

ಉಡುಪಿ: ಮಂಗಳೂರು ವಿಶ್ವವಿದ್ಯಾಲಯ ನೀಡುವ ಅಂಕಪಟ್ಟಿಯಲ್ಲಿ ತಪ್ಪು ಪುನರಾವರ್ತನೆಯಾಗುತ್ತಿದ್ದು, ಇದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ತೊಂದರೆಯಾಗುತ್ತಿದೆ. ಲೋಪದೋಷಗಳನ್ನು ಸರಿಪಡಿಸುವಂತೆ ಆಗ್ರಹಿಸಿ ಶನಿವಾರ ಎಂಜಿಎಂ ಕಾಲೇಜಿನ ವಿದ್ಯಾರ್ಥಿಗಳು ಸಹಿ ಸಂಗ್ರಹ ಅಭಿಯಾನ ನಡೆಸಿದರು.
ಕಾಲೇಜಿನ ನೂರಾರು ವಿದ್ಯಾರ್ಥಿಗಳು ತರಗತಿಗಳಿಗೆ ತೆರಳಿ ವಿದ್ಯಾರ್ಥಿಗಳಿಂದ ಸಹಿಯನ್ನು ಸಂಗ್ರಹಿಸಿದರು. ಮಣಿಪಾಲದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ಜಿಲ್ಲಾಧಿಕಾರಿಯವರ ಪರವಾಗಿ ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್ ಮನವಿಯನ್ನು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿದ್ಯಾರ್ಥಿ ಮುಖಂಡರು, ಬಿ.ಎಸ್ಸಿ ವಿದ್ಯಾರ್ಥಿಗಳಿಗೆ ಗರಿಷ್ಟ ಅಂಕ 50 ಇರುವ ವಿಷಯದಲ್ಲಿ 53 ಅಂಕ ನೀಡಿ ಆನ್ ಲೈನ್ ನಲ್ಲಿ ಫಲಿತಾಂಶ ಪ್ರಕಟಗೊಂಡಿತ್ತು. ಈ ಬಗ್ಗೆ ವಿವಿಯ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಕಾಲೇಜಿನ ಬಿ.ಎಸ್ಸಿ ಮತ್ತು ಬಿಝ್ರ್ ಸಿ( bzc) ವಿಭಾಗದ 46 ವಿದ್ಯಾರ್ಥಿಗಳ ಅಂಕಪಟ್ಟಿಯಲ್ಲಿ ಪಾಠವೇ ಇಲ್ಲದ ಬೈಯೋ ಟೆಕ್ನಾಲಜಿ ಪ್ರಾಯೋಗಿಕ ವಿಷಯಕ್ಕೆ ಅಂಕವನ್ನು ನೀಡಿ, ಫಲಿತಾಂಶ ಪ್ರಕಟಿಸಿದ್ದಾರೆ. ಅಂಕಪಟ್ಟಿಯಲ್ಲಿಯೂ ಇದೇ ತಪ್ಪು ಮಾಡಿದ್ದಾರೆ. ಜೊತೆಗೆ ವಿದ್ಯಾರ್ಥಿ ವೇತನವನ್ನು ಬಿಡುಗಡೆ ಮಾಡುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಕೆಲವು ಕೋರ್ಸ್ ಗಳಿಗೆ ಸೇರ್ಪಡೆಗೊಳ್ಳುವ ಅಂತಿಮ ದಿನಾಂಕದ ಒಳಗೆ ವಿವಿ ಅಂಕಪಟ್ಟಿ ನೀಡದೇ, ವಿದ್ಯಾರ್ಥಿಗಳು ಶೈಕ್ಷಣಿಕ ವರ್ಷ ನಷ್ಟವಾಗುತ್ತಿದೆ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಎಬಿವಿಪಿ ಉಡುಪಿ ನಗರ ಸಹ ಕಾರ್ಯದರ್ಶಿ ಶ್ರೀವಸ್ಸ, ಮುಖಂಡರಾದ ಕಾರ್ತಿಕ್, ಶಶಾಂಕ್, ಲ್ಯಾರಿ ಎನ್.ಎಮ್, ಧನುಷ್, ಅನುರೂಪ್, ನೀರಜ್, ಸನತ್, ರವೀಶ್, ವಿಜೇತಾ, ಯತೀಶ್, ಪ್ರತೀಕ್, ಪ್ರಣವ್, ದಿಶಾಯಿಣಿ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.