ವಲಸಿಗರಿಗೆ ಅಮೆರಿಕ ವೀಸಾಘಾತ

Visa 8 dec 19
Published on

ವಾಷಿಂಗ್ಟನ್: ಭಾರತೀಯ ಮಾಹಿತಿ ತಂತ್ರಜ್ಞಾನ ಉದ್ಯೋಗಿಗಳಿಗೆ ನೆರವಾಗುತ್ತಿದ್ದ ಎಚ್-1ಬಿ ಮತ್ತು ಎಲ್1 ವೀಸಾ ಸಹಿತ ವಿದೇಶಿಗರ ಉದ್ಯೋಗ ವೀಸಾಗಳನ್ನು ಡೊನಾಲ್ಡ್ ಟ್ರಂಪ್ ಆಡಳಿತ ಸೋಮವಾರ ತಾತ್ಕಾಲಿಕವಾಗಿ ರದ್ದುಪಡಿಸಿದ್ದು ಅಮೆರಿಕದಲ್ಲಿ 5,25,000ಕ್ಕೂ ಅಧಿಕ ಉದ್ಯೋಗಗಳು ಸ್ವದೇಶಿಯರಿಗೆ ಮುಕ್ತವಾಗುವ ನಿರೀಕ್ಷೆಯಿದೆ. ಎಚ್-1ಬಿ, ಎಚ್-4, ಎಚ್-2ಬಿ, ಜೆ ಮತ್ತು ಎಲ್ ವೀಸಾ ಸಹಿತ ಅನೇಕ ಜನಪ್ರಿಯ ವಲಸೆಯೇತರ ವೀಸಾಗಳನ್ನು ಡಿಸೆಂಬರ್​ವರೆಗೆ ತಾತ್ಕಾಲಿಕವಾಗಿ ರದ್ದು ಮಾಡುವ ಆದೇಶವನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊರಡಿಸಿದ್ದಾರೆ. ಕರೊನಾ ಹಾವಳಿಯಿಂದ ಆರ್ಥಿಕತೆ ಕುಂಠಿತ ಗೊಂಡಿದ್ದು, ಆದಷ್ಟು ಬೇಗ ಅಮೆರಿಕನ್ನರಿಗೆ ಉದ್ಯೋಗ ಮರಳಿ ಸಿಗಬೇಕೆಂದು ಟ್ರಂಪ್ ಆಡಳಿತ ಬಯಸುತ್ತಿತ್ತು.

ಅಮೆರಿಕ ಅಧ್ಯಕ್ಷರ ಕ್ರಮವು ನಿರಾಶಾದಾಯಕವಾದುದು. ನಾವು ವಲಸಿಗರ ಪರವಾಗಿ ನಿಲ್ಲುತ್ತೇವೆ ಹಾಗೂ ಎಲ್ಲರಿಗೂ ಅವಕಾಶ ವಿಸ್ತರಿಸಲು ಪ್ರಯತ್ನಿಸುತ್ತೇವೆ. | ಸುಂದರ್ ಪಿಚ್ಚೈ,                   ಆಲ್ಪಾಬೆಟ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ.

