ಬೆವರು ಬರಬಾರದೆಂದು ಆಪರೇಷನ್ ಮಾಡಿಸಿಕೊಂಡ ಮಾಡೆಲ್! 23 ವರ್ಷಕ್ಕೇ ಅಂತ್ಯವಾಯಿತು ಬದುಕು!

model
Published on

ಮೆಕ್ಸಿಕೋ: ಬಾಡಿ ಬಿಲ್ಡಿಂಗ್ ಮಾಡುವವರಿಗೆ ಬೆವರು ಬರಬಾರದೆಂದರೆ ಹೇಗೆ ಹೇಳಿ? ಕಷ್ಟ ಪಟ್ಟು ಕಸರತ್ತು ಮಾಡಿ ದೇಹ ಬೆಳೆಸುವ ಬಾಡಿ ಬಿಲ್ಡರ್​ಗಳಲ್ಲಿ ಬೆವರು ಹರಿಯುವುದು ಮಾಮೂಲಿ. ಆದರೆ ಆ ಬೆವರೇ ಬರಬಾರದು ಎಂದು ಆಪರೇಶನ್ ಮೊರೆ ಹೋದ ಯುವತಿಯೊಬ್ಬಳಿಗಾದ ತೊಂದರೆಯನ್ನು ಕೇಳಿದರೆ ನೀವು ಗಾಬರಿಯಾಗುತ್ತೀರ.

ಮೆಕ್ಸಿಕೋದ ಒಡಾಲಿಸ್ ಸ್ಯಾಂಟೋಸ್ ಮೆನಾ(23) ಹೆಸರಿನ ಯುವತಿ ಚಿಕ್ಕ ವಯಸ್ಸಿನಲ್ಲಿಯೇ ಒಳ್ಳೆಯ ಸಾಧನೆ ಮಾಡಿದಾಕೆ. ಮಾಡೆಲ್ ಆಗಿ, ಬಾಡಿ ಬಿಲ್ಡರ್ ಆಗಿ ಗುರುತಿಸಿಕೊಂಡಾಕೆ. ಸಾಕಷ್ಟು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದ್ದ ಆಕೆಗೆ ಸೋಶಿಯಲ್ ಮೀಡಿಯಾದಲ್ಲೂ ಲಕ್ಷಾಂತರ ಹಿಂಬಾಲಕರಿದ್ದರು. ಈ ಮಧ್ಯೆ ಆಕೆ ಒಂದು ಸ್ಕಿನ್​ ಕೇರ್ ಕ್ಲಿನಿಕ್​ ಜತೆ ಟೈ ಅಪ್ ಮಾಡಿಕೊಳ್ಳುತ್ತಾಳೆ.

ಆ ಸ್ಕಿನ್ ಕೇರ್ ಕ್ಲಿನಿಕ್​ನ ಸ್ಪೆಷಾಲಿಟಿ ಬೆವರು ಬಾರದಿರುವಂತೆ ಆಪರೇಷನ್ ಮಾಡುವುದಂತೆ. ಅದಕ್ಕೆ ಈಕೆಯನ್ನೇ ಬ್ರ್ಯಾಂಡ್ ರೀತಿಯಲ್ಲಿ ತೆಗೆದುಕೊಂಡಿ ಕ್ಲಿನಿಕ್ ಒಡಾಲಿಸ್​ಗೆ ಆಪರೇಷನ್ ಮಾಡಿದೆ. ಇನ್ನು ಮುಂದೆ ಎಷ್ಟೇ ಕಸರತ್ತು ಮಾಡಿದರೂ ಬೆವರು ಬರುವುದಿಲ್ಲ, ಬೆವರಿನ ಕೆಟ್ಟ ವಾಸನೆಯಿಂದ ಮುಕ್ತಿ ಸಿಗುತ್ತದೆ ಎನ್ನುವ ಖುಷಿಯಿಂದ ಆಕೆ ಕೂಡ ಆಪರೇಷನ್ ಮಾಡಿಸಿಕೊಂಡಿದ್ದಾಳೆ. ಆದರೆ ದುರಾದೃಷ್ಟವೆಂದರೆ ಆಕೆಯ ದೇಹಕ್ಕೆ ಆಪರೇಷನ್​ನಿಂದ ಕೆಲ ದುಷ್ಪರಿಣಾಮ ಉಂಟಾಗಿದೆ. ಸಾವಿರಾರು ಕನಸು ಕಂಡಿದ್ದ ಯುವತಿ 23ನೇ ವಯಸ್ಸಿಗೇ ಕಾರ್ಡಿಯಾಕ್ ಅಟ್ಯಾಕ್​ಗೆ ಸಿಲುಕಿದ್ದಾಳೆ. ಕೃತಕ ಆಕ್ಸಿಜನ್ ವ್ಯವಸ್ಥೆ ಮಾಡಿಕೊಟ್ಟು, ಆಕೆಯನ್ನು ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಮಾಡಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಆಕೆ ಕೊನೆಯುಸಿರೆಳೆದಿದ್ದಾಳೆ. ಈ ವಿಚಾರದಲ್ಲಿ ಮೆಕ್ಸಿಕೋ ಪೊಲೀಸರು ಹೆಚ್ಚಿನ ತನಿಖೆಯನ್ನು ಆರಂಭಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net