ಬಂಧನಕ್ಕೂ ಮುಕ್ತಿಗೂ ಮನಸ್ಸೇ ಕಾರಣ

ವಿಜಯವಾಣಿ (1) (1)
Published on

ಶ್ರೀರಾಮಕೃಷ್ಣ ಪರಮಹಂಸರ ಪ್ರಕಾರ ಮನಸ್ಸೇ ಬಂಧನಕ್ಕೆ ಕಾರಣ, ಮನಸ್ಸೇ ಮುಕ್ತಿಗೂ ಕಾರಣ. ಬ್ರಹ್ಮಸಮಾಜದ ಅಧಿನಾಯಕ ಕೇಶವಚಂದ್ರಸೇನ್​ನ ಗೃಹದಲ್ಲಿ ನಡೆದ ಸತ್ಸಂಗದ ಸಂದರ್ಭದಲ್ಲಿ ಭಕ್ತನ ಪ್ರಶ್ನೆಗೆ ಉತ್ತರಿಸುತ್ತ್ತ ಈ ವಿಚಾರವನ್ನು ನಾನಾ ರೀತಿಯ ಉದಾಹರಣೆಗಳ ಮೂಲಕ ಅವರು ವಿವರಿಸಿದ್ದಾರೆ. ಆ ಸಂಭಾಷಣೆ ಹೀಗಿತ್ತು.

ಭಕ್ತ : ಮಹಾಶಯರೇ, ಪೂರ್ಣ ತ್ಯಾಗ ಮಾಡದೆ ಇದ್ದರೆ ಭಗವಂತನ ಸಾಕ್ಷಾತ್ಕಾರ ಪಡೆಯಲಾಗುವುದಿಲ್ಲವೇ?

ರಾಮಕೃಷ್ಣರು: ಸತ್ಯವಾಗಿ ಹೇಳುತ್ತೇನೆ, ನೀವು ಪ್ರಾಪಂಚಿಕತೆಯಲ್ಲಿ ರುವಿರಿ. ದೋಷವಾದ್ದೇನಲ್ಲ, ಆದರೆ ನೀವು ಭಗವಂತನ ಕಡೆಗೆ ಮನಸ್ಸು ತಿರುಗಿಸಿ ಇಡಬೇಕು; ಇಲ್ಲದಿದ್ದರೆ ನೀವು ಜಯಶಾಲಿ ಗಳಾಗುವುದಿಲ್ಲ. ಒಂದು ಕೈಯಲ್ಲಿ ನಿಮ್ಮ ಕರ್ತವ್ಯವನ್ನು ಕೈಗೊಳ್ಳಿರಿ, ಇನ್ನೊಂದು ಕೈಯಿಂದ ಭಗವಂತನನ್ನು ಬಲವಾಗಿ ಹಿಡಿದುಕೊಳ್ಳಿ. ಕರ್ತವ್ಯ-ಕರ್ಮ ಮುಗಿದ ನಂತರ ಎರಡೂ ಕೈಗಳಿಂದ ಭಗವಂತನನ್ನು ಹಿಡಿದುಕೊಳ್ಳಿರಿ. ಎಲ್ಲಾ ಮನಸ್ಸಿನ ಮೇಲೆ ನಿಂತಿದೆ. ಮನಸ್ಸೇ ಬಂಧನಕ್ಕೆ ಕಾರಣ, ಮನಸ್ಸೇ ಮುಕ್ತಿಗೆ ಕಾರಣ. ಇಲ್ಲಿ ಪರಮಹಂಸರು ಒಂದು ಉದಾಹರಣೆ ನೀಡುತ್ತಾರೆ. ಒಬ್ಬಾತನ ಬದಿಯಲ್ಲಿ ಹೆಂಡತಿ, ಇನ್ನೊಂದು ಬದಿಯಲ್ಲಿ ಮಗಳು ಇರುತ್ತಾರೆ. ಒಬ್ಬಳಿಗೆ ಒಂದು ವಿಧದಲ್ಲಿ, ಇನ್ನೊಬ್ಬಳಿಗೆ ಮತ್ತೊಂದು ವಿಧದಲ್ಲಿ ಆತ ಪ್ರೀತಿ ತೋರಿಸುತ್ತಾನೆ. ಆದರೆ ಮನಸ್ಸು ಮಾತ್ರ ಒಂದೇ ಒಂದು. ನಾನು ಮುಕ್ತ ಪುರುಷ, ಸಂಸಾರದಲ್ಲಿ ಇದ್ದರೆ ತಾನೆ ಏನು, ಅರಣ್ಯದಲ್ಲಿ ನನಗಾವುದರ ಬಂಧನ? ಎಂಬುದಾಗಿ ಯಾರು ಸತತವಾಗಿ ಚಿಂತಿಸುತ್ತಾನೆಯೋ, ಆತ ಮುಕ್ತನಾಗಿ ಬಿಡುತ್ತಾನೆ ಎಂದು ತಿಳಿಸುತ್ತಾರೆ.

