ಕಲ್ಲುಕುಟಿಕರ ಜಾಗದಲ್ಲಿ ಗಣಿಗಾರಿಕೆ?

klr mains
ಯಂತ್ರಗಳನ್ನು ಬಳಕೆ ಮಾಡಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಸುತ್ತಿರುವುದು.
Published on

ಕಿರುವಾರ ಎಸ್​.ಸುದರ್ಶನ್​ ಕೋಲಾರ
ಕಲ್ಲು ಕುಟಿಕರ ಬಂಡೆಯ ಜಾಗದಲ್ಲಿ ಕೆಲ ಬಲಾಢ್ಯರು ಯಂತ್ರಗಳನ್ನು ಬಳಸುವ ಮೂಲಕ ಅಕ್ರಮವಾಗಿ ಕಲ್ಲು ಗಣಿಗಾರಿಕೆಯಲ್ಲಿ ತೊಡಗಿರುವ ಆರೋಪ ಕೇಳಿ ಬಂದಿದೆ.

ಕಲ್ಲು ಕುಟಿಕರ ಹೆಸರಿನಲ್ಲಿ ಮಾಲೂರಿನ ಕೆಲ ಪ್ರಭಾವಿಗಳು ಹಾಗೂ ಜನಪ್ರತಿನಿಧಿಗಳು ಕೋಟಿ ಕೋಟಿ ದುಡಿದುಕೊಳ್ಳುತ್ತಿದ್ದಾರೆ. ಇದೇ ಕಾರಣದಿಂದಾಗಿ ಸಾಂಪ್ರದಾಯಿಕವಾಗಿ ಕಲ್ಲು ಒಡೆಯುವ ವೃತ್ತಿಯಲ್ಲಿ ತೊಡಗಿಕೊಂಡಿರುವವರಿಗೆ ಕಾನೂನಾತ್ಮಕ ಬಲ ಇಲ್ಲ ಎಂಬ ಆರೋಪಗಳು ಕೇಳಿ ಬಂದಿವೆ.
ಜಿಲ್ಲೆಯ ಮಾಲೂರು ತಾಲೂಕಿನ ಟೇಕಲ್​ ಸುತ್ತಮುತ್ತ ಕಲ್ಲುಗಣಿಗಾರಿಕೆ ಹೆಚ್ಚಾಗಿದ್ದು, ರಾಜಕೀಯ ಪ್ರಭಾವ ಹೊಂದಿರುವ ಕೆಲವರು ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದಾರೆ. ಈ ಹಿಂದೆ, ನಿಯಮ ಉಲ್ಲಂಘಿಸಿ ಗಣಿಗಾರಿಕೆ ನಡೆಸುತ್ತಿದ್ದ ಸಂದರ್ಭದಲ್ಲಿ ಬೃಹತ್​ ಬಂಡೆಯೊಂದು ಉರುಳಿ ಕಾರ್ಮಿಕನೊಬ್ಬ ಮೃತಪಟ್ಟಿದ್ದ. ಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದ ಸರ್ಕಾರವು ಅಕ್ರಮ ಕಲ್ಲು ಗಣಿಗಾರಿಕೆ ಸ್ಥಗಿತಗೊಳಿಸಿತ್ತು.
ಕಲ್ಲುಕುಟುಕರ ಕೆಲಸ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಶಾಸಕ ಕೆ.ವೈ.ನಂಜೇಗೌಡ ಅವರನ್ನು ಭೇಟಿ ಮಾಡಿ ಕಾನೂನು ಪ್ರಕಾರ ಜಾಗ ನೀಡಬೇಕು, ಸಾಂಪ್ರದಾಯಿಕ ಕಲ್ಲು ಕುಟಿಕರ ಸಮಸ್ಯೆಗೆ ಸ್ಪಂದಿಸಬೇಕು ಎಂದು ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿದ್ದ ನಂಜೇಗೌಡ ಅವರು ಕಾನೂನು ಪ್ರಕಾರ ಜಾಗ ನೀಡಲು ಅಧಿಕಾರಿಗಳಿಗೆ ತಿಳಿಸಲಾಗುವುದು ಎಂದು ಭರವಸೆ ನೀಡಿದ್ದರು.
ಇದರ ನಡುವೆ, ಕೆಲ ಪ್ರಭಾವಿಗಳು ಸರ್ಕಾರದ ಮೇಲೆ ಒತ್ತಡ ತಂದು ಕಲ್ಲುಗಣಿಗಾರಿಕೆ ಅನುಮತಿ ನೀಡುವಂತೆ ಕೋರಿದ್ದರು. ಸಚಿವರು, ಮುಂದೆ ತೊಂದರೆಯಾಗದಂತೆ ಎಚ್ಚರವಹಿಸಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮೌಖಿಕವಾಗಿ ಸೂಚಿಸಿದ್ದಾರೆ ಎನ್ನಲಾಗಿದ್ದು, ಸಚಿವರ ನಡೆಯು ಸುತ್ತಮುತ್ತಲಿನ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಸ್ಪೋಟಕಗಳನ್ನು ಬಳಸಿ ಬಂಡೆಗಳನ್ನು ಸಿಡಿರುವ ದೃಶ್ಯ.
ಸ್ಪೋಟಕಗಳನ್ನು ಬಳಸಿ ಬಂಡೆಗಳನ್ನು ಸಿಡಿರುವ ದೃಶ್ಯ.

