

ನವದೆಹಲಿ: ಟೈಲರ್ ಕನ್ಹಯ್ಯ ಲಾಲ್ ಹತ್ಯೆಗೂ ಮುನ್ನವೇ ಮಹಾರಾಷ್ಟ್ರದಲ್ಲಿ ಮತ್ತೊಬ್ಬ ಹಿಂದೂ ವ್ಯಕ್ತಿಯ ಕತ್ತು ಸೀಳಿ ದುಷ್ಕರ್ಮಿಗಳು ಕೊಂದಿರುವ ಪ್ರಕರಣ ಈಗ ಎನ್ಐಎ ಅಂಗಳಕ್ಕೆ ತಲುಪಿದೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಪ್ರಕರಣವನ್ನು ಎನ್ಐಎಗೆ ಒಪ್ಪಿಸಿದ್ದು, ತನಿಖೆಗೆ ಆದೇಶಿಸಿದ್ದಾರೆ. ಈವರೆಗೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು, ಪ್ರಮುಖ ಆರೋಪಿಗಾಗಿ ಬಲೆ ಬೀಸಿದ್ದಾರೆ.
ಕನ್ಹಯ್ಯ ಲಾಲ್ ಕೊಲೆಯಾಗುವ ಒಂದು ವಾರದ ಮೊದಲೇ ಅಂದರೆ, ಜೂ.21ರಂದು ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿ 54 ವರ್ಷದ ರಸಾಯನಶಾಸ್ತ್ರಜ್ಞ ಉಮೇಶ್ ಪ್ರಹ್ಲಾದರಾವ್ ಅವರು ಅಂದು ರಾತ್ರಿ ಅಂಗಡಿ ಬಾಗಿಲು ಹಾಕಿ ಹೊರಡುವ ವೇಳೆ ದುಷ್ಕರ್ಮಿಗಳು ಕತ್ತು ಸೀಳಿ ಕೊಲೆ ಮಾಡಿದ್ದಾರೆ. ಇದನ್ನು ಹಂತಕರು ವಿಡಿಯೋ ಮಾಡಿಕೊಂಡಿದ್ದರು. ನಂತರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದರು. ಈ ಪೋಸ್ಟ್ ಮುಸ್ಲಿಮರು ಸದಸ್ಯರಾಗಿದ್ದ ವಾಟ್ಸಪ್ ಗ್ರೂಪ್ ನಲ್ಲೂ ಷೇರ್ ಆಗಿತ್ತು. ನೋಡ ನೋಡುತ್ತಿದ್ದಂತೆ ಹಂತಕರ ಕೃತ್ಯ ಎಲ್ಲೆಡೆ ವ್ಯಾಪಿಸಿ, ಕೊನೆಗೆ ಹತ್ಯೆಯಾದ ಕೊಲ್ಹೆ ಅವರ ಪುತ್ರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರಸ್ತುತ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮುದಸಿರ್ ಅಹಮದ್ (22), ಶಾರುಖ್ ಪಠಾಣ್ (25), ಅಬ್ದುಲ್ ತೌಫಿಕ್ (24) ಶೋಯಬ್ ಖಾನ್ (22) ಮತ್ತು ಅತಿಬ್ ರಶೀದ್ (22) ಎಂಬುವವರನ್ನು ಬಂಧಿಸಿದ್ದಾರೆ. ಪ್ರಮುಖ ಆರೋಪಿ ತಲೆಮರೆಸಿಕೊಂಡಿದ್ದಾನೆ. (ಏಜೆನ್ಸೀಸ್)