

ಬೆಂಗಳೂರು: ಲಾಕ್ಡೌನ್ ಹಿನ್ನೆಲೆಯಲ್ಲಿ ಕಾಂಪೌಡ್ ಒಂದರಲ್ಲಿ ಬಂಧಿಯಾಗಿರುವ ಮೆಟ್ರೋ ರೈಲು ಕಾಮಗಾರಿಯ ಕಾರ್ಮಿಕರು ತಮ್ಮ ಊರಿಗೆ ಕಳುಹಿಸುವಂತೆ ಪ್ರತಿಭಟನೆ ನಡೆಸಿದ್ದಾರೆ.
ಬೊಮ್ಮನಹಳ್ಳಿಯಲ್ಲಿರುವ ಖಾಲಿ ನಿವೇಶನದ ಕಾಂಪೌಂಡ್ನಲ್ಲಿ ಒಂದುವರೆ ತಿಂಗಳಿಂದ ಬೀಡುಬಿಟ್ಟಿರುವ ಕಾರ್ಮಿಕರು ಊರಿಗೆ ಕಳುಹಿಸುವಂತೆ ಆಗ್ರಹಿಸಿ ಧರಣಿ ನಡೆಸಿದರು.
ವೇಳೆ ಕಾರ್ಮಿಕರು ಹಾಗೂ ಗುತ್ತಿಗೆದಾರರ ನಡುವೆ ಮಾತಿನ ಚಕಮಕಿ ಕೂಡ ನಡೆಯಿತು ಎಂದು ತಿಳಿದು ಬಂದಿದೆ.
ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಕಾರ್ಮಿಕರನ್ನು ಸಮಧಾನಪಡಿಸಿದ್ದಾರೆ.
ಮೆಟ್ರೋ ಕಾಮಗಾರಿಗೆ ರಾಜ್ಯದ ವಿವಿಧ ಜಿಲ್ಲೆ ಹಾಗೂ ಉತ್ತರ ಭಾರತದ ಕಡೆಗಳಿಂದ ಗುತ್ತಿಗೆದಾರರು ಕಾರ್ಮಿಕರನ್ನು ಕರೆಸಿಕೊಂಡು ಕೆಲಸ ಮಾಡಿಸುತ್ತಿದ್ದರು. ಲಾಕ್ಡೌನ್ ನಂತರ ಕಾಮಗಾರಿ ಸ್ಥಗಿತಗೊಂಡಿದ್ದರಿಂದ ಕಾರ್ಮಿಕರು ಸಮೀಪದಲ್ಲಿ ನಿರ್ಮಾಣವಾಗಿದ್ದ ಟೆಂಟ್ಗಳಲ್ಲಿ ಆಶ್ರಯ ಪಡೆದಿದ್ದರು. ಕಾರ್ಮಿಕರಿಗೆ ಗುತ್ತಿಗೆದಾರರು ಆಹಾರ ಪೂರೈಕೆ ಮಾಡುತ್ತಿರಲಿಲ್ಲ. ಹೀಗಾಗಿ ಕಾರ್ಮಿಕರು ತಮ್ಮ ಊರಿಗೆ ಕಳುಹಿಸುವಂತೆ ಕೋರಿದ್ದರು. ಆದರೆ ಗುತ್ತಿಗೆದಾರರು ಒಪ್ಪಿರಲಿಲ್ಲ. ಹೀಗಾಗಿ ಕಾರ್ಮಿಕರು ಪ್ರತಿಭಟನೆ ನಡೆಸಿದರು.
ಪೊಲೀಸರು ಮಧ್ಯ ಪ್ರವೇಶ ಮಾಡಿ ಕಾರ್ಮಿಕರನ್ನು ಸ್ವಂತ ಊರುಗಳಿಗೆ ಕಳುಹಿಸುವ ವ್ಯವಸ್ಥೆ ಮಾಡುತ್ತಿದ್ದಾರೆ. (ದಿಗ್ವಿಜಯ ನ್ಯೂಸ್)