ಮನುಷ್ಯನ ಸುಖ, ದುಖ:ಗಳಿಗೆ ಮನಸ್ಸು ಕಾರಣ

4 RAMBHAPURI PEETHA (1)
ಬಾಳೆಹೊನ್ನೂರಿನ ರಂಭಾಪುರಿ ಪೀಠದಲ್ಲಿ ನಡೆದ ಶ್ರೀ ಜಗದ್ಗುರು ರೇಣುಕ ವಿಜಯ ಪುರಾಣ ಪ್ರವಚನ ಧರ್ಮ ಸಮಾರಂಭದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.
Published on

ಬಾಳೆಹೊನ್ನೂರು: ಮನುಷ್ಯ ಜೀವನದಲ್ಲಿ ಸುಖ ಸಮೃದ್ಧಿಗಳು ಬೆಳೆದಂತೆ ಸಂಸ್ಕೃತಿ ಬೆಳೆಯಬೇಕು. ವಿದ್ಯೆ,ಬುದ್ಧಿ ಬೆಳೆದಂತೆ ಹೃದಯ ವಿಕಾಸಗೊಳ್ಳಬೇಕು. ಅಧಿಕಾರ, ಅಂತಸ್ತು ಏರಿದಂತೆ ನೀತಿಯ ಅಂತಸ್ತು ಬೆಳೆಯುವ ಅಗತ್ಯವಿದೆ ಎಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.
ಶ್ರಾವಣ 3ನೇ ಸೋಮವಾರ ಶ್ರೀಜಗದ್ಗುರು ರಂಭಾಪುರಿ ಪೀಠದಲ್ಲಿ ನಡೆದ ಶ್ರೀಜಗದ್ಗುರು ರೇಣುಕ ವಿಜಯ ಪುರಾಣ ಪ್ರವಚನ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಮನುಷ್ಯ ತನ್ನ ಜೀವನವನ್ನು ಸ್ವರ್ಗ ಮತ್ತು ನರಕ ಮಾಡಿಕೊಳ್ಳಲು ಅವನ ಮನಸ್ಸು ಕಾರಣ. ಮನಸ್ಸು ದುರ್ಬಲ ಮಾಡಿಕೊಳ್ಳದೇ ಛಲದಿಂದ ಸಮತೋಲನದಲ್ಲಿ ಹೆಜ್ಜೆ ಹಾಕಬೇಕಾಗುತ್ತದೆ. ಮನುಷ್ಯ ಜೀವನದಲ್ಲಿ ಹಲವಾರು ಸಮಸ್ಯೆ, ಸವಾಲುಗಳನ್ನು ಎದುರಿಸಿ ಬಾಳ ಬೇಕಾಗುತ್ತದೆ. ಆತ್ಮ ಬಲ, ಗುರು ಕಾರುಣ್ಯ ಮತ್ತು ನಿರಂತರ ಸಾಧನೆಯಿಂದ ಜೀವನದಲ್ಲಿ ಶ್ರೇಯಸ್ಸು ಕಾಣಲು ಸಾಧ್ಯ ಎಂದರು.
ಪುರಾಣ ಪ್ರವಚನ ಮಾಡಿದ ಮಾದನ ಹಿಪ್ಪರಗಿ ಹಿರೇಮಠದ ಶಾಂತವೀರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಜೀವನ ಶ್ರೇಯಸ್ಸಿಗೆ ಧರ್ಮವೇ ಮೂಲ. ಅರಿವು ಆದರ್ಶಗಳ ದಾರಿಯಲ್ಲಿ ಮುನ್ನಡೆಯಲು ಗುರು ಕಾರುಣ್ಯ ಅವಶ್ಯಕ. ಶಿವ ಪಥವನರಿಯಲು ಮೊದಲು ಗುರು ಪಥ ಬಹಳ ಮುಖ್ಯ. ಶ್ರೀ ಜಗದ್ಗುರು ರೇಣುಕಾಚಾರ್ಯರ ಜನ ಹಿತಾತ್ಮಕ ಸಾಧನೆ ಬೋಧನೆಗಳು ಉಜ್ವಲ ಬದುಕಿಗೆ ಕಾರಣವಾಗಿವೆ ಎಂದರು.
ಶ್ರೀಜಗದ್ಗುರು ರೇಣುಕಾಚಾರ್ಯ ಗುರಕುಲ ಸಾಧಕರಿಂದ ವೇದಘೋಷ, ಗಂಗಾಧರ ಹಿರೇಮಠ ಇವರಿಂದ ಭಕ್ತಿ ಗೀತೆ ಜರುಗಿತು. ಶಿಕ್ಷಕ ವೀರೇಶ ಕುಲಕರ್ಣಿ ನಿರೂಪಿಸಿದರು.
ಶ್ರಾವಣ ಪವಿತ್ರ ಧರ್ಮ ಸಮಾರಂಭದಲ್ಲಿ ಚನ್ನಗಿರಿ ಹಿರೇಮಠದ ಕೇದಾರ ಶಿವಶಾಂತವೀರ ಶಿವಾಚಾರ್ಯರು, ಕೂಡ್ಲಿಗಿ ತಾಲೂಕ ಅಲೂರು ಹಿರೇಮಠದ ಸಿದ್ಧಲಿಂಗ ಸ್ವಾಮೀಗಳು, ಉಟಗಿ ಶಿವಪ್ರಸಾದ ದೇವರು, ರೇವತ್‌ಗಾವ್ ವಿಶ್ವನಾಥ ದೇವರು, ಬಬಲಾದಿ ದಾನಯ್ಯ ದೇವರು ಪಾಲ್ಗೊಂಡು ನುಡಿನಮನ ಸಲ್ಲಿಸಿದರು. ಲಕ್ಷ್ಮೇಶ್ವರದ ಆನಂದ ಗಡ್ಡದ್ದೇವರಮಠ, ವಿರೂಪಾಕ್ಷಯ್ಯ ಅಗಡಿ, ಬಸವಕಲ್ಯಾಣದ ಪ್ರೊ.ದಯಾನಂದ ಶೀಲವಂತರ, ಬೀದರ ಮಂಜುನಾಥ, ಬೀರೂರು ಗಂಗಾಧರ, ಸೊರಬ ತಾಲೂಕಿನ ಸದ್ಭಕ್ತ ಮಂಡಳಿ ಸದಸ್ಯರು ಭಾಗವಹಿಸಿ ಶ್ರೀ ರಂಭಾಪುರಿ ಜಗದ್ಗುರುಗಳಿಂದ ಗುರುರಕ್ಷೆ ಸ್ವೀಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net