ಲಿ, ನನ್ನ ಜತೆ ಆಗಮಿಸಿದ್ದ ಐದು ಸಿಬ್ಬಂದಿಗೂ ಕೂಡ ಸೋಂಕು ಖಚಿತವಾಗಿದೆ ಎಂದು ಬಿ.ಸಿ. ಪಾಟೀಲ್ ಟ್ವಿಟರ್ನಲ್ಲಿ ಮಾಹಿತಿ ನೀಡಿದ್ದಾರೆ.
ಅಲ್ಲದೇ, ಇತ್ತೀಚೆಗೆ ನನ್ನನ್ನು ಹಿರೇಕೆರೂರು ಹಾಗೂ ಕೊಪ್ಪಳ ಭಾಗದಲ್ಲಿ ಭೇಟಿಯಾದ ಪ್ರಥಮ ಮತ್ತು ದ್ವಿತೀಯ ಸಂಪರ್ಕಿತರು, ಯಾರಿಗಾದರೂ ಕೋವಿಡ್ ಲಕ್ಷಣ ಕಂಡುಬಂದಲ್ಲಿ ಕೂಡಲೇ ಪರೀಕ್ಷೆಗೆ ಒಳಗಾಗಿ ಎಂದು ಮನವಿ ಮಾಡಿದ್ದಾರೆ.
ಯಾರೂ ಆತಂಕ ಪಡುವ ಅಗತ್ಯವಿಲ್ಲ, ಕೋವಿಡ್ ವಿರುದ್ಧ ಗೆಲ್ಲುವ ವಿಶ್ವಾಸವಿದೆ, ಜೊತೆಗೆ ನಿಮ್ಮೆಲ್ಲರ ಆಶೀರ್ವಾದ ಮತ್ತು ಹಾರೈಕೆ ಇರಲಿ ಕೋರಿದ್ದಾರೆ.ಇದಕ್ಕೂ ಮುನ್ನ, ಇನ್ನೊಂದು ಟ್ವೀಟ್ ಮಾಡಿದ್ದ ಬಿ.ಸಿ. ಪಾಟೀಲ್, ನನ್ನ ಶ್ರೀಮತಿ, ಅಳಿಯ ಹಾಗೂ ಹಿರೇಕೆರೂರಿನ ನಿವಾಸದ ಸಿಬ್ಬಂದಿ ವರ್ಗದವರು ಸೇರಿ ಒಟ್ಟು ಐವರಿಗೆ ಕರೊನಾ ಪಾಸಿಟಿವ್ ಎಂದು ದೃಢಪಟ್ಟಿದೆ. ಅವರನ್ನು ನಿಗದಿತ ಕೋವಿಡ್ ಕೇರ್ ಸೆಂಟರ್ಗೆ ಸೇರಿಸಲಾಗಿದೆ. ಅವರೆಲ್ಲ ಬೇಗ ಗುಣಮುಖರಾಗಿ ಬರಲಿ ಎಂದು ಪ್ರಾರ್ಥಿಸುತ್ತೇನೆ. ನಿಮ್ಮೆಲ್ಲರ ಹಾರೈಕೆಯೂ ಇರಲಿ ವಿನಂತಿಸಿದ್ದರು.