ಪರಮಹಂಸರ ಪ್ರಕಾರ ನಾವು ಮನಸ್ಸನ್ನು ಶುದ್ಧವಾಗಿಟ್ಟು ಕೊಂಡಿರಬೇಕು. ಶ್ರದ್ಧಾವಂತನಾಗಿ ಭಗವದ್ ಚಿಂತನೆಯಲ್ಲಿ ಅಹರ್ನಿಶಿ ತೊಡಗಿರಬೇಕು. ಭಗವನ್ನಾಮ ಜಪವೇ ಈ ಮನಸ್ಸಿನ ಶುದ್ಧಿಗೆ ಏಕೈಕ ಮಾರ್ಗ. ಕೇವಲ ಆಸೆ, ಆಕಾಂಕ್ಷೆಗಳನ್ನು ಈಡೇರಿಸು ಎಂದು ಪ್ರಾರ್ಥಿಸುವ ಬದಲು ಶುದ್ಧ ಮನಸ್ಸನ್ನು ನೀಡು ಎಂದು ಪ್ರಾರ್ಥಿಸಿಕೊಳ್ಳಬೇಕು. ರಾಮಕೃಷ್ಣರ ಪ್ರಕಾರ ಭಗವನ್ನಾಮ ಮಹಿಮೆಯಲ್ಲಿ ಅಪಾರ ಶ್ರದ್ಧೆ ಉಂಟಾಗಿಬಿಡಬೇಕು ಎಂದು ಪ್ರಾರ್ಥಿಸಬೇಕು. ರಾಮಕೃಷ್ಣರು ಭಗವನ್ನಾಮದ ಮಹತ್ವವನ್ನು ವಿವರಿಸುತ್ತಾರೆ. ಈ ಜಗತ್ತಿನಲ್ಲಿ ನಾವು ಸಾಮಾನ್ಯವಾಗಿ ಕಾಣುವುದು ಭಗವದ್ ಸ್ಮರಣೆ - ಅಂದರೆ ಮನೋಭಿಲಾಷೆಗಳೆಲ್ಲ ಈಡೇರಲಿ ಎಂದು ನಾಮಸ್ಮರಣೆಯನ್ನು ಮಾಡುವುದು. ಆದರೆ ನಾಮಸ್ಮರಣೆಯಿಂದ ಮನಸ್ಸು ನಿರ್ಮಲವಾಗಲಿ ಎಂದು ಹೃನ್ಮನಗಳಿಂದ ಜಪಿಸುವವರ ಸಂಖ್ಯೆ ತುಂಬಾ ವಿರಳ. ರಾಮಕೃಷ್ಣರ ಪ್ರಕಾರ ಭಗವನ್ನಾಮ ಮಹಿಮೆಯಿಂದ ಮನುಷ್ಯನ ದೇಹ ಮತ್ತು ಮನಸ್ಸು ಎಲ್ಲವೂ ಪರಿಶುದ್ಧವಾಗಿ ಬಿಡುತ್ತದೆ. ನಂತರ ಶುದ್ಧ ಮನಸ್ಸಿನಿಂದ ಭಗವದ್ದರ್ಶನ ಲಾಭ ದೊರೆಯುವುದರಲ್ಲಿ ಸಂದೇಹವೇ ಇಲ್ಲ.