ಹಲವು ಉದ್ಯೋಗ ವೀಸಾಗಳ ತಾತ್ಕಾಲಿಕ ರದ್ದತಿಯಿಂದಾಗಿ ಗಮನಾರ್ಹ ಸಂಖ್ಯೆಯ ಉದ್ಯೋಗಗಳು ದೇಶೀಯರಿಗೆ ಲಭ್ಯವಾಗಲಿದೆ ಎಂದು ಶ್ವೇತಭವನದ ಅಧಿಕಾರಿ ತಿಳಿಸಿದ್ದಾರೆ. ಇದು ‘ಅಮೆರಿಕ ಚೇತರಿಕೆಯ ಪ್ರಥಮ’ ಪ್ರಯತ್ನವಾಗಿದ್ದು ವರ್ಷಾಂತ್ಯದೊಳಗೆ ಇನ್ನಷ್ಟು ವೀಸಾಗಳನ್ನು ರದ್ದುಪಡಿಸಲು ಟ್ರಂಪ್ ಆದೇಶ ಹೊರಡಿಸಲಿದ್ದಾರೆ ಎಂದುಹೇಳಿದ್ದಾರೆ. ‘ಕೆಲವು ಪ್ರಕರಣಗಳನ್ನು ಹೊರತುಪಡಿಸಿದರೆ, ಅಪಾರ ಸಂಖ್ಯೆಯ ವಿದೇಶಿ ಕಾರ್ವಿುಕರು ಅಮೆರಿಕಕ್ಕೆ ಬರುವುದಕ್ಕೆ ನಾವು ಅವಕಾಶ ನೀಡಬಾರದು. ಅದರಲ್ಲೂ ವಿಶೇಷವಾಗಿ ಅನೇಕ ಅಮೆರಿಕನ್ನರು ಉದ್ಯೋಗ ಕಳೆದುಕೊಂಡಿರುವ ಸಂದರ್ಭದಲ್ಲಿ ಈ ರೀತಿ ಮಾಡಲಾಗದು’ ಎಂದು ಅಧಿಕಾರಿಗಳು ಹೇಳಿದ್ದಾರೆ. ಟ್ರಂಪ್ ಆಡಳಿತದ ಕ್ರಮಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಇದು ‘ದೂರದೃಷ್ಟಿಯಿಲ್ಲದ ಕ್ರಮ’ ಎಂದು ಟ್ವಿಟರ್ ಹಾಗೂ ಅಮೆಜಾನ್ ವರ್ಣಿಸಿವೆ.

ವೀಸಾ ವಿವರ ಎಚ್-1ಬಿ ವೀಸಾ ಹೈಟೆಕ್ ವೀಸಾ ಆಗಿದೆ. ಎಚ್-4 ವೀಸಾ ಎಚ್-1ಬಿ, ಎಚ್-2ಬಿ ಸಹಿತ ಇತರ ವೀಸಾ ಹೊಂದಿದ ದಂಪತಿಗೆ ಸಂಬಂಧಿಸಿದ್ದು ಎಚ್-2ಬಿ ವೀಸಾ ಕಡಿಮೆ ಕೌಶಲ್ಯ ಹೊಂದಿದವರಿಗೆ ಸಂಬಂಧಿಸಿದ ವೀಸಾ ಎಚ್-2ಬಿ ವೀಸಾ ಬಹುತೇಕವಾಗಿ ಆಹಾರ ಸೇವಾ ಕೈಗಾರಿಕೆಯಲ್ಲಿ ಒಳಗೊಂಡವರಿಗೆ ಸಂಬಂಧಿಸಿದ್ದು

ಭಾರತೀಯರಿಗೆ ಸಿಹಿ

  • ಅಮೆರಿಕದಲ್ಲಿ ನೆಲೆಸಿರುವ 3 ಲಕ್ಷ ಭಾರತೀಯ ವೀಸಾದಾರರಿಗೆ ಲಾಭ ನಿರೀಕ್ಷೆ
  • ಟ್ರಂಪ್ ಹೊರಡಿಸಿದ ಹೊಸ ಆದೇಶದಿಂದಾಗಿ ಕುಶಲ ಕಾರ್ವಿುಕರ ಕೊರತೆಯಾಗಲಿದೆ. ಹಾಗಾಗಿ, ಎಚ್-1ಬಿ ವೀಸಾ ಹೊಂದಿರುವ ಭಾರತೀಯರು ಹೆಚ್ಚಿನ ವೇತನ ಮತ್ತು ಇತರ ಸೌಲಭ್ಯಗಳಿಗೆ ಬೇಡಿಕೆಯಿಡಬಹುದಾಗಿದೆ
  • ಅಮೆರಿಕದ ಬೆಳವಣಿಗೆಯಲ್ಲಿ ವಲಸೆಯೇತರ ಕಾರ್ವಿುಕರ ಕೊಡುಗೆ ಅತ್ಯಮೂಲ್ಯವಾದುದು ಎಂದು ಫೆಡರಲ್ ರಿಸರ್ವ್, ರಾಷ್ಟ್ರೀಯ ವಿಜ್ಞಾನಗಳ ಅಕಾಡೆಮಿ ಮತ್ತು ಬ್ರೂಕಿಂಗ್ ಫೌಂಡೇಷನ್ ಸಹಿತ ಅನೇಕ ಸಂಘಟನೆಗಳ ಅಧ್ಯಯನ ತಿಳಿಸಿದೆ
  • ಹೊಸ ನೀತಿಯಿಂದಾಗಿ ಅನೇಕ ಸೇವೆಗಳು ಭಾರತದತ್ತ ಹೊರಳಲಿವೆ. ಸ್ಥಳೀಯ ಪ್ರತಿಭೆಗಳ ಕೊರತೆಯಿಂದಾಗಿ ಹೊಸ ಸವಾಲುಗಳು ಎದುರಾಗಲಿವೆ ಹಾಗೂ ಹೊರಗುತ್ತಿಗೆ ಅನಿವಾರ್ಯವಾಗಲಿದೆ
  • ಅಮೆರಿಕದಲ್ಲಿ ನೆಲೆಸಿರುವ ಭಾರತದ ಅತ್ಯುನ್ನತ ಪ್ರತಿಭಾವಂತ ನೌಕರರಿಗೆ ಭಾರತದಲ್ಲಿ ಹೆಚ್ಚಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಬೇಡಿಕೆಯಿದೆ

