ಸಾವಧಾನವೇ ಸಾಧನೆಯ ಸಾಧನ; 'ಐಎಫ್​ಎಸ್‌'ನಲ್ಲಿ 143ನೇ ರ‍್ಯಾಂಕ್‌ ಪಡೆದ 'ಸಚಿನ್ ಕೆ.ಎಲ್'| IFS

sachin ifs
Published on

ಚಿತ್ರದುರ್ಗ ; ಪದವಿ ಹಂತದಲ್ಲೇ ಯುಪಿಎಸ್​ಸಿ ಕನಸಿನ ಕದ ತಟ್ಟಿದ ಸಚಿನ್, ತಮಗೆ ಎದುರಾದ ಸವಾಲುಗಳನ್ನು ಸಾವಧಾನದಿಂದಲೇ ಬೇಧಿಸಿ 2024ರಲ್ಲಿನ ಐಎಎಫ್ಎಸ್ ಪರೀಕ್ಷೆಯಲ್ಲಿ ಯಶಸ್ಸು ಕಂಡಿದ್ದಾರೆ. ದೃಢ ನಿಲುವು, ಆತ್ಮವಿಶ್ವಾಸದ ಜತೆ ನಿರಂತರ ಪರಿಶ್ರಮಕ್ಕೆ ಅಣಿಯಾದ ಅವರು 143ನೇ ರ‍್ಯಾಂಕ್‌ ಮೂಲಕ ಭಾರತೀಯ ಅರಣ್ಯ ಸೇವೆ ಹುದ್ದೆ ದಕ್ಕಿಸಿಕೊಂಡಿದ್ದಾರೆ. ವಿಜಯವಾಣಿ ವಿದ್ಯಾರ್ಥಿ ಉದ್ಯೋಗ ಮಿತ್ರದ ಸಂಡೇ ಗೆಸ್ಟ್ ಆಗಿ ಸ್ಪರ್ಧಾಕಾಂಕ್ಷಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ.

ಸ್ಪರ್ಧಾತ್ಮಕ ಪರೀಕ್ಷಾ ಹಾದಿಯಲ್ಲಿ ಸಾಗುವ ಅಭ್ಯರ್ಥಿಗಳ ಪ್ರತಿ ಹೆಜ್ಜೆಯೂ ಸಾವಧಾನ ಬಯಸುತ್ತದೆ. ಆ ಸಾವಧಾನ ಸ್ಥಿತಿಗೆ ಒಗ್ಗಿಕೊಂಡು ಮುನ್ನಡೆದ ಸಚಿನ್ ಅವರ ಯಶಸ್ಸಿನ ಪಯಣ ಹಲವಾರು ಸ್ಪರ್ಧಾಳುಗಳಿಗೆ ನಿದರ್ಶನವಾಗಿದೆ. ಜೀವನದಲ್ಲಿ ಹಲವಾರು ಏರಿಳಿತವನ್ನು ಕಂಡ ಸಚಿನ್ ಪದವಿ ಹಂತದಲ್ಲೇ ಸ್ಪರ್ಧಾತ್ಮಕ ಪರೀಕ್ಷೆಯ ಸಿದ್ಧತೆಗೆ ಕದ ತಟ್ಟಿದರು. ಪ್ರಥಮಬಾರಿಗೆ 2022ರಲ್ಲಿ ಯುಪಿಎಸ್​ಸಿ ಪರೀಕ್ಷೆ ಎದುರಿಸಿ ಪರೀಕ್ಷಾ ಸ್ವರೂಪವನ್ನು ಅರಿತುಕೊಂಡಿದ್ದಾರೆ. 2023 ರಿಂದ ಸಿದ್ಧತೆ ಆರಂಭಿಸಿದ ಇವರಿಗೆ ಪ್ರಿಲಿಮ್ಸ್‌ನಲ್ಲಿ ಎದುರಾದ ಸಿ-ಸ್ಯಾಟ್ ತಯಾರಿಯಲ್ಲಿ ಏರುಪೇರಾದ ಕಾರಣ ಅಲ್ಲೂ ಯಶ ಕಾಣದೆ ಹಿಂದುಳಿದರು. ಆದರೇ ಅದನ್ನೇ ಸವಾಲಾಗಿ ತೆಗೆದುಕೊಂಡ ಸಚಿನ್ 2024ರಲ್ಲಿ ಐಎಫ್ಎಸ್ ಪರೀಕ್ಷೆ 143ನೇ ರ‍್ಯಾಂಕ್‌ ಪಡೆಯುವುದರೊಂದಿಗೆ ಗೆಲುವಿನ ದಡ ಸೇರಿದ್ದಾರೆ. ಇದಲ್ಲದೇ ಸಿವಿಲ್ಸ್ ಸಂದರ್ಶನದವರೆಗೂ ತೆರಳಿ ಪೆವಿಲಿಯನ್‌ಗೆ ತೆರಳಿದ್ದಾರೆ. ಭಾರತೀಯ ವಿದೇಶಾಂಗ ಸೇವೆಗೆ ಸೇರಬೇಕೆಂಬ ಅವರ ಆತ್ಮವಿಶ್ವಾಸ ಸಿವಿಲ್ಸ್ ತಯಾರಿಯನ್ನು ಜಾರಿಯಲ್ಲಿರಿಸಿದೆ. ನಿರಂತರ ಪ್ರಯತ್ನ, ಯಾವುದೇ ಸನ್ನಿವೇಶದಲ್ಲಿ ರಾಜಿಯಾಗದ ಆತ್ಮ ವಿಶ್ವಾಸವಿದ್ದರೇ ಸಾಧನೆ ಸುಲಭ ಎನ್ನುವುದು ಸಚಿನ್​ ಖಚಿತ ನುಡಿ.

