

ಶಿಕಾರಿಪುರ: ಮನಸು ಆಸೆ, ಕನಸುಗಳ ಆಗರ. ಮನಸು ಅತ್ಯಂತ ಚಂಚಲ. ಮನಸಿನ ವೇಗದ ಜತೆ ಓಡಲು ಸಾಧ್ಯವಿಲ್ಲ. ಅಸಾಧ್ಯವಾದ ಮತ್ತು ಅಸಾಧುವಾದ ಬಯಕೆಗಳ ಜತೆಗೆ ಸಾಗುವ ಮನಸಿಗೆ ಕಡಿವಾಣ ಹಾಕಲು ಮನೋನಿಗ್ರಹದ ಅಗತ್ಯವಿದೆ ಎಂದು ಪಿಇಎಸ್ ಕಾಲೇಜಿನ ಆಪ್ತಸಮಾಲೋಚಕಿ ತನುಜಾ ಹೇಳಿದರು.
ಪಟ್ಟಣದಲ್ಲಿ ಬುಧವಾರ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ, ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯ ಐಕ್ಯೂಎಸಿ ಸಂಯೋಜಿತ ಮತ್ತು ಸಲಹೆ ಮತ್ತು ಮಾರ್ಗದರ್ಶನ ಘಟಕದಿಂದ ಆಯೋಜಿಸಿದ್ದ ಭಾವನೆಗಳ ನಿಗ್ರಹ ಮತ್ತು ನಿಯಂತ್ರಣದ ಪ್ರಥಮ ಚಿಕಿತ್ಸೆ ಕುರಿತು ಕಾರ್ಯಾಗಾರದಲ್ಲಿ ಮಾತನಾಡಿದರು.
ಮನಸು ನಿಯಂತ್ರಣದಲ್ಲಿದ್ದರೆ ದೇಹವೂ ನಿಯಂತ್ರಣದಲ್ಲಿರುತ್ತದೆ. ಮನಸು ನಿಯಂತ್ರಣ ತಪ್ಪಿದರೆ ಬದುಕು ಅಸಹನೀಯವಾಗುತ್ತದೆ. ಪ್ರಚಲಿತ ದಿನಗಳಲ್ಲಿ ಭಾವನೆಗಳನ್ನು ನಿಯಂತ್ರಣದಲ್ಲಿ ಇಡುವುದು ಅನಿವಾರ್ಯ. ಭಾವನೆಗಳು ನಿಯಂತ್ರಣದಲ್ಲಿ ಇಲ್ಲದಿರುವುದೇ ಮಾನವ ಸಂಬಂಧಗಳಲ್ಲಿನ ಬಿರುಕಿಗೆ ಕಾರಣ ಎಂದರು.
ಜನಸಾಮಾನ್ಯರು ಭಾವನೆಗಳ ಉದ್ವೇಗಕ್ಕೆ ಒಳಗಾಗುವುದು ದಿನನಿತ್ಯ ಜೀವನದಲ್ಲಿ ಸರ್ವೇಸಾಮಾನ್ಯ. ಭಾವನೆಗಳು ಉದ್ವೇಗಕ್ಕೆ ಒಳಪಟ್ಟಾಗ ನಮ್ಮ ಮನಸ್ಸನ್ನು ನಾವು ನಿಯಂತ್ರಿಸುವ ತಂತ್ರವನ್ನು ಪ್ರಶಿಕ್ಷಣಾರ್ಥಿಗಳಿಗೆ ಮಾರ್ಗದರ್ಶನ ಮತ್ತು ತರಬೇತಿ ನೀಡಿದರು. ವಿವಿಧ ಸನ್ನಿವೇಶದಲ್ಲಿ ವಿದ್ಯಾರ್ಥಿಗಳನ್ನು ಶಿಕ್ಷಕರು ಹೇಗೆ ಅರ್ಥ ಮಾಡಿಕೊಳ್ಳಬೇಕು. ಅದಕ್ಕೆ ವಿದ್ಯಾರ್ಥಿಗಳಿಗೆ ಶಿಕ್ಷಕರು ಪರಿಹಾರವನ್ನು ನೀಡುವಂತಹ ವಿಧಾನ ಅರಿಯುವದು ಬಹಳ ಮುಖ್ಯ ಎಂದರು.
ಶಿಕ್ಷಕರು ತರಗತಿಯಲ್ಲಿ ವಿದ್ಯಾರ್ಥಿಗಳ ಪ್ರತಿಭೆಯನ್ನು ಅರ್ಥಮಾಡಿಕೊಳ್ಳಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಒಂದೊಂದು ಪ್ರತಿಭೆಗಳಿರುತ್ತವೆ. ಅವುಗಳನ್ನು ಗುರುತಿಸುವ ಹಾಗೂ ಮುಖ್ಯವಾಹಿನಿಗೆ ತರುವ ಜವಾಬ್ದಾರಿ ಶಿಕ್ಷಕರದಾಗಿರುತ್ತದೆ. ಇಲ್ಲಿ ಶಿಕ್ಷಕರು ವಿದ್ಯಾರ್ಥಿಯನ್ನು ಋಣಾತ್ಮಕವಾಗಿ ನೋಡದೆ ಅವರನ್ನು ಭಾವನಾತ್ಮಕವಾಗಿ ಕಲಿಕೆಯೆಡೆಗೆ ಪ್ರೇರೇಪಣೆ ಮಾಡುವ ಬೋಧನೆ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ. ಬುದ್ಧಿಶಕ್ತಿಗೆ ಗಮನ ನೀಡಿದಂತೆ, ವಿದ್ಯಾರ್ಥಿಯ ಭಾವನಾತ್ಮಕ ಕಾರ್ಯಗಳಿಗೂ ಉತ್ತಮ ಸಂವಹನ ಬೆಳೆಸಿಕೊಳ್ಳಬೇಕಾಗುತ್ತದೆ ಎಂದು ತಿಳಿಸಿದರು.
ಕಾಲೇಜಿನ ಪ್ರಾಚಾರ್ಯ ಡಾ. ಜಿ.ಎಸ್.ಶಿವಕುಮಾರ ಹಾಗೂ ಬೋಧಕ ವರ್ಗದವರು ಪಾಲ್ಗೊಂಡಿದ್ದರು.