ಈ ಅಂಶವನ್ನು ಮುಖ್ಯವಾಗಿ ಸಂಸಾರಿಗಳಿಗೆ ಈ ರೀತಿಯಲ್ಲಿ ಉಪದೇಶಿಸುತ್ತಾರೆ

ಸಂಸಾರದಲ್ಲಿರುವವರು ಒಮ್ಮೊಮ್ಮೆ ಹೋಗಿ ನಿರ್ಜನ ಪ್ರದೇಶದಲ್ಲಿ ವಾಸ ಮಾಡಬೇಕು. ಪ್ರಾಪಂಚಿಕತೆಯ ಹೊಸ್ತಿಲನ್ನು ದಾಟಿ ಹೋಗಿ ಏಕಾಂತವಾಗಿ ಇದ್ದು ಕನಿಷ್ಠ ಪಕ್ಷ ಒಂದು ಮೂರು ದಿನವಾದರೂ ಭಗವಂತನನ್ನು ಹೃನ್ಮನಗಳಿಂದ ಸ್ಮರಿಸಬೇಕು. ಪ್ರಾಪಂಚಿಕ ಸುಖಕ್ಕೆ ಅನೇಕಾನೇಕ ದುರಿತಗಳನ್ನು ಎದುರಿಸಲು ಬದ್ದರಾದಂತೆ, ಮನಃಶುದ್ಧಿಗೂ ಏಕಾಂತದಲ್ಲಿ ಭಗವನ್ನಾಮ ಸ್ಮರಣೆಗೆ ಮನಸ್ಸು ನೀಡಬೇಕು. ಈ ಪ್ರಕ್ರಿಯೆಯಲ್ಲಿ ಅನೇಕಾನೇಕ ತೊಡಕುಗಳು ಸಾಮಾನ್ಯ. ಆದಾಗ್ಯೂ ಸಾಧನೆ ಮಾಡಬೇಕು. ಈ ಪ್ರಕ್ರಿಯೆಯಲ್ಲಿ ಮನಸ್ಸು ಸ್ಥಿರವಾಗಿರಬೇಕು, ಶುದ್ಧವಾಗಿರಬೇಕು. ಆರಂಭದಲ್ಲಿ ಅನೇಕ ವಿಘ್ನಗಳು ಎದುರಾಗುತ್ತವೆ, ಧೃತಿಗೆಡಬಾರದು ಎಂದು ತಿಳಿಸಿ ತಮ್ಮದೇ ಆದ ವಿಶಿಷ್ಟ ರೀತಿಯ ಉದಾಹರಣೆ ನೀಡುತ್ತಾರೆ.

ಫುಟ್​ಪಾತಿನಲ್ಲಿ ಗಿಡ ಸಸಿಯಾಗಿರುವಾಗ ಅದಕ್ಕೆ ಬೇಲಿ ಹಾಕದೇ ಇದ್ದರೆ ಆಡು ಕುರಿಗಳು ತಿಂದುಬಿಡುತ್ತವೆ. ಗಿಡ ಸಸಿಯಾಗಿರುವಾಗ ಬೇಲಿ ಅವಶ್ಯಕ. ಬುಡ ದಪ್ಪವಾಗಿ, ಗಿಡ ಮರವಾಗಿ ಬೆಳೆದಾಗ ಅದಕ್ಕೆ ಬೇಲಿಯ ಅವಶ್ಯಕತೆ ಇರುವುದಿಲ್ಲ. ಆಗ ಆನೆ ತಂದು ಕಟ್ಟಿದರೂ ಅದಕ್ಕೆ ಏನೂ ಆಗದು ಎಂದು ವಿವರಿಸಿ ಮನಸ್ಸನ್ನು ಪರಿಶುದ್ಧಗೊಳಿಸುವ ಮಾರ್ಗವನ್ನು ತಿಳಿಸುತ್ತಾರೆ. ಆರಂಭದಲ್ಲಿ ಮನಸ್ಸಿನ ಚಂಚಲತೆ ಅಪಾರವಾಗಿರುತ್ತದೆ. ಆದರೆ ಅಭ್ಯಾಸ ಮತ್ತು ನಿಷ್ಠೆಯಿಂದ ಭಗವನ್ನಾಮ ಸ್ಮರಣೆಯನ್ನು ಸುದೀರ್ಘವಾಗಿ, ಅಹರ್ನಿಶಿ ನಡೆಸಿಕೊಂಡು ಬಂದಾಗಲೇ ಮನಸ್ಸು ಪರಿಶುದ್ಧವಾಗಿ ಬಿಡುತ್ತದೆ. ಮನಸ್ಸು ಪರಿಶುದ್ಧವಾಯಿತೆಂದರೆ ಈ ಬಂಧನದಿಂದ ಮುಕ್ತರಾಗಬಹುದು, ಮುಖ್ಯವಾದ ಅಂಶವೆಂದರೆ ಶುದ್ಧ ಮನಸ್ಸು. ಮನಸ್ಸು ಪ್ರಾಪಂಚಿಕತೆಯ ಸುಳಿಯಲ್ಲಿ ಸಿಲುಕಿದಾಗ ಪರಿತಪಿಸಬೇಕಾಗುತ್ತದೆ. ಮೊದಲು ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಿ. ತದನಂತರ ಭಗವನ್ನಾಮ ಸ್ಮರಣೆಯೊಂದಿಗೆ ಸಾಧನೆಯನ್ನು ಮುಂದುವರಿಸಿದಲ್ಲಿ ಶುದ್ಧ ಹೃದಯ, ಶುದ್ಧ ಭಕ್ತಿ ತಾನೇ ತಾನಾಗಿ ದೊರೆಯುತ್ತದೆ. ಇದೇ ಶುದ್ಧ ಮನಸ್ಸನ್ನು ಹೊಂದುವ ಸುಲಭ ಮಾರ್ಗ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net