ಪ್ರಿಲಿಮ್ಸ್ ಸಿದ್ಧತೆ..!

ಪರೀಕ್ಷಾ ಹಾದಿಯಲ್ಲಿ ಸಾಗುವ ನಮಗೆ ಪೂರ್ವಸಿದ್ಧತಾ ಪರೀಕ್ಷೆಯಲ್ಲಿನ ಪ್ರಶ್ನೆಗಳನ್ನು ಭೇದಿಸಲು ಹಲವಾರು ತಂತ್ರ ಹೆಣೆಯಬೇಕಾಗುತ್ತದೆ. ಅದರಲ್ಲಿ ಓದಿನ ಜತೆಗೆ ಸ್ಮಾರ್ಟ್ ವರ್ಕ್ ಅಗತ್ಯವಿರುತ್ತದೆ. ಪರೀಕ್ಷೆ ನಕ್ಷೆ ತಿಳಿಯಲು ಜಾಲತಾಣದ ಮೂಲಕ ಪರೀಕ್ಷಾ ವಿಧಾನದ ಅಗತ್ಯ ಸಂಪನ್ಮೂಲಗಳನ್ನು ಕ್ರೋಢಿಕರಿಸಕೊಂಡು, ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆ ಬಿಡಿಸುವುದರೊಂದಿಗೆ ಓದಿಗೆ ಬುನಾದಿ ಹಾಕಬೇಕು. ಪರೀಕ್ಷೆಯಲ್ಲಿ ಪ್ರತಿಶತ 100 ರಷ್ಟು ಅಂಕಗಳಿಸುವುದು ಕಷ್ಟಸಾಧ್ಯ. ಆದ್ದರಿಂದ ಕೆಲವು ಪ್ರಶ್ನೆನೆಗಳಿಗೆ ಆಪ್ಷನ್‌ಗಳ ಮೂಲಕವೇ ಉತ್ತರವನ್ನು ಪತ್ತೆಹಚ್ಚಬಹುದು. ಆದ್ದರಿಂದ ಈ ಹಂತದಲ್ಲಿ ಎಲಿಮಿನೇಷನ್ ಟೆಕ್ನಿಕ್ ಸಹ ಬಹಳ ಮುಖ್ಯವಾಗುತ್ತದೆ ಎನ್ನುತ್ತಾರೆ ಸಚಿನ್.

ಮೇನ್ಸ್‌ಗೆ ಸವ್ಯಸಾಚಿ ಕೌಶಲ ಬೇಕು..!

ಪ್ರಿಲಿಮ್ಸ್ ಹಾಗೂ ಮೇನ್ಸ್ ಪರೀಕ್ಷೆಗೆ ತಯಾರಿ ಪ್ರಾರಂಭದಿಂದಲೇ ಸಾಗಬೇಕು ಆಗ ಮಾತ್ರ ಸಮಯ ಸಂಪನ್ಮೂಲವನ್ನು ಅಚ್ಚುಕಟ್ಟಾಗಿ ಬಳಸಿಕೊಳ್ಳಬಹುದು. ಇನ್ನು ಮೇನ್ ಪರೀಕ್ಷಾ ಹಂತದಲ್ಲಿ ನಮಲ್ಲಿನ ವಿಶ್ಲೇಷಣಾ ಸಾಮರ್ಥ್ಯವನ್ನು ಬಯಸುತ್ತದೆ. ವೇಗದ ಬರವಣಿಗೆ ಕೇಳುವುದರಿಂದ ಅರ್ಜುನ ಬಿಲ್ಲನ್ನು ಬಳಸುವಂತೆ, ನಾವಿಲ್ಲಿ ಪೆನ್ನನ್ನು ಬಳಸುವ ಅಗತ್ಯವಿದೆ. ಆದ್ದರಿಂದ ಇಲ್ಲಿ ವರ್ಡ್ಸ್ ಮ್ಯಾನುಪುಲೇಷನ್ ಹಾಗೂ ದೀರ್ಘ ಬರವಣಿಗೆಯನ್ನು ಬಳಸುವುದರಿಂದ, ಆಯ್ಕೆಗೊಳಿಸಿದ ಐಚ್ಛಿಕ ವಿಷಯದ ಆಯ್ಕೆಯಲ್ಲಿ ನಮಗೆ ಅಪಾರವಾದ ಜ್ಞಾನ ಇರಬೇಕು ಇಲ್ಲವೇ ಆಸಕ್ತಿ ಇರಬೇಕು. ಆಗ ಮಾತ್ರ ಮುಖ್ಯ ಪರೀಕ್ಷೆಯಲ್ಲಿ ಯಶಗಳಿಸಬಹುದು ಎನ್ನುವುದು ಸಚಿನ್ ಅಭಿಪ್ರಾಯ.

