

ನಂಜನಗೂಡು: ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳು ವಿದ್ಯಾರ್ಥಿಗಳ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಸದೃಢಗೊಳಿಸಲು ಸಹಕಾರಿ ಎಂದು ಮೈಸೂರು ವಿಶ್ವವಿದ್ಯಾನಿಲಯದ ಪ್ರಾಚ್ಯ ವಸ್ತು ಸಂಶೋಧನಾಲಯದ ನಿವೃತ್ತ ನಿರ್ದೇಶಕ ಡಾ.ಶಿವರಾಜಪ್ಪ ಹೇಳಿದರು.
ನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಸಾಂಸ್ಕೃತಿಕ, ಕ್ರೀಡಾ, ರಾಷ್ಟ್ರೀಯ ಸೇವಾ ಯೋಜನೆ, ರೆಡ್‌ಕ್ರಾಸ್ ಸಮಿತಿಗಳ ಸಮಾರೋಪ ಸಮಾರಂಭವನ್ನು ಉಧ್ಘಾಟಿಸಿ ಮಾತನಾಡಿದರು.
ರಾಷ್ಟ್ರೀಯ ಸೇವಾ ಯೋಜನೆಗಳು, ಮತ್ತು ಕ್ರೀಡಾ, ಸಾಂಸ್ಕೃತಿಕ ಚಟುವಟಿಕೆಗಳಿಂದ ನಿಮಗೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲು ಅವಕಾಶಗಳನ್ನು ಕಲ್ಪಿಸಿಕೊಡುತ್ತದೆ. ಜತೆಗೆ ಜೀವನದಲ್ಲಿ ಸಂಯಮ, ತಾಳ್ಮೆ ಪಾಠವನ್ನು ಕಲಿಸುವುದರೊಂದಿಗೆ ವಿದ್ಯಾರ್ಥಿಗಳ ಆರೋಗ್ಯವನ್ನು ಸದೃಢಗೊಳಿಸುತ್ತವೆ. ಅಲ್ಲದೆ ವಿದ್ಯಾರ್ಥಿಗಳ ಜೀವನದಲ್ಲಿ ತುಂಟಾಟ ಸಹಜ. ಆದರೆ ಅದರೊಂದಿಗೆ ಉತ್ತಮ ಜೀವನ ರೂಪಿಸಿಕೊಳ್ಳುವ ಜವಾಬ್ದಾರಿ ನಿಮ್ಮ ಮೇಲಿದೆ. ಪಾಲಕರ ಪರಿಶ್ರಮ ನೆನಪಿನಲ್ಲಿಟ್ಟುಕೊಂಡು ಪ್ರತಿಯೊಬ್ಬರೂ ಸಾಧನೆಯ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.
ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಸಮಾರಂಭದಲ್ಲಿ ಕಾಲೇಜಿನ ಪ್ರಾಂಶುಪಾಲೆ ರೇಣುಕಾಬಾಯಿ, ರಂಗಭೂಮಿ ಕಲಾವಿದ ಜಿ.ಜಗದೀಶ್‌ಕುಮಾರ್, ಗಾಯಕ ಪಿ.ಕೆ.ಧನುಷ್, ಸಾಂಸ್ಕೃತಿಕ ವೇದಿಕೆ ಸಂಚಾಲಕ ಜಗದೀಶ್, ಪ್ರಾಧ್ಯಾಪಕರಾದ ಎಸ್.ಮಂಜು, ಡಾ.ಎನ್.ಎಸ್.ಮಹದೇವಪ್ರಸಾದ್, ಡಿ.ಕೆ.ಉಷಾ, ಈಶಕುಮಾರ್, ಡಾ.ಎಚ್.ಆರ್.ಹೇಮಲತಾ, ಡಿ.ಎಸ್.ಶ್ರೀಧರ್, ಹರೀಶ್ ಮತ್ತಿತರರಿದ್ದರು.