ಬಾಕ್ಸ್​…
113 ಪ್ಲಾಟ್​ಗಳ ಗುರುತು
ಟೇಕಲ್​ ಭಾಗದಲ್ಲಿ ನೂರಾರು ಕುಟುಂಬಗಳು ಸಾಂಪ್ರದಾಯಿಕ ಕಲ್ಲು ಕುಟ್ಟುವ ಮೂಲಕ ಜೀವನ ಕಟ್ಟಿಕೊಂಡಿದ್ದಾರೆ. ಕೆಲ ಸಂದರ್ಭಗಳಲ್ಲಿ ಸಾವು-ನೋವುಗಳು ಸಂಭವಿಸುತ್ತಿರುವ ಕಾರಣ ಆಗಾಗ ಕೆಲಸ ಸ್ಥಗಿತಗೊಳಿಸಲಾಗುತ್ತಿದೆ. ಇದು ಕಲ್ಲುಕುಟುಕರ ಮೇಲೂ ಪರಿಣಾಮ ಬೀರುತ್ತಿದೆ. ಕಲ್ಲು ಕುಟುಕರಿಗಾಗಿ 113 ಪ್ಲ್ಲಾಟ್​ ಗುರುತಿಸಲಾಗಿದೆ, ಅರ್ಜಿ ಸಲ್ಲಿಸಿರುವವರಿಗೆ ಆದ್ಯತೆ ಮೇರೆ ಜಾಗ ನೀಡುವಂತೆ ಸುಮಾರು ವರ್ಷಗಳಿಂದ ಮನವಿ ಸಲ್ಲಿಸಿಕೊಂಡು ಬಂದಿದ್ದರೂ ಸಹ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಬಲಾಢ್ಯರು, ರಾಜಕೀಯ ಒತ್ತಡಗಳಿಗೆ ಮಣಿದು ನಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಕಲ್ಲು ಕುಟಿಕರು ದೂರಿದ್ದಾರೆ.

ಕೋಟ್​…
ಪೊಲೀಸ್​ ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಕಲ್ಲು ಕುಟಿಕರ ಜಾಗದಲ್ಲಿ ಯಂತ್ರಗಳ ಬಳಕೆ ಮಾಡುವುದನ್ನು ನಿಲ್ಲಿಸಲಾಗುತ್ತಿದೆ. ಕಲ್ಲು ಕುಟಿಕರ ಪಟ್ಟಿ ಮಾಡಿದ್ದು, ಸದ್ಯದಲ್ಲೆ ಅಧಿಕೃತವಾಗಿ ಜಾಗ ನೀಡಿ ನಿಯಮಗಳ ಪ್ರಕಾರ ರಾಯಲ್ಟಿ ವಸೂಲಿ ಮಾಡಲಾಗುವುದು. -ರಾಜೇಶ್​, ಹಿರಿಯ ಭೂವಿಜ್ಞಾನಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ

ಕೋಟ್​…
ಗಣಿಗಾರಿಕೆಗೆ ಅನುಮತಿ ನೀಡಿರುವುದರಿಂದ ಪರಿಸರವು ನಾಶವಾಗಿ ಮನುಕುಲದ ಮೇಲೆ ಪರಿಣಾಮ ಬೀರುತ್ತಿದೆ. ಗಣಿಗಾರಿಕೆಯಿಂದ ರಾಜಕಾರಣಿಗಳಿಗೆ ಹಣ ಮಾಡಬೇಕು ಎಂಬ ಉದ್ದೇಶ ಬಿಟ್ಟರೆ, ಬಡವರಿಗೆ ಅನ್ಯಾಯವಾಗುತ್ತದೆ. ಅವರ ಸಮಸ್ಯೆಗೆ ಸ್ಪಂದಿಸಬೇಕು ಎಂಬ ಕಾಳಜಿಯಿಲ್ಲ. - ಡಾ.ನಾರಾಯಣಸ್ವಾಮಿ
ಬಂಡೂರು, ಸಮಾಜ ಸೇವಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net