ಸಂದರ್ಶನ ತಯಾರಿ ಹೇಗಿರಬೇಕು?

ಎರಡೂ ಘಟ್ಟಗಳನ್ನು ದಾಟಿದ ಮೇಲೆ ಬರುವ ಸಂದರ್ಶನ ನಮ್ಮ ಮೂಲ ನಿವಾಸ, ಪ್ರಚಲಿತ ಘಟನೆ ಜತೆ ನಾವು ಡಿಟೈಲ್ಡ್ ಅಪ್ಲಿಕೇಷನ್ ಫಾರ್ಮ್‌ನಲ್ಲಿ ನಮೂದಿಸಿರುವ ಅಂಶಗಳ ಮೇಲೆ ಹೆಚ್ಚಾಗಿ ನಡೆಯುತ್ತದೆ. ಆದರೇ ಪ್ರಚಲಿತ ಘಟನೆ ನಮ್ಮ ಮೂಲ ನಿವಾಸದ ಬಗ್ಗೆ ಪ್ರಶ್ನೆಗಳು ಎದುರಾಗುವ ನಿರೀಕ್ಷೆ ಇರುತ್ತದೆ. ಇಲ್ಲಿ ಪ್ರಶ್ನೆಗಳೇನೆ ಇರಲಿ, ಅದು ನಮ್ಮ ನಿಲುವು ಹಾಗೂ ಅಭಿಪ್ರಾಯವನ್ನೇ ಬಯಸುತ್ತದೆ. ಆದ್ದರಿಂದ ಪ್ರಚಲಿತ ಘಟನೆಗಳಿಗೆ ಪತ್ರಿಕೆಗಳು ಸಹಾಯಕವಾಗುತ್ತವೆ. ಅದರೊಂದಿಗೆ ನಾವು ಹುಟ್ಟಿ ಬಂದ ಸ್ಥಳದ ಇತಿಹಾಸವನ್ನು ನಾವು ಅಗತ್ಯವಾಗಿ ಅರಿಯಬೇಕು ಎನ್ನುತ್ತಾರೆ ಸಚಿನ್.

ಸಚಿನ್ ಅಪ್ಪ ಕೃಷಿಕ

ಗ್ರಾಮೀಣ ಸೊಗಡಿನಲ್ಲಿ ಬೆಳೆದ ಸಚಿನ್ ತನ್ನ ಹುಟ್ಟೂರು ಚಿತ್ರದುರ್ಗ ತಾಲೂಕಿನ ಕೋಂಡುರಿನಲ್ಲಿ ಬಾಲ್ಯ ಶಿಕ್ಷಣ ಪೂರೈಸಿದ್ದಾರೆ. ನಂತರ ದಾವನೆಗೆರೆಯ ತರಬಾಳು ಶಾಲೆಯಲ್ಲಿ ಪ್ರೌಢ ಶಿಕ್ಷಣ, ಬೆಂಗಳೂರಿನಲ್ಲಿ ಪಿಯು ಹಾಗೂ ಸುರತ್ಕಲ ಎನ್‌ಐಟಿಕೆಯಲ್ಲಿ ಬಿ.ಇ ಪದವಿ ಪೂರೈಸಿದ್ದಾರೆ. ತಂದೆ ಲೊಕೇಶ್ ಎಚ್.ಸಿ ಕೃಷಿಕರಾಗಿದ್ದಾರೆ. ತಾಯಿ ಪುಷ್ಪಾ ಆರ್.ಎಚ್ ಶಿಕ್ಷಕಿ, ಸಹೋದರಿ ಸ್ಪೂರ್ತಿಯನ್ನೊಳಗೊಂಡ ಪುಟ್ಟ ಕುಟುಂಬ ಇವರದು.

- ಭೀಮಸಿ ಕೋಳೆಪ್ಪನವರ https://www.vijayavani.net/indian-woman-says-she-leaves-london-for-this-reason

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net