ಸುಧಾರಣೆಗೆ ನಿರ್ದೇಶನ: ಎಚ್-1ಬಿ ವೀಸಾ ವ್ಯವಸ್ಥೆ ಸುಧಾರಿಸಿ ಪ್ರತಿಭೆ ಆಧರಿತ ವಲಸೆ ನೀತಿಯತ್ತ ಮುಂದುವರಿಯುವಂತೆ ಅಧ್ಯಕ್ಷ ಟ್ರಂಪ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಉನ್ನತ ಕೌಶಲ ಹೊಂದಿರುವ ಉದ್ಯೋಗಿಗಳಿಗೆ ಆದ್ಯತೆ ನೀಡುವುದು ಈ ಕ್ರಮದ ಉದ್ದೇಶವಾಗಿದೆ. ಅಮೆರಿಕನ್ನರ ಉದ್ಯೋಗ ರಕ್ಷಿಸುವುದು ಕೂಡ ಉದ್ದೇಶವಾಗಿದೆ. ಹೆಚ್ಚು ವೇತನದ ಆಫರ್ ನೀಡಲಾಗುವ ಕಾರ್ವಿುಕರಿಗೆ ಆದ್ಯತೆ ನೀಡಲಾಗುತ್ತದೆ. ಅತ್ಯುನ್ನತ ಕೌಶಲ ಹೊಂದಿರುವವರ ಅರ್ಜಿಗಳನ್ನಷ್ಟೇ ಈ ನೀತಿಯಡಿ ಪರಿಗಣಿಸಲಾಗುತ್ತದೆ ಎಂಬುದು ಶ್ವೇತ ಭವನದ ವಿವರಣೆ.

ಆದೇಶವೇನು?: ಕೆಲಸದಿಂದ ತೆಗೆದು ಹಾಕಲಾಗುವ ಅಂತಿಮ ಆದೇಶ ಪಡೆದ ಹಾಗೂ ಅಮೆರಿಕದಲ್ಲಿ ಅಪರಾಧ ನಡೆಸಿದ್ದಕ್ಕಾಗಿ ಗಡಿಪಾರು ಮಾಡಲು ಅರ್ಹರಾದ ಎಲ್ಲರ ಉದ್ಯೋಗ ಪರವಾನಗಿಗಳನ್ನು (ವರ್ಕ್ ಪರ್ವಿುಟ್) ರದ್ದು ಮಾಡುವಂತೆ ಟ್ರಂಪ್ ಆಂತರಿಕ ಭದ್ರತಾ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ವಿಭಾಗವೊಂದರಲ್ಲೇ 50,000ಕ್ಕೂ ಹೆಚ್ಚು ಉದ್ಯೋಗಗಳು ಮುಕ